ಸೊಲ್ಲಾಪುರ: ಸ್ವಚ್ಛತೆ ಇರುವಲ್ಲಿ ದೇವರ ವಾಸವಿರುತ್ತದೆ. ಸ್ವಚ್ಛತೆಯಿಂದ ಆರೋಗ್ಯ ಹಾಗೂ ಆರೋಗ್ಯದಿಂದ ಸಮೃದ್ಧಿ ಸಾಧ್ಯವಾಗುತ್ತದೆ. ಶಿವರಾತ್ರಿಯ ದಿನದಂದು ಜನರು ದೇವಸ್ಥಾನಗಳಿಗೆ ಹೋಗುತ್ತಾರೆ ಆದರೆ ಶಿವರಾತ್ರಿಯಂದು ಗ್ರಾಮವನ್ನು ಸ್ವಚ್ಛಗೊಳಿಸಿ ಇಡೀ ಗ್ರಾಮವನ್ನೇ ದೇವಸ್ಥಾನವನ್ನಾಗಿ ಮಾಡುವ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.
ಸದಲಾಪುರ ಗ್ರಾಮವು ಆದಷ್ಟು ಬೇಗ ನೂರಕ್ಕೆ ನೂರರಷ್ಟು ಬಯಲು ಶೌಚಮುಕ್ತ ಗ್ರಾಮವಾಗಿ ಇತರರಿಗೆ ಆದರ್ಶವಾಗಬೇಕು ಎಂದು ಅಕ್ಕಲಕೋಟ ತಾಲೂಕಿನ ಘಟವಿಕಾಸ ಅಧಿಧಿಕಾರಿ ಉತ್ತಮರಾವ್ ವಾಘಮೋಡೆ ಗ್ರಾಮಸ್ಥರಿಗೆ ಕರೆನೀಡಿದ್ದಾರೆ. ತಾಲೂಕಿನ ಸದಲಾಪುರ ಗ್ರಾಮದಲ್ಲಿ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಶಿವಾ ಸಂಘಟನೆ ಸದಲಾಪುರ ಸಂಯುಕ್ತ ಆಶ್ರಯದಲ್ಲಿ ಗ್ರಾಮಸ್ವಚ್ಛತಾ ಅಭಿಯಾನ ಹಾಗೂ ಸಂತ ಗಾಡಗೆಬಾಬಾ ಜಯಂತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭಕ್ಕೂ ಮೊದಲು ಆದರ್ಶ ಕನ್ನಡ ಬಳಗದ ಸದಸ್ಯರು, ಸದಲಾಪುರ ಗ್ರಾಮಸ್ಥರು ಸೇರಿಕೊಂಡು ಇಡೀ ಊರನ್ನು ಗುಡಿಸಿ ಸ್ವಚ್ಛಗೊಳಿಸಿದರು. ಕಟ್ಟಿಕೊಂಡಿದ್ದ ಚರಂಡಿಗಳನ್ನು ಮುಕ್ತಗೊಳಿಸಿದರು. ನಂತರ ನಡೆದ ವೇದಿಕೆಯ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿ ಆಗಮಿಸಿದ್ದ ಬಸವರಾಜ ತುಳಜಾಪುರೆ ಮಾತನಾಡಿ, ಮುಂದಿನ ಜನ್ಮದ ಚಿಂತೆಯಲ್ಲಿ ಇಂದಿನ ಜನ್ಮವನ್ನು ಹೊಲಸಿನಲ್ಲಿ ಕಳೆಯದೇ ಇಂದೇ ಸ್ವಚ್ಛತೆಗಾಗಿ ಪಣತೊಡಬೇಕು ಎಂದರು.
ಸಾಹಿತಿ ಗಿರೀಶ ಜಕಾಪುರೆ ಮಾತನಾಡಿ, ಯುವಕರು ಗುಟಕಾ ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ದುಶ್ಚಗಳಿಗೆ ಬಲಿಯಾಗಬಾರದು. ಜನರು ಪ್ಲಾಸ್ಟಿಕ್ ಬಳಸಿ, ಅದನ್ನು ತಿಪ್ಪೆಗೆ ಎಸೆದು, ಪ್ಲಾಸ್ಟಿಕ್ ಬೆರೆತ ಗೊಬ್ಬರವನ್ನು ಹೊಲಕ್ಕೆ ಹಾಕುತ್ತಿದ್ದಾರೆ. ಇದರಿಂದ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ನಾವು ಸ್ವಚ್ಛತಾ ಅಭಿಯಾನದ ನಿಮಿತ್ತವಾಗಿ ಗುಟಕಾ ಸೇವನೆ ಹಾಗೂ ಪ್ಲಾಸ್ಟಿಕ್ ನಿಷೇಧಿಧಿಸುವ ಪ್ರತಿಜ್ಞೆ ಮಾಡಬೇಕು ಎಂದರು.
ಸದಲಾಪುರ ಗ್ರಾಪಂ. ಅಧ್ಯಕ್ಷ ಯಲ್ಲಪ್ಪಾ ಗೌಳಿ ಅಧ್ಯಕ್ಷತೆ ವಹಿಸಿದ್ದರು. ಗುರುನಿಂಗಪ್ಪಾ ಪಾಟೀಲ ಪ್ರತಿಮಾ ಪೂಜೆ ಸಲ್ಲಿಸಿದರು. ತದನಂತರ ಬಳಗದ ಶರಣಪ್ಪಾ ಫುಲಾರಿ ಅವರು ಕುಸ್ತಿಯಲ್ಲಿ ರಾಜ್ಯ ಚಾಂಪಿಯನ್‌ಳಾಗಿರುವ ಕುಮಾರಿ ಧರತಿ ಬನಸೋಡೆ ಹಾಗೂ ಓಟದಲ್ಲಿ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಪಡೆದ ರೂಪಾಲಿ ಭಜೆ ಅವರನ್ನು ಆದರ್ಶ ಬಳಗದ ವತಿಯಿಂದ ಗೌರವಿಸಿದರು.
ಬಸವರಾಜ ಧನಶೆಟ್ಟಿ ಅವರು ಗ್ರಾಮದಲ್ಲಿ ಶೌಚಾಲಯವನ್ನು ಕಟ್ಟಿ ಅವನ್ನು ಬಳಸುತ್ತಿರುವ ಮೂರು ಜನ ಗ್ರಾಮಸ್ಥರನ್ನು ಸನ್ಮಾನಿಸಿದರು. ಬಳಗದ ಸದಸ್ಯರಾದ ವಿದ್ಯಾಧರ ಗುರವ ಪ್ರಸ್ತಾವನೆ ಮಾಡಿದರು. ಸಂತೋಷ ಪರೀಟ ಸ್ವಾಗತಿಸಿದರು. ಗ್ರಾಮಸೇವಕ ಎಸ್. ಆರ್. ಜಕ್ಕಿಕೋರೆ ಅನುಮೋದಿಸಿದರು. ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ ವಂದಿಸಿದರು. ಧೂಳಪ್ಪಾ ಭಜೆ ನಿರೂಪಿಸಿದರು.