ಕಕ್ಕೇರಾ: 12ನೇ ಶತಮಾನ ಕುರಿತು ಅವಲೋಕಿಸಿದಾಗ ಶರಣರ ವಿಚಾರ-ಆಚಾರ, ದೇವಾಲಯ ನೆನಪಾಗುತ್ತವೆ. ಆದರೆ ಕಕ್ಕೇರಾದಲ್ಲಿ ವಿಶಿಷ್ಟವಾಗಿ ಶಿವಶರಣ ಡೋಹರ ಕಕ್ಕಯ್ಯ ದೇವಾಲಯ ಇದ್ದು, ಜೀರ್ಣೋದ್ಧಾರ ಇಲ್ಲದೆ
ಸೊರಗುತ್ತಿದೆ.
ಹನ್ನೆರಡನೇ ಶತಮಾನದಲ್ಲಿ ಸ್ಥಾಪಿತವಾದ ಈ ದೇವಾಲಯ ನಿರ್ಲಕ್ಷ್ಯದಿಂದ ಶಿವಶರಣ ಡೋಹರ ಕಕ್ಕಯ್ಯ ಮಂದಿರ 12ನೇ ಶತಮಾನದ ಇತಿಹಾಸ ಮರೆಮಾಚುವ ಹಂತ ತಲುಪಿದೆ.
ಪ್ರತಿ ಹುಣ್ಣಿಮೆ ದಿನ ಪ್ರತಿಯೊಬ್ಬ ಶಿವಶರಣರ ಕುರಿತು ಅರಿವು-ಆಚಾರ ಕಾರ್ಯಕ್ರಮ ಹಮ್ಮಿಕೊಂಡು ಶರಣರ ವಚನ, ತತ್ವಾದರ್ಶಗಳ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ ಇಕ್ಕಟಾದ ದೇವಾಲಯದಲ್ಲಿಯೇ ಶಿವಶರಣ ಡೋಹರ ಕಕ್ಕಯ್ಯನವರ ದರ್ಶನ ಪಡೆಯುವ ಅನಿವಾರ್ಯತೆ ಭಕ್ತರಿಗೆ ತಪ್ಪಿಲ್ಲ.
ಪ್ರಸ್ತುತ ಶ್ರಾವಣ ಮಾಸದಂದು ಬಹುತೇಕ ಭಕ್ತರು ಶಿವನನ್ನು ಜಪಿಸುತ್ತಾರೆ. ಆದರೆ ದೇವಾಲಯ ಅಭಿವೃದ್ಧಿ ಕಂಡಿಲ್ಲ ಎನ್ನುವ ಭಾವನೆ ಭಕ್ತರಲ್ಲಿ ಮೂಡಿದೆ. ಆದ್ದರಿಂದ ಮುಜರಾಯಿ ಸಚಿವರಾದ ರಾಜಶೇಖರ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಇತಿಹಾಸ ಸಾರುವ ಡೋಹರ ಕಕ್ಕಯ್ಯ ದೇವಾಲಯಕ್ಕೆ ಅನುದಾನ ನೀಡಿ ಅಭಿವೃದ್ಧಿಪಡಿಸಲು ಮುಂದಾಗಲಿ ಎನ್ನುವ ಆಸೆ ಇಲ್ಲಿನ ಭಕ್ತರದಾಗಿದೆ.
ಐತಿಹಾಸಿಕ ಹಿನ್ನೆಲೆ: ಬಸವ ಕಲ್ಯಾಣದಲ್ಲಿ ಕ್ರಾಂತಿ ಉಂಟಾದಾಗ ಅಂದಿನ ಬಸವವಾದಿ ಶರಣರಲ್ಲಿ ಚೆನ್ನಬಸವಣ್ಣ, ಶಿವಶರಣ ಡೋಹರ ಕಕ್ಕಯ್ನಾ ಹೀಗೆ ಅನೇಕ ಶರಣರು ಸ್ಥಳ ತೊರೆದು ಕಕ್ಕೇರಾ ಮಾರ್ಗವಾಗಿ ಉಳವಿ ಕಡೆಗೆ ಪ್ರಯಾಣಿಸಿದ್ದರಂತೆ. ತೀರಾ ಆಯಾಸವಾಗಿ ಶರಣ ಡೊಹರ ಕಕ್ಕಯ್ನಾ ಅವರು ಕಕ್ಕೇರಾದಲ್ಲಿ ವಿಶ್ರಾಂತಿಸಿ ಕಕ್ಕೇರಾದಲ್ಲಿ
ಲಿಂಗೈಕ್ಯರಾದರು ಎಂಬುದು ಚೆನ್ನಬಸವ ಪುರಾಣ ಗ್ರಂಥದಲ್ಲಿ ಉಲ್ಲೇಖ ಇದೆ. ಆದ್ದರಿಂದ ಕಕ್ಕೇರಾ ಎಂದಿರುವ ಊರಿನ ಹೆಸರು ಆಗಿನ ಮೊದಲು ಕಕ್ಕಯ್ಯ ಎಂದಿತ್ತು. ಕಾಲಕ್ರಮೇಣವಾಗಿ ಕಕ್ಕಯ್ಯ, ಕಕ್ಕೇರಿ, ಕಕ್ಕೇರಾ ಎಂದು ಇಂದಿಗೂ ಜನಮನಸಲ್ಲಿ ಉಳಿದಿದೆ.
ವೈಶಿಷ್ಟ್ಯ : ದೇವಾಲಯದ ಒಳ ಭಾಗವು 12 ಶತಮಾನದ ಮಾದರಿ ಅಂದರೆ ಕೂಡಲ ಸಂಗಮೇಶ್ವರ ಮಂದಿರದಂತೆ ಕಾಣಬಹುದು. ನಾಲ್ಕು ಕಂಬಗಳು ವರ್ಣಶೈಲಿಯೊಂದಿಗೆ ಕೆತ್ತಲಾಗಿದೆ. ಬೃಹತ್ ಲಿಂಗವಿದೆ. ಹೀಗಾಗಿ 12 ಶತಮಾನದಂದೇ ಈ ದೇವಾಲಯ ಸ್ಥಾಪಿಸಲಾಗಿದೆ ಎನ್ನಲಾಗುತ್ತಿದೆ. ಹಾಗೇ ದೇವಾಲಯದಲ್ಲಿ ಹಳೇ ಶಾಸನ ಲಿಪಿ ಇದೆ. ಎಣ್ಣೆ, ಮೇಣ ಮೆತ್ತಿ ಲಿಪಿ ಕಾಣದ ಸ್ಥಿತಿಯಲ್ಲಿದೆ. ಹಾಗೇ ಶಿವರಾತ್ರಿಯ ಹಬ್ಬದಂದು ಗ್ರಾಮಸ್ಥರಿಂದ ಅದ್ಧೂರಿಯಾಗಿ ಶಿವನ ಜಾಗರಣೆ ಮಾಡಲಾಗುತ್ತಿದೆ. ಪ್ರತಿ ಸೋಮವಾರ ಶಿವನಲಿಂಗಕ್ಕೆ ಭಕ್ತರು ಪೂಜೆ ನೆರವೇರಿಸುತ್ತಾರೆ.
ಬಾಲಪ್ಪ ಎಂ. ಕುಪ್ಪಿ