ಏ.12 ವರನಟ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನವಾಗಿದ್ದು, ಶಿವರಾಜ್ ಕುಮಾರ್ ಅವರು ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು. ವರನಟ ಡಾ.ರಾಜ್ ಕುಮಾರ್ ಚಿತ್ರರಂಗವನ್ನು ಅಗಲಿ 14 ವರ್ಷಗಳೇ ಸಂದಿವೆ. ಕೋವಿಡ್ -19 ಸೋಂಕು ಈ ಬಾರಿ ರಾಜ್ ಕುಮಾರ್ ಪುಣ್ಯಸ್ಮರಣೆಗೂ ತಟ್ಟಿದ್ದು, ಪ್ರತಿವರ್ಷ ಸಾವಿರಾರು ಅಭಿಮಾನಿಗಳು ರಾಜ್ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಸೇರಿ ರಾಜ್ ಸಮಾಧಿಗೆ ತೆರಳಿ ಪೂಜೆ ನಮನ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ವರನಟನ ಪುಣ್ಯಸ್ಮರಣೆಗೂ ಕರಾಳ ಛಾಯೆ ಆಚರಿಸಿದೆ. 14ನೇ ಪುಣ್ಯಸ್ಮರಣೆಯಾದ ಭಾನುವಾರ ಬೆಳಿಗ್ಗೆ ರಾಜ್ ಕುಮಾರ್ ಹಿರಿಯ ಪುತ್ರ ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಬ್ಬರೇ ತಂದೆಯ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ನಾವು ಅಪ್ಪಾಜಿ ಇಲ್ಲ ಎಂದು ಅಂದುಕೊಂಡಿಲ್ಲ. ಅವರ ಕಣ್ಣುಗಳು ಜಗತ್ತನ್ನು ನೋಡುತ್ತಿವೆ. ಲಾಕ್‌ಡೌನ್ ಆಗಿದ್ದರಿಂದ ಎಲ್ಲರೂ ಬರದೇ ಕೆಲವರು ಅಪ್ಪಾಜಿ ಸಮಾಧಿಗೆ ಬಂದು ನಮಸ್ಕರಿಸಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಕೋವಿಡ್ -19 ವೈರಸ್ ಮಹಾಮಾರಿ ತಡೆಗೆ ಸಾಮಾಜಿಕ ಅಂತರವೇ ಮದ್ದು ಎಂದಿರುವ ಶಿವರಾಜಕುಮಾರ್, ಯಾರು ಹೆಚ್ಚಾಗಿ ಸೇರಬೇಡಿ. ಜನರು ಸಹಕಾರ ಕೊಟ್ಟರೆ ಅದಷ್ಟು ಬೇಗ ಕೋವಿಡ್ -19 ಮಹಾಮಾರಿಯಿಂದ ಮುಕ್ತಿ ಪಡೆಯಬಹುದು. ಸಿನಿಮಾ ಇಂಡಸ್ಟಿಯಿಂದ ಯಾರು ಕೂಡ ಇಲ್ಲಿಯ ತನಕ ಕಷ್ಟ ಅಂತ ಸಂಪರ್ಕ ಮಾಡಿಲ್ಲ. ಲಾಕ್‌ಡೌನ್ ತಿಳಿಗೊಂಡ ನಂತರ ಸಿನಿಮಾ ಯೂನಿಟ್ ಅವರನ್ನ ಸಂಪರ್ಕ ಮಾಡಿ ಸಹಾಯ ಮಾಡುತ್ತೇವೆ ಎಂದು ಹೇಳಿದರು.