Advertisement

ಸಾಹಿತಿಗಳೇ ಅಧಿಕಾರಕ್ಕೆಬಂದ್ರೆ ಭಾಷೆ-ಗಡಿ ತಂಟೆಯಿಲ್ಲ

12:36 PM Feb 01, 2021 | Team Udayavani |

ಧಾರವಾಡ: ವರಕವಿ ಡಾ| ದ.ರಾ. ಬೇಂದ್ರೆ 125ನೇ ಜನ್ಮದಿನ ಪ್ರಯುಕ್ತ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಕೊಡಮಾಡುವ ಪ್ರಸಕ್ತ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನವದೆಹಲಿಯ ಹಿರಿಯ ಸಾಹಿತಿ ಡಾ| ಎಚ್‌.ಎಸ್‌. ಶಿವಪ್ರಕಾಶ ಅವರಿಗೆ ಪ್ರದಾನ ಮಾಡಲಾಯಿತು.

Advertisement

ಸಾಧನಕೇರಿಯ ಬೇಂದ್ರೆ ಭವನದಲ್ಲಿ ರವಿವಾರ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 1 ಲಕ್ಷ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡ ಪ್ರಶಸ್ತಿಯನ್ನು ಗಡಿ ಅಭಿವೃದ್ದಿ ಪ್ರಾಧಿಕಾರದ ಡಾ| ಪಿ.ಸೋಮಶೇಖರ ಅವರು ಪ್ರದಾನ ಮಾಡಿದರು. ನಂತರ ಮಾತನಾಡಿದ ಡಾ| ಸೋಮಶೇಖರ, ಬೇಂದ್ರೆ ಅವರ ಮನೆ ಭಾಷೆ, ಮನೆಯಂಗಳದ ಭಾಷೆಯೇ ಬೇರೆ ಬೇರೆಯಾಗಿತ್ತು. ಬೇಂದ್ರೆ ಮನೆ ಭಾಷೆ ಮರಾಠಿ ಆಗಿದ್ದರೂ ಮನದಂಗಳದ ಭಾಷೆ ಕನ್ನಡವಾಗಿತ್ತು. ಯಾವ ಮರಾಠಿ, ಯಾವ ಕನ್ನಡ, ನಮ್ಮ ನಮ್ಮಲ್ಲೇ ಯಾಕಿಷ್ಟು ಸಂಘರ್ಷ ಎಂಬುದೇ ತಿಳಿಯುತ್ತಿಲ್ಲ. ಇವೆಲ್ಲವೂ ದೂರವಾಗಬೇಕಾದರೆ ಸಾಹಿತಿಗಳೇ ಅಧಿಕಾರಕ್ಕೆ ಬರಬೇಕು. ಆಗ ಮಾತ್ರ ಸಾಮರಸ್ಯ, ಏಕತೆ ಬರಲು ಸಾಧ್ಯವಿದೆ ಎಂದರು.

ಬೇಂದ್ರೆ ಕೇವಲ ಕಾವ್ಯಗಳನ್ನು ರಚಿಸದೇ ತಮ್ಮ ಬದುಕನ್ನೇ ಕಾವ್ಯವನ್ನಾಗಿಸಿದ್ದರು. ಬೇಂದ್ರೆ ಅವರು 7 ದಶಕಗಳ ವರೆಗ ಸಾಹಿತ್ಯ ಕೃಷಿ ಮಾಡಿ ಅಪಾರ ಕೊಡುಗೆ ನೀಡಿದ್ದಾರೆ. ಕವಿಗಳದ್ದು ಬರಹದಂತೆ ಬದುಕಾಗಬೇಕು. ಸಾಹಿತ್ಯ ವ್ಯಕ್ತಿಯ ಮನಸ್ಸಿನ ಅನೇಕ ದುಗುಡವನ್ನು ದೂರ ಮಾಡುತ್ತದೆ. ಹೀಗಾಗಿ ಸಾಹಿತ್ಯ ಓದು ಪ್ರತಿಯೊಬ್ಬರಲ್ಲಿ ಇರಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ| ಎಚ್‌.ಎಸ್‌. ಶಿವಪ್ರಕಾಶ ಮಾತನಾಡಿ, ನನ್ನ ಕಾವ್ಯ ಗುರುಗಳಲ್ಲಿ ಒಬ್ಬರಾದ ಬೇಂದ್ರೆ ಅವರ ಹೆಸರಿನ ಪ್ರಶಸ್ತಿ ಪಡೆದಿರುವುದು ಖುಷಿಯಾಗಿದೆ. ಬೇಂದ್ರೆಯವರಲ್ಲಿ ವಾಕ್‌ ವೈಭವ ಇತ್ತು. ಅದೇ ರೀತಿ ಕುವೆಂಪು ಅವರಲ್ಲಿ ಅಕ್ಷರ ವೈಭವ ಇತ್ತು. ಇವೆರಡು ಒಂದಾದರೆ ಮಹತ್ತರ ಸಾಹಿತ್ಯ ಹೊರ ಬರುತ್ತದೆ. ಬೇಂದ್ರೆ ಮತ್ತು ಕುವೆಂಪು ಅವರು ದೂರದ ಊರಿನವರು. ಆದರೂ ಅವರಿಂದ ವಿಶಿಷ್ಟವಾದ ಸಾಹಿತ್ಯ ರಚನೆಯಾಗಿದೆ.

ಹಿರಿಯ ಸಾಹಿತ್ಯಗಳ ಪ್ರೇರಣೆ ಪಡೆದು ಯುವ ಸಾಹಿತಿಗಳು ಸಾಹಿತ್ಯ ರಚಿಸುತ್ತಿರುವುದು ವಿಶೇಷ. ಅದೂ ಇತ್ತೀಚಿನ ನೆಟ್‌ವರ್ಕಿಂಗ್‌ ಹಾಗೂ ಮಾರ್ಕೆಟ್‌ ಸಂಸ್ಕೃತಿ ಎನ್ನುವ ಕಾಲದಲ್ಲೂ ಯುವಕರು ಸಾಹಿತ್ಯ ರಚನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

Advertisement

ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಕನ್ನಡದ ದೇಸಿತನ, ಜಾನಪದ ಪರಂಪರೆಯನ್ನು ತಮ್ಮ ಕಾವ್ಯದಲ್ಲಿ ಧಾರಾಳವಾಗಿ ಬಳಸಿದವರು ಡಾ| ಎಚ್‌.ಎಸ್‌. ಶಿವಪ್ರಕಾಶ. ಹೀಗಾಗಿ ಅವರ ಕಾವ್ಯವನ್ನು ಭಾರತೀಯ ಅಥವಾ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಚೌಕಟ್ಟಿನಲ್ಲಿ ವಿವರಿಸುವುದು ಕಷ್ಟ. ಅದಕ್ಕಾಗಿಯೇ ದೇಸಿ ಕಾವ್ಯ ಮೀಮಾಂಸೆ ಅಗತ್ಯವಿದೆ ಎಂದರು. ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಮಾತನಾಡಿದರು.

ಇದನ್ನೂ ಓದಿ:‘ಮನ್ ಕಿ ಬಾತ್’ ನಂತರ “ನಾರಿ ಶಕ್ತಿ”ಯ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಕರೀನಾ, ದೀಪಿಕಾ 

ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ, ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ| ದುಷ್ಯಂತ ನಾಡಗೌಡ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಶ್ರೀನಿವಾಸ ವಾಡಪ್ಪಿ, ಮಂಜುಳಾ ಯಲಿಗಾರ ಇದ್ದರು. ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಡಾ| ಗೋಪಾಲಕೃಷ್ಣ ಬಿ. ಸ್ವಾಗತಿಸಿದರು. ಮಾಯಾ ರಾಮನ್‌ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next