ಒಂದು ಕಡೆ “ಸಂತ ಕಬೀರ’, ಇನ್ನೊಂದು ಕಡೆ “ಭೈರತಿ ರಣಗಲ್’, ಮತ್ತೂಂದು ಕಡೆ “ಟಗರು ಶಿವ’, ಮಗದೊಂದು ಕಡೆ ಕುರುಡನ ಪಾತ್ರ, ಇದರ ನಡುವೆ ಶಿಕ್ಷಕ … ಹೀಗೆ ಶಿವರಾಜಕುಮಾರ್ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ಸಾಲು ಸಾಲು ಹೊಸ ಬಗೆಯ ಪಾತ್ರಗಳು ಬರುತ್ತಿವೆ. ಸದ್ಯ ಶಿವಣ್ಣ “ದ್ರೋಣ’ ಸಿನಿಮಾದಲ್ಲಿ ಶಿಕ್ಷಕನ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆದಿದೆ. ಈ ಸಂದರ್ಭದಲ್ಲಿ ತಮ್ಮ ಸಿನಿಯಾನ, ಪಾತ್ರಗಳ ಬಗ್ಗೆ ಶಿವಣ್ಣ ಮುಕ್ತವಾಗಿ ಮಾತನಾಡಿದ್ದಾರೆ. ಅದನ್ನು ಅವರ ಮಾತಿನಲ್ಲೇ ಓದಿ ….
ಹೊಸ ಬಗೆಯ ಪಾತ್ರಗಳು: ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳು ಸಿಗುತ್ತಿವೆ. ಸಾಮಾಜಿಕ ಕಾಳಜಿಯ, ಪ್ರಸ್ತುತವಾಗಿ ಸಮಾಜದಲ್ಲಿ ನಡೆಯುತ್ತಿರುವ ಅಂಶಗಳ ಕುರಿತಾದ ಪಾತ್ರಗಳು ಸಿಗುತ್ತಿವೆ. ಅದು ಪೊಲೀಸ್ ಪಾತ್ರದಿಂದ ಹಿಡಿದು, ಟೀಚರ್ ಪಾತ್ರದವರೆಗೂ. “ಕಡ್ಡಿಪುಡಿ’ಯ ಪಾತ್ರ, “ಮಫ್ತಿ’ಯ ಭೈರತಿ ರಣಗಲ್ ಪಾತ್ರ, “ಕವಚ’ ಈಗ “ದ್ರೋಣ’ … ಹೀಗೆ ವಿಭಿನ್ನ ಪಾತ್ರಗಳು ಸಿಗುತ್ತಿವೆ.
ಈ ನಡುವೆಯೇ “ದಿ ವಿಲನ್’, “ರುಸ್ತುಂ’ ತರಹದ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳು ಸಿಗುತ್ತಿವೆ. “ದಿ ವಿಲನ್’ ಒಂದು ಹುಡುಕಾಟದ ಕಥೆ. ಯಾರು ಯಾರನ್ನು ಹುಡುಕುತ್ತಾರೆ ಮತ್ತು ಯಾಕಾಗಿ ಹುಡುಕುತ್ತಾರೆ ಎಂಬ ಲೈನ್‌ನಲ್ಲಿ ಕಥೆ ಸಾಗುತ್ತದೆ. ಹೀಗೆ ಒಂದಕ್ಕಿಂತ ಒಂದು ವಿಭಿನ ಪಾತ್ರಗಳು ಸಿಗುತ್ತಿರುವ ಖುಷಿ ಇದೆ.
ಕಾಳಜಿಯುಳ್ಳ ಟೀಚರ್: “ದ್ರೋಣ’ ಸಿನಿಮಾದಲ್ಲಿ ಟೀಚರ್ ಆಗಿ ನಟಿಸುತ್ತಿದ್ದೇನೆ. ತುಂಬಾ ದಿನಗಳ ನಂತರ ಟೀಚರ್ ಪಾತ್ರ ಸಿಕ್ಕಿದೆ. ಈ ಹಿಂದೆ “ಸುಂದರ ಕಾಂಡ’ದಲ್ಲಿ ಮಾಡಿದ್ದೆ. ಆದರೆ, ಅದು ಲವ್‌ಸ್ಟೋರಿ, ಫ್ಯಾಮಿಲಿ ನಡುವೆ ಸಾಗಿತ್ತು. ಆದರೆ, ಇದು ಸಾಮಾಜಿಕ ಕಾಳಜಿಯುಳ್ಳ ಶಿಕ್ಷಕನ ಪಾತ್ರ. ನಿರ್ದೇಶಕ ಪ್ರಮೋದ್ ಚಕ್ರವರ್ತಿ ಬೇರೆ ತರಹದ ಕಥೆ ಮಾಡಿಕೊಂಡು ಬಂದಿದ್ದಾರೆ. ಪಾತ್ರ ಕೂಡಾ ರೆಗ್ಯುಲರ್ ಆಗಿಲ್ಲ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶವಿದೆ. ಯಾಕಾಗಿ ಹೀಗಿದ್ದೇವೆ ಮತ್ತು ಹೀಗಿರಬೇಕು ಎಂಬ ಅಂಶದೊಂದಿಗೆ ಸಾಗುತ್ತದೆ.
ಮುಖ್ಯವಾಗಿ ಈ ಸಿನಿಮಾ ಸರ್ಕಾರಿ ಶಾಲೆಯ ಇವತ್ತಿನ ಸ್ಥಿತಿಗತಿ, ಪಾಲಕರ ಮನಸ್ಥಿತಿ ಸುತ್ತ ಕಥೆ ಸಾಗುತ್ತದೆ. ಸರ್ಕಾರಿ ಶಾಲೆಗೆ ಕಳುಹಿಸಿದರೆ ಪ್ರತಿಷ್ಠೆ ಕಮ್ಮಿಯಾಗುತ್ತದೆ, ಖಾಸಗಿ ಶಾಲೆಗೆ ಕಳುಹಿಸಿದ ಕೂಡಲೇ ತಾವು ಗ್ರೇಟ್ ಎಂಬ ಮನಸ್ಥಿತಿ ಇವತ್ತಿದೆ. ಶಿಕ್ಷಣ ವಿಷಯದಲ್ಲಿ ಮೇಲು-ಕೀಳು ಎಂಬ ಭಾವನೆ ಇರಬಾರದು, ಅದನ್ನು ಬೆಳೆಉಲು ಬಿಡಬಾರದು ಎಂಬ ವಿಷಯನ್ನು ಹೈಲೈಟ್ ಮಾಡಲಾಗಿದೆ. ಇಲ್ಲಿ ನನ್ನ ಪಾತ್ರ ಸರ್ಕಾರಿ ಶಾಲೆಯ ಸಮಸ್ಯೆ, ಪಾಲಕರ ಮನಸ್ಥಿತಿಯನ್ನು ಬದಲಿಸುವ ಸುತ್ತ ಸಾಗುತ್ತದೆ. ಇಲ್ಲಿ ನಾಯಕ ಅವನದೇ ಆದ ಶೈಲಿಯಲ್ಲಿ ಸಮಸ್ಯೆಗಳನ್ನು
ನಮ್ಮನ್ನು ನಾವು ಕೀಳಾಗಿ ನೋಡಬಾರದು: ಇವತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಮೇಲು-ಕೀಳೆಂಬ ಭಾವನೆ ಶುರುವಾಗಿದೆ. ಅದೊಂಥರ ನಮ್ಮನ್ನು ನಾವು ಕೀಳಾಗಿ ನೋಡಿದ್ದಂತೆ. ಮೊದಲು ಆ ಭಾವನೆ ಹೋಗಬೇಕು. ನಮ್ಮ ನೆಲದಲ್ಲಿ ನಾವು ಹಿಂಜರಿಕೆಪಡಬಾರದು. ಶಿಕ್ಷಣಕ್ಕೆ ಖಾಸಗಿ, ಸರ್ಕಾರಿ ಶಾಲೆ ಅನ್ನೋದು ಮುಖ್ಯವಲ್ಲ. ಎಲ್ಲರಿಗೂ ಶಿಕ್ಷಣ ಸಿಗೋದು ಮುಖ್ಯವಾಗುತ್ತದೆ. ನಾನು ಕೂಡಾ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ನಾವು ಏನೇ ಓದಿದ್ರೂ, ಎಷ್ಟೇ ಇಂಗ್ಲೀಷ್ ಕಲಿತಿದ್ರು, ನಿದ್ದೆ ಮಾಡುವಾಗ ಬರೀ ನಿದ್ದೇ ಮಾಡ್ತೀವಿ ಹೊರತು, ಇಂಗ್ಲೀಷ್ ಮಾತನಾಡಿಕೊಂಡು ಮಲಗಲ್ಲ.
ವಾತಾವರಣದಲ್ಲಿನ ಗಾಳಿ ಸರ್ಕಾರಿ ಶಾಲೆಗೊಂದು, ಖಾಸಗಿ ಶಾಲೆಗೊಂದು ಬೀಸೋದಿಲ್ಲ. ನಮ್ಮನ್ನು ನಾವೇ ಕೀಳಾಗಿ ಕಾಣುತ್ತಾ, ತೊಂದರೆ ಅನುಭವಿಸುತ್ತಿದ್ದೇವೆ. ಆ ವಿಷಯದ ಸುತ್ತ “ದ್ರೋಣ’ ಸಾಗುತ್ತದೆ. ಈ ಸಿನಿಮಾ ಒಂದು ಚಳವಳಿಯಾಗಿ ಬದಲಾಗಬೇಕು, ಜನ ಬದಲಾಗಬೇಕು ಎಂಬ ಆಸೆ ಇದೆ. ಈ ಹಿಂದೆ “ಬಂಗಾರದ ಮನುಷ್ಯ’ ನೋಡಿ ಅನೇಕರು ಬದಲಾಗಿದ್ದರು. ಅದೇ ತರಹ ಈ ಸಿನಿಮಾವೂ ಶಿಕ್ಷಣ ವಿಷಯದಲ್ಲಿ ಬದಲಾವಣೆ ತಂದರೆ ನಮ್ಮ ಪ್ರಯತ್ನ ಸಾರ್ಥಕ.
ಲಾಂಗ್ ಬದಲು ಪೆನ್ನು ಹಿಡಿದಿದ್ದೇನೆ: ಈ ಹಿಂದೆ ಅನೇಕ ಸಿನಿಮಾದಲ್ಲಿ ಲಾಂಗ್ ಹಿಡಿದಿದ್ದೇನೆ. ಆದರೆ ಈ ಸಿನಿಮಾದಲ್ಲಿ ಪೆನ್ನು ಹಿಡಿದಿದ್ದೇನೆ. ಚಿತ್ರದ ಆಶಯಕ್ಕೆ ತಕ್ಕಂತೆ ನನ್ನ ಪಾತ್ರ ಸಾಗುತ್ತದೆ. ಚಿತ್ರದ ಟೈಟಲ್ ಫಾಂಟ್ ಅನ್ನು ಕೂಡಾ ಕೈಯಲ್ಲಿ ಬರೆದಂತೆ ಡಿಸೈನ್ ಮಾಡಿದ್ದೇವೆ. ನನ್ನ ಕೆಲವು ಅಭಿಮಾನಿಗಳು ಕೇಳಿದರು, “ಏನ್ ಶಿವಣ್ಣ ಟೈಟಲ್ ಡಿಸೈನ್ ಹೀಗಿದೆ’ ಎಂದು. ಒಬ್ಬ ನಟನಿಂದ ಅಭಿಮಾನಿಗಳು ಕೂಡಾ ಮಾಡಿದ ಪಾತ್ರವನ್ನೇ, ಒಂದೇ ಗೆಟಪ್ ಅನ್ನೇ ನಿರೀಕ್ಷಿಸಬಾರದು.
ಒಬ್ಬ ನಟ ಬೇರೆ ತರಹದ ಪಾತ್ರ ಮಾಡಲು ಅವಕಾಶ ನೀಡುವ ಜೊತೆಗೆ ಅದನ್ನು ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ. “ದ್ರೋಣ’ದಲ್ಲಿ ಮನರಂಜನೆಗೇನು ಕೊರತೆಯಿಲ್ಲ. ಸಂದರ್ಭಕ್ಕೆ ತಕ್ಕಂತೆ ಆ್ಯಕ್ಷನ್ ಕೂಡಾ ಇದೆ. ಅದಕ್ಕಿಂತ ಹೆಚ್ಚಾಗಿ ಈ ಸಿನಿಮಾ ಪ್ರೇಕ್ಷಕರಿಗೆ ಬೇಗನೇ ಕನೆಕ್ಟ್ ಆಗುತ್ತದೆ. ಇಲ್ಲಿ ನನ್ನ ಬಾಡಿ ಲಾಂಗ್ವೇಜ್ ಕೂಡಾ ಭಿನ್ನವಾಗಿರುತ್ತದೆ. ಈ ಚಿತ್ರದಲ್ಲಿ ಮಕ್ಕಳ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಮಕ್ಕಳ ಜೊತೆ ನಾನು ಮಕ್ಕಳಾಗಿ ಹೊಸ ವಿಚಾರವನ್ನು ಕಲಿಯುತ್ತೇನೆ.
ನಾನು ಆಂಜನೇಯ ಭಕ್ತ: ಚಿತ್ರದ ಫೋಟೋಶೂಟ್‌ನಲ್ಲಿ ನಾನು ಕೇಸರಿ ಬಾವುಟ ಹಿಡಿದಿದ್ದೇನೆ. ಅನೇಕರು ಕೇಳುತ್ತಾರೆ ಅದಕ್ಕೇನು ಕಾರಣವೆಂದು. ಇಲ್ಲಿ ಯಾವುದೆ ಧರ್ಮದ ವಿಚಾರವನ್ನು ಹೇಳಿಲ್ಲ. ಈ ಚಿತ್ರದಲ್ಲಿ ನಾನು ಆಂಜನೇಯನ ಭಕ್ತ ಕೂಡಾ. ನನಗೆ ಹಿಂದಿನಿಂದಲೂ ಆಂಜನೇಯ ಎಂದರೆ ಇಷ್ಟ. ಅದರಲ್ಲೂ “ಭಜರಂಗಿ’ ಮಾಡಿದ ನಂತರ ತುಂಬಾನೇ ಇಷ್ಟ. ಆಂಜನೇಯ ಅಂದರೆ ನಮಗೆ ಹೀರೋ ತರಹ.
ನನ್ನ ಶಿಕ್ಷಕರು ನೆನಪಾಗುತ್ತಿದ್ದಾರೆ: ಈ ಚಿತ್ರದಲ್ಲಿ ನಾನು ಶಿಕ್ಷಕನ ಪಾತ್ರ ಮಾಡುತ್ತಿರುವುದರಿಂದ ನನಗೆ ನನ್ನ ಶಿಕ್ಷಕರು ನೆನಪಾಗುತ್ತಾರೆ. ಇಲ್ಲಿ ಬಾಡಿ ಲಾಂಗ್ವೇಜ್ ಕೂಡಾ ಭಿನ್ನವಾಗಿರುವುದರಿಂದ ನನ್ನ ಯಾವ ಶಿಕ್ಷಕರ ಮ್ಯಾನರೀಸಂ ಅನ್ನು ಫಾಲೋ ಮಾಡಿದರೆ ಚೆಂದ ಎಂದು ಆಲೋಚಿಸುತ್ತಿದ್ದೇನೆ. ಅದು ಚಾಕ್ ಹಿಡಿಯೋದರಿಂದ ಹಿಡಿದು ಕಿವಿ ಹಿಂಡುವವರೆಗೆ …
ಬ್ಯಾಕ್ ಟು ಬ್ಯಾಕ್ ಸಿನಿಮಾ: ಈಗಾಗಲೇ ನನ್ನ “ದಿ ವಿಲನ್’, “ಕವಚ’ ಚಿತ್ರಗಳ ಚಿತ್ರೀಕರಣ ಮುಗಿದಿದೆ. “ರುಸ್ತುಂ’ ನಡೆಯುತ್ತಿದೆ. ಈಗ ಮೊದಲಿಗೆ “ದಿ ವಿಲನ್’ ಬಿಡುಗಡೆಯಾಗುತ್ತದೆ. ಆ ನಂತರ “ಕವಚ’, ಅದರ ಬೆನ್ನಿಗೆ “ರುಸ್ತುಂ’ ಬರಲಿದೆ. ಮುಂದಿನ ವರ್ಷ “ದ್ರೋಣ’ ತೆರೆಕಾಣಲಿದೆ. “ದ್ರೋಣ’ ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಎಲ್ಲರಿಗಿಂತ ದೊಡ್ಡ ಬಾಸ್ ಮೇಲಿದ್ದಾನೆ: ಸದ್ಯ ಚಿತ್ರರಂಗದಲ್ಲಿ ಅಭಿಮಾನಿಗಳ ಮಧ್ಯೆ “ಬಾಸ್’ ವಿಚಾರದಲ್ಲಿ ಕಿತ್ತಾಟ ನಡೆಯುತ್ತಿದೆ. ಅದು ಅನಾವಶ್ಯಕ ಕಿತ್ತಾಟ. ಅವರವರ ಮನೆಗೆ ಅವರವರೇ ಬಾಸ್. ಆಯಾ ನಟನ ಅಭಿಮಾನಿಗಳಿಗೆ ಅವನೇ ಬಾಸ್. ಯಾರಿಗೆ ಯಾರು ಬಾಸ್ ಆದ್ರು ಖುಷಿಯೇ. ಜಗಳವಾಡುವುದರಲ್ಲಿ ಅರ್ಥವಿಲ್ಲ. ನಮ್ಮ ಸಿನಿಮಾವನ್ನು ನೀವು ನೋಡಿ, ನಿಮ್ಮ ಸಿನಿಮಾವನ್ನು ನಾವು ನೋಡುತ್ತೇನೆ ಎಂಬ ವಾತಾವರಣ ನಿರ್ಮಾಣವಾಗಬೇಕು. ಆಗ ಕನ್ನಡ ಬೆಳೆಯುತ್ತದೆ. ಇನ್ನು, ಎಲ್ಲರಿಗಿಂತ ದೊಡ್ಡ ಬಾಸ್ ಮೇಲಿದ್ದಾನೆ. ಆತ ಎಲ್ಲಾ ನೋಡುತ್ತಿದ್ದಾನೆ. ಯಾರಿಗೆ ಏನು ಕೊಡಬೇಕೋ ಅದನ್ನು ಕೊಡುತ್ತಾನೆ.