Advertisement

ಭೂಪಟ ಪೂಜೆ ದೇಶಪ್ರೇಮವಲ್ಲ: ಶಿವರಂಜನ್‌ ಸತ್ಯಂಪೇಟ

12:14 PM Jan 17, 2022 | Team Udayavani |

ಕಲಬುರಗಿ: ಅಪೂರ್ವ ಸನ್ಯಾಸಿ ಸ್ವಾಮಿ ವಿವೇಕಾನಂದರು ನೀಡಿದ ಸಂದೇಶ ಈಗಿನ ಕಾಲಮಾನಕ್ಕೆ ಬಹಳ ಪ್ರಸ್ತುತವಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.

Advertisement

ನಗರದ ಆರಾಧನಾ ಪಿಯು ಕಾಲೇಜು ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್‌. ಶಿವರಾಮೇಗೌಡ) ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ-2022, ಕೋವಿಡ್‌-19 ರೋಗದ 3ನೇ ಅಲೆಯ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವವು ಜಾಗತಿಕ ತಾಪಮಾನ, ಪರಿಸರ ಹಾನಿಯಂತ ಅನೇಕ ಸವಾಲು-ಸಮಸ್ಯೆ ಎದುರಿಸುತ್ತಿದ್ದು, ಇವುಗಳನ್ನು ಮೆಟ್ಟಿ ನಿಂತು ಭಾರತ ವಿಶ್ವಗುರು ಆಗಲು ಯುವಕರ ಪಾತ್ರ ಅಗತ್ಯವಾಗಿದೆ. ಈಗಿನ ಸ್ಪರ್ಧಾತ್ಮಕ ಮತ್ತು ಮಾಹಿತಿ ತಂತ್ರಜ್ಞಾನಯುಗದಲ್ಲಿ ಯುವಕರು ವಿವೇಕಾನಂದರ ಕನಸು ನನಸು ಮಾಡಬೇಕು ಎಂದರು.

ಸ್ವಾಮಿ ವಿವೇಕಾನಂದರ ಬದುಕು-ಬರಹ ಕುರಿತು ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಚಿಂತಕ ಡಾ| ಶಿವರಂಜನ್‌ ಸತ್ಯಂಪೇಟೆ ಮಾತನಾಡಿ, ದೇಶಪ್ರೇಮವೆಂದರೆ ಭೂಪಟ ಪೂಜಿಸುವುದಲ್ಲ. ಸಕಲ ಜನಕೋಟಿ ಪ್ರೀತಿಸುವುದು. ಅವರ ಸ್ಥಿತಿಗತಿ ಉತ್ತಮಪಡಿಸುವುದು. ಅವರಿಗೆ ವಿದ್ಯಾಬುದ್ಧಿ ಕೊಡುವುದು ಎಂಬುದನ್ನು ಅರಿತಿದ್ದ ವಿವೇಕಾನಂದರು, ಪರಸ್ಪರ ಪ್ರೀತಿ- ವಿಶ್ವಾಸ ಒಳಗೊಂಡ ಆಧ್ಯಾತ್ಮದ ತಳಹದಿ ಮೇಲೆ ಹಿಂದೂ ಧರ್ಮ ಕಟ್ಟಬಯಸಿದ್ದರು ಎಂದು ಹೇಳಿದರು.

ನಾವೆಲ್ಲರೂ ದೇವರನ್ನು ಹುಡುಕುತ್ತ ಕಲ್ಲು ಮಣ್ಣಿನ ಕಟ್ಟಡಗಳನ್ನು ಎಡತಾಕುತ್ತಿದ್ದರೆ, ಸ್ವಾಮಿ ವಿವೇಕಾನಂದರು ದರಿದ್ರ, ಅಮಾಯಕರ ನೋವಿನಲ್ಲಿ ದೇವರನ್ನು ಕಾಣುತ್ತಿದ್ದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಭಾರತ ಕಟ್ಟಬೇಕು ಎಂದು ಕರೆ ನೀಡಿದರು.

Advertisement

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪಿಎಸ್‌ಐ ಯಶೋಧಾ ಕಟಕೆ, ಬಿ.ಎಚ್‌. ನಿರಗುಡಿ, ಜಿ. ಸತೀಶ ಅವರನ್ನು ಸನ್ಮಾನಿಸಲಾಯಿತು. ನಂತರ ನಗರದ ಮಣೂರ ಆಸ್ಪತ್ರೆ ಸಂಸ್ಥಾಪಕ ನಿರ್ದೇಶಕ ಡಾ| ಫಾರುಖ್‌ ಅಹ್ಮದ್‌, ಸಿಇಒ ಡಾ| ಲಕ್ಷ್ಮೀಕಾಂತ ಮೇತ್ರೆ ಹಾಗೂ ವೈದ್ಯ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಆರಾಧನಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಚೇತನಕುಮಾರ ಗಾಂಗಜಿ ಅಧ್ಯಕ್ಷತೆ ವಹಿಸಿದ್ದರು. ಆನಂದ ಸ್ವಾಗತಿಸಿದರು, ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್‌ ನಿರೂಪಿಸಿ, ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next