ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್ ನಟರ ಬರ್ತ್‌ಡೇ ಅಂದ್ರೆ ಅವರ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ಕೂಡ ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಯಾವುದೇ ಸ್ಟಾರ್ ಇರಲಿ ತಮ್ಮ ಬರ್ತ್‌ಡೇ ದಿನವನ್ನು ಅಭಿಮಾನಿಗಳ ಜೊತೆ ಆಚರಿಸುವುದು, ಆ ದಿನವನ್ನು ಅಭಿಮಾನಿಗಳಿಗಾಗಿ ಮೀಸಲಿಡುವುದು ಚಿತ್ರರಂಗದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ಇನ್ನು ಸುಮಾರು ಮೂರು ದಶಕಗಳಿಂದ ನಟ ಶಿವರಾಜಕುಮಾರ್ ಕೂಡ ತಮ್ಮ ಬರ್ತ್‌ಡೇಯನ್ನು ಅಭಿಮಾನಿಗಳ ಸಮ್ಮುಖದಲ್ಲೇ ಆಚರಿಸಿಕೊಂಡು ಈ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಅದ್ಧೂರಿ ಅಲ್ಲದಿದ್ದರೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದೂ ಇದೆ. ಆದರೆ ಈ ಬಾರಿ ಮಾತ್ರ ಈ ಸಂಪ್ರದಾಯ ಸ್ವಲ್ಪ ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೌದು, ಇದೇ ಜುಲೈ 12ರಂದು ಶಿವರಾಜಕುಮಾರ್ ಅವರ ಹುಟ್ಟುಹಬ್ಬವಿದ್ದು, ಜುಲೈ ಮೊದಲ ವಾರದಲ್ಲೇ ಶಿವಣ್ಣ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಹಾಗಾಗಿ ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಶಿವಣ್ಣ ಕರ್ನಾಟಕದಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ. ಶಿವರಾಜ್ ಕುಮಾರ್ ಭುಜದ ನೋವಿನಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಬೇಕಾಗಿದೆ.
ಜುಲೈ 6 ರಂದು ಲಂಡನ್‌ಗೆ ಪ್ರಯಾಣ ಬೆಳೆಸಲಿರುವ ಶಿವರಾಜ ಕುಮಾರ್ ಸುಮಾರು 20 ದಿನಗಳ ಕಾಲ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. ಜುಲೈ ಕೊನೆವಾರ ಚಿಕಿತ್ಸೆ ಮುಗಿಸಿಕೊಂಡು ಶಿವಣ್ಣ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ. ಹೀಗಾಗಿ ಈ ಬಾರಿ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಶಿವಣ್ಣ ಸಿಗುತ್ತಿಲ್ಲ .
ಇನ್ನು ಈ ವಿಷಯ ಸಹಜವಾಗಿಯೇ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದು, ಕೊನೆ ಕ್ಷಣದಲ್ಲಿ ಶಿವಣ್ಣ ಅವರ ಕಾರ್ಯಕ್ರಮದಲ್ಲಿ ಏನಾದರೂ ಬದಲಾವಣೆಗಳು ಆಗಬಹುದಾ, ಎಂದಿನಂತೆ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
ಈ ಬಾರಿಯ ಹುಟ್ಟುಹಬ್ಬಕ್ಕೆ ನಾನಿರೋದಿಲ್ಲ. ಚಿಕಿತ್ಸೆಗಾಗಿ ಲಂಡನ್‌ಗೆ ಹೋಗುತ್ತಿದ್ದೇನೆ. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಂತರವೇ ಹೋಗಬೇಕೆಂದುಕೊಂಡಿದ್ದೆ. ಆದರೆ, ನನಗೆ ಅಲ್ಲಿನ ವೈದ್ಯರು ಸಿಗೋದು ಜುಲೈ 10ಕ್ಕೆ. ಆ ದಿನ ನಾನು ಅಲ್ಲಿರಲೇಬೇಕು. ಹಾಗಾಗಿ, ಜುಲೈ 6 ರಂದು ಹೋಗಿ, ಜುಲೈ 21 ರಂದು ವಾಪಾಸ್ ಬರುತ್ತಿದ್ದೇನೆ.
-ಶಿವರಾಜ್‌ಕುಮಾರ್, ನಟ