ಶಿವರಾಜಕುಮಾರ್ ಅವರ “ಕವಚ’ ಚಿತ್ರ ಯಾಕೆ ತಡವಾಗುತ್ತಿದೆ? ಹೀಗೊಂದು ಪ್ರಶ್ನೆ ಗಾಂಧಿನಗರದಲ್ಲಿ ಎದ್ದಿತ್ತು. ಅದಕ್ಕೆ ಕಾರಣ ಚಿತ್ರದ ಬಿಡುಗಡೆ ತಡವಾಗುತ್ತಿರುವುದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕವಚ’ ಡಿಸೆಂಬರ್‌ನಲ್ಲಿ ತೆರೆಕಾಣಬೇಕಿತ್ತು. ಆ ಸಮಯದಲ್ಲಿ ಮುಂದೆ ಹೋದ ಚಿತ್ರ ಮತ್ತೆ ಜನವರಿ-ಫೆಬ್ರವರಿಯಲ್ಲಿ ಬಿಡುಗಡೆಯಾಗುವುದಾಗಿ ಹೇಳಲಾಗಿತ್ತು.
ಆದರೆ, ಚಿತ್ರದ ಬಿಡುಗಡೆ ಮತ್ತೆ ಮುಂದೆ ಹೋಗುವ ಮೂಲಕ ಶಿವರಾಜಕುಮಾರ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಈಗ ಚಿತ್ರತಂಡ ಮತ್ತೆ ಬಿಡುಗಡೆಯ ದಿನಾಂಕ ಘೋಷಿಸಿದೆ. ಏಪ್ರಿಲ್ 5 ರಂದು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಮೂಲಕ ತುಂಬಾ ದಿನಗಳ ನಂತರ ಶಿವರಾಜಕುಮಾರ್ ಅವರ ಸಿನಿಮಾವೊಂದು ಬಿಡುಗಡೆಯಾದಂತಾಗುತ್ತದೆ. ಈ ಚಿತ್ರವನ್ನು ಎಂ.ವಿ.ಸತ್ಯನಾರಾಯಣ್ ನಿರ್ಮಿಸಿದ್ದು, ಜಿವಿಆರ್ ವಾಸು ನಿರ್ದೇಶಿಸಿದ್ದಾರೆ.
“ಕವಚ’ ಚಿತ್ರದಲ್ಲಿ ನಟ ಶಿವರಾಜ ಕುಮಾರ್ ಮೊದಲ ಬಾರಿಗೆ ಅಂಧನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರ ಅಂಧರಿಗೆ ಬದುಕಿಗೆ ಸ್ಪೂರ್ತಿ, ಪ್ರೇರಣೆ ನೀಡುವಂಥದ್ದಾಗಿದೆ ಎನ್ನುತ್ತದೆ ಚಿತ್ರತಂಡ. “ಕವಚ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದಿದ್ದು ಹೈದರಾಬಾದ್‌ನಲ್ಲಿ. ಹಾಗಾಗಿ ಚಿತ್ರ ಡಿ.ಐ ಸೇರಿದಂತೆ ಹಲವು ಕೆಲಸಗಳನ್ನು ಅಲ್ಲಿನ ನುರಿತ ತಂತ್ರಜ್ಞರು ನಿರ್ವಹಿಸಿದ್ದಾರೆ. ಈ ವೇಳೆ ಚಿತ್ರವನ್ನು ನೋಡಿದ ಅಲ್ಲಿನ ತಂತ್ರಜ್ಞರು ಶಿವಣ್ಣ ಅಭಿನಯ ನೋಡಿ ಫಿದಾ ಆಗಿದ್ದಾರೆ ಎನ್ನುತ್ತದೆ ಚಿತ್ರತಂಡ.
“ಕವಚ’ ಚಿತ್ರದಲ್ಲಿ ಶಿವರಾಜಕುಮಾರ್ ಅವರೊಂದಿಗೆ ಇಶಾ ಕೊಪ್ಪಿಕರ್, ರವಿಕಾಳೆ, ಕೃತಿಕಾ, ರಾಜೇಶ್ ನಟರಂಗ, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ಜಯಪ್ರಕಾಶ್ ಮೊದಲಾದ ಕಲಾವಿದರ ದೊಡ್ಡ ತಾರಾಗಣವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಕೆ. ಕಲ್ಯಾಣ್, ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಚಿತ್ರದ ಹಾಡುಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ರವಿವರ್ಮ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.