ಶಿವರಾಜಕುಮಾರ್ ಅಭಿನಯದ “ವೇದ’ ಸಿನಿಮಾ ಇದೇ ಡಿ. 23ಕ್ಕೆ ತೆರೆಗೆ ಬರುತ್ತಿದೆ. ಸದ್ಯ “ವೇದ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, “ವೇದ’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಇನ್ನು ಬಿಡುಗಡೆಯಾಗಿರುವ “ವೇದ’ ಸಿನಿಮಾದ ಟ್ರೇಲರ್‌ನಲ್ಲಿ ನಾಯಕ ನಟ ಶಿವರಾಜಕುಮಾರ್ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಹಳ್ಳಿ ಮತ್ತು ಕಾಡಿನ ಹಿನ್ನೆಲೆಯಲ್ಲಿ ಸಾಗುವ ಸಿನಿಮಾದ ಕಥೆಯಲ್ಲಿ ಶಿವರಾಜಕುಮಾರ್ ರಫ್ ಆ್ಯಂಡ್ ಟಫ್ ಪಾತ್ರದಲ್ಲಿ ಮಿಂಚಿರುವುದು ಟ್ರೇಲರ್‌ನಲ್ಲಿ ಕಾಣುತ್ತದೆ.
“ವೇದ’ ಸಿನಿಮಾದ ಟ್ರೇಲರ್‌ನ ಆರಂಭದಿಂದ ಅಂತ್ಯದವರೆಗೂ ಆ್ಯಕ್ಷನ್ ಅಬ್ಬರವೇ ಎದ್ದು ಕಾಣುತ್ತಿದೆ. ಮಾಸ್ ಆಡಿಯನ್ಸ್‌ಗೆ, ಅದರಲ್ಲೂ ಆ್ಯಕ್ಷನ್ ಪ್ರಿಯರಿಗೆ ಇಷ್ಟವಾಗುವಂತಹ ಒಂದಷ್ಟು ಝಲಕ್ ಅನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಉಳಿದಂತೆ ಛಾಯಾಗ್ರಹಣ, ಕಲರಿಂಗ್, ಸೆಟ್‌ಗಳು, ಬೃಹತ್ ಕಲಾವಿದರ ತಾರಾಗಣ, ಹಿನ್ನೆಲೆ ಸಂಗೀತ, ಲೈಟಿಂಗ್ಸ್ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ನನಗೆ ನನ್ನದೇ ಶಕ್ತಿಯಿದೆ; ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ: ಯಡಿಯೂರಪ್ಪ
“ವೇದ’ ಶಿವರಾಜಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾವಾಗಿದ್ದು, ಗೀತಾ ಶಿವರಾಜಕುಮಾರ್ “ವೇದ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಶಿವರಾಜಕುಮಾರ್ ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಉಮಾಶ್ರೀ, ಅದಿತಿ ಸಾಗರ, ವೀಣಾ ಪೊನ್ನಪ್ಪ, ರಾಘು ಶಿವಮೊಗ್ಗ, ಕುರಿ ಪ್ರತಾಪ್, ಭಾವನಾ ಮೊದಲಾದ ಕಲಾವಿದರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ವೇದ’ ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಚಿತ್ರಕ್ಕೆ ಸ್ವಾಮಿ ಜೆ. ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿದೆ.
“ಭಜರಂಗಿ-2′ ಸಿನಿಮಾದ ನಂತರ ತೆರೆಗೆ ಬರುತ್ತಿರುವ ಶಿವರಾಜಕುಮಾರ್ ಅಭಿನಯದ “ವೇದ’ ಎಷ್ಟರ ಮಟ್ಟಿಗೆ ಅಭಿಮಾನಿಗಳ ಮನ-ಗಮನ ಸೆಳೆಯಲಿದೆ ಎನ್ನುವುದು ಇದೇ ತಿಂಗಳ ಅಂತ್ಯಕ್ಕೆ ಗೊತ್ತಾಗಲಿದೆ.