ಗಂಗಾವತಿ: ಕನಕಗಿರಿ-ಕಾರಟಗಿ ಪಟ್ಟಣಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಆರಂಭಿಸಬೇಕು. ಶ್ರೀರಾಮನಗರ ಕೋವಿಡ್ ಆಸ್ಪತ್ರೆಯನ್ನು ಪುನಃ ಆರಂಭಿಸುವಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಎಸ್. ತಂಗಡಗಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶ್ರೀರಾಮನಗರದಲ್ಲಿ ಕಳೆದ ಒಂದು ವಾರದ ಹಿಂದೆ ಆರಂಭಿಸಿಸಿದ್ದ ಕೋವಿಡ್ ಆಸ್ಪತ್ರೆಯನ್ನು ರದ್ದುಗೊಳಿಸಿ ಅಲ್ಲಿದ್ದ 22 ಜನ ಸೋಂಕಿತರನ್ನು ಗಂಗಾವತಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು ಖಂಡನೀಯ. ಕ್ಷೇತ್ರದ ಜನರು ದಾನ ನೀಡಿದ ದುಡ್ಡಿನಲ್ಲಿ ಗೆದ್ದು ಶಾಶಕರಾಗಿರುವ ದಢೇಸೂಗೂರು ಬಸವರಾಜ ಅವರು ದಾನ ಕೊಟ್ಟ ಜನರನ್ನು ಮರೆತು ಕೊರೊನಾ ಸಂದರ್ಭದಲ್ಲಿ ಮರಳು ಮಟ್ಕಾ ದಂಧೆ ನಡೆಸುವವರ ಸಭೆ ಮಾಡುತ್ತಿರುವುದು ಖಂಡನೀಯ ಎಂದರು.
ನೇರವಾಗಿ ಮರಳು ದಂಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೊರೊನಾ ಪೀಡಿತರ ಸಮಸ್ಯೆ ಆಲಿಸದೇ ಕಾಳಜಿ ಕೇಂದ್ರಗಳಿಗೆ ತೆರಳಿ ಬೇರೆಡೆಯಿಂದ ತಂದ ಊಟ ಮಾಡಿ ಬರುವುದು ದೊಡ್ಡ ವಿಷಯವಲ್ಲ. ಸೋಂಕಿತರ ಕಾಳಜಿ ಕೇಂದ್ರಗಳಲ್ಲಿ ಮಲಕನಮರಡಿ ಹೊರತುಪಡಿಸಿ ಎಲ್ಲಿಯೂ ಸರಿಯಾದ ಊಟ ಚಿಕಿತ್ಸೆ ಸಿಗುತ್ತಿಲ್ಲ. ಶಾಸಕರು ಜಿಲ್ಲಾಡಳಿತದ ಅ ಧಿಕಾರಿಗಳು ಕೊರೊನಾ ಪೀಡಿತರಿಗೆ ಚಿಕಿತ್ಸೆ ಕಾಳಜಿ ವಹಿಸುವಲ್ಲಿ ವಿಫಲರಾಗಿದ್ದಾರೆ. ಬರೀ ಮೀಟಿಂಗ್ ಮಾಡಿದರೆ ಸಾಲದು ಸೋಂಕಿತರ ಚಿಕಿತ್ಸೆ ಹಾಗೂ ಅವರಿಗೆ ಅತ್ಯುತ್ತಮ ಆಹಾರ ಔಷಧೋಪಚಾರ ಮಾಡಬೇಕು. ಕೂಡಲೇ ಶ್ರೀರಾಮನಗರ, ಕಾರಟಗಿ ಹಾಗೂ ಕನಕಗಿರಿಯಲ್ಲಿ ಕೋವಿಡ್ ಆಸ್ಪತ್ರೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆ ಆರಂಭಿಸುವಂತೆ ಸೂಚನೆ ನೀಡಿದ್ದರೂ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಜಿಲ್ಲಾಡಳಿತ ಮತ್ತು ಶಾಸಕರು ಆಸ್ಪತ್ರೆ ಆರಂಭಿಸದಿದ್ದರೆ ಶಾಸಕ ದಢೇಸೂಗೂರು ಗೆಲುವಿಗೆ ದೇಣಿಗೆ ನೀಡಿದ ಜನರಿಂದಲೇ ದೇಣಿಗೆ ಪಡೆದು ಆಕ್ಸಿಜನ್ ವೆಂಟಿಲೇಟರ್ ಹಾಗೂ ಚಿಕಿತ್ಸೆಯ ಸಾಮಾಗ್ರಿ ಖರೀಸಲು ಸಿದ್ಧವಾಗಿದ್ದು, ಜಿಲ್ಲಾಡಳಿತ ಆಸ್ಪತ್ರೆ ಆರಂಭಿಸಿ ವೈದ್ಯರು ಅಗತ್ಯ ಸಿಬ್ಬಂದಿ ವರ್ಗ ನಿಯೋಜನೆ ಮಾಡಲಿ ಎಂದು ಮನವಿ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಮಹಮದ್, ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರೀನಿವಾಸ, ತಾ.ಪಂ ಮಾಜಿ ಸದಸ್ಯ ಬಿ.ಫಕೀರಯ್ಯ, ಅಮರೇಶ ಗೋನಾಳ, ಚಿನ್ನುಪಾಟಿ ಪ್ರಭಾಕರ್, ಮಲ್ಲನಗೌಡ, ರೇಣುಕನಗೌಡ, ಅಯ್ಯಪ್ಪ, ಯಮನೂರಪ್ಪ ನಾಯಕ, ಕೃಷ್ಣ ಬಾಗೋಡಿ, ಸತ್ಯನಾರಾಯಣ ಇದ್ದರು.