ಬಹುತೇಕ ಹೊಸ ಪ್ರತಿಭೆಗಳೇ ಸೇರಿನಿರ್ಮಿಸಿರುವ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇದೇ ವೇಳೆ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಕ್ಕೆ ನಟ ಶಿವರಾಜಕುಮಾರ್ ಬೆನ್ನು ತಟ್ಟಿದ್ದಾರೆ.
ಬೆಂಗಳೂರಿನ ನಾಗವರದಲ್ಲಿರುವ ನಟ ಶಿವರಾಜಕುಮಾರ್ ಅವರ ನಿವಾಸದಲ್ಲಿ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಸಕ್ಸಸ್‌ಮೀಟ್‌ನಲ್ಲಿ ಭಾಗಿಯಾದ ನಟ ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಚಿತ್ರತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಮೊದಲಿಗೆ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಬಗ್ಗೆ ಮಾತನಾಡಿದ ಶಿವರಾಜಕುಮಾರ್, ” ನಾನು ಫಸ್ಟ್ ಡೇ ಫಸ್ಟ್ ಶೋ ಈ ಸಿನಿಮಾ ನೋಡುತ್ತೇನೆ ಎಂದು ಚಿತ್ರತಂಡಕ್ಕೆ ಹೇಳಿದ್ದೆ. ಆದರೆ ಆ್ಯಡ್ ಶೂಟ್ ಇದ್ದಿದ್ದರಿಂದ ಸಿನಿಮಾ ಫಸ್ಟ್‌ಡೇ ನೋಡಲು ಆಗಲಿಲ್ಲ. ನನ್ನ ಪರವಾಗಿ ಪತ್ನಿ ಗೀತಾ, ನನ್ನ ಚಿಕ್ಕ ಮಗಳು ನಿವೇದಿತಾ ಎಲ್ಲರೂ ಸಿನಿಮಾ ನೋಡಿದರು. ಬಂದಿದ್ದರು. ಒಳ್ಳೆಯ ಸಿನಿಮಾಕ್ಕೆ ಮೋರಲ್ ಸಪೋರ್ಟ್‌ಗಿಂತ ನಾವು ಸಿನಿಮಾ ನೋಡಿ ತೃಪ್ತಿಪಡುವುದು ಮುಖ್ಯವಾಗುತ್ತದೆ. ಸಿನಿಮಾದ ಟೈಟಲ್ ಪೋಸ್ಟರ್, ಟೀಸರ್, ಟ್ರೇಲರ್, ಸಾಂಗ್ಸ್ ಎಲ್ಲ ನೋಡಿದಾಗ ತುಂಬಾ ಇಂಟ್ರೆಸ್ಟಿಂಗ್ ಅನಿಸಿತು. ಜನ ಥಿಯೇಟರ್‌ಗೆ ಬರದ ಸಮಯದಲ್ಲಿ, ಜನ ಥಿಯೇಟರ್‌ಗೆ ಬಂದು ಸಪೋರ್ಟ್ ಮಾಡಿದ್ದಾರೆ. ಇಡೀ ಸ್ಯಾಂಡಲ್‌ವುಡ್ ಸಿನಿಮಾಗೆ ಸಾಥ್ ಕೊಟ್ಟಿದೆ. ಇಂಡಸ್ಟ್ರಿ ಅಂದರೆ ಒಂದು ಫ್ಯಾಮಿಲಿ ಇದ್ದಂತೆ. ಫ್ಯಾಮಿಲಿ ಅಂದಾಗ ಯಾರದ್ದೇ ಸಿನಿಮಾವಾಗಲಿ ಪ್ರೋತ್ಸಾಹ ಮಾಡಬೇಕು’ ಎಂದರು.
“ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಬಿಡುಗಡೆ ವೇಳೆ ರಮ್ಯಾ ಮಾಡಿದ ಅಡ್ಡಿ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, “ಯಾರ ಬಗ್ಗೆ ಏನೂ ಕಾಮೆಂಟ್ಸ್ ಮಾಡುವುದು ಬೇಡ. ಎಲ್ಲದಕ್ಕಿಂತ ಕೊನೆಗೆ ಗೆಲುವು ಮುಖ್ಯ. ಸಿನಿಮಾ ಬರೋಕು ಮೊದಲು ಒಳ್ಳೆ ರಿಪೋರ್ಟ್ ಇತ್ತು. ಒಳ್ಳೆ ಮನಸ್ಸಿನಿಂದ ಮಾಡಿದರೆ ಅದಕ್ಕೆ ಯಾವುದೇ ತಡೆ ಬರಲ್ಲ. ಅದಕ್ಕೆ ಇದೇ ಉತ್ತಮ ಉದಾಹರಣೆ. ಅಭಿಮಾನಿ ದೇವರುಗಳು ಒಳ್ಳೆ ಸಿನಿಮಾ ಕೈಬಿಡಲ್ಲ. ಸತ್ಯ ಇದ್ದರೆ ಜಯ ಇದ್ದೇ ಇರುತ್ತೆ. ಅವರವರು ತಿಳಿದುಕೊಳ್ಳಬೇಕು. ಯಾಕೆ ಹೀಗಾಯ್ತು ಅನ್ನೋದು ಗೊತ್ತಾಗ್ತಿಲ್ಲ. ನಮ್ಮ ಇಂಡಸ್ಟ್ರಿ ಬೆಳೆಯಬೇಕು ಅಷ್ಟೆ. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಹೊಸಬರು ಬಂದಾಗ ಎಲ್ಲರೂ ಸಪೋರ್ಟ್ ಮಾಡಬೇಕು. ಆ ವಿಚಾರವನ್ನು ಈಗ ದೊಡ್ಡದು ಮಾಡುವುದು ಬೇಡ’ ಎಂದರು.
ಗೀತಾ ಶಿವರಾಜಕುಮಾರ್ ಮಾತನಾಡಿ, “ಈ ತರ ಸಿನಿಮಾ ನೋಡಿ ಬಹಳ ವರ್ಷವಾಗಿತ್ತು. ವರುಣ್ ನಮ್ಮ ಕುಟುಂಬದ ಹುಡುಗ. ನಿರ್ದೇಶಕರಿಂದ ಹಿಡಿದು ಎಲ್ಲರು ಹೊಸಬರೇ. ಎಲ್ಲವೂ ಹೊಸತನದಿಂದ ಕೂಡಿದೆ. ಹಾಸ್ಟೆಲ್ ಲೈಫ್ ಹೀಗೆ ಇತ್ತೇನೋ ಅನಿಸುವಷ್ಟು ಬಹಳ ಸ್ವಾಭಾವಿಕವಾಗಿತ್ತು. ಎಲ್ಲಾ ಫ್ಯಾಮಿಲಿ ಕುಳಿತು ನೋಡಬಹುದು. ಈ ತರ ಸಿನಿಮಾಗಳು ಮತ್ತಷ್ಟು ಬರಬೇಕು. ಆರಂಭದಿಂದ ಕೊನೆತನಕ ಎಲ್ಲಿಯೂ ಬೋರ್ ಆಗುವುದಿಲ್ಲ. ನಾನು ಸಿನಿಮಾ ಎಂಜಾಯ್ ಮಾಡಿದೆ. ಇಡೀ ತಂಡಕ್ಕೆ ಎಲ್ಲರಿಗೂ ಒಳ್ಳೆದಾಗಲಿ’ ಎಂದರು.
ಇದೇ ವೇಳೆ ಹಾಜರಿದ್ದ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಗ್ಗೆ ಮಾತನಾಡಿದರು