ನಂಜನಗೂಡು: ಪಟ್ಟಣದ ಶಂಕರಪುರ ಬಡಾವಣೆ ಸಮೀಪದಲ್ಲಿದ್ದ ಕಳಪೆ ಕಾಮಗಾರಿ ಹಾಗೂ ಮರಳು ಮಾಫಿಯಾಕ್ಕೆ ಸಿಕ್ಕಿ ಕೊಚ್ಚಿಹೋದ ಹುಲ್ಲಹಳ್ಳಿ ನಾಲೆ ಸ್ಥಳಕ್ಕೆ ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳದಲ್ಲಿ ಹಾಜರಿದ್ದ ನೀರಾವರಿ ಸಹಾಯಕ ಎಂಜಿನಿಯರ್ ಅರುಣಕುಮಾರ್, ಕಾಮಗಾರಿ ಗುತ್ತಿಗೆ ಪಡೆದಿರುವ ಪಿಡಿಆರ್ ಕಂಪನಿ ಎಂಜಿನಿಯರ್ ಬಲರಾಮರೆಡ್ಡಿ ಅವರಿಂದ ಮಾಜಿ ಸಚಿವರು ಈ ದುರ್ಘಟನೆ ಕುರಿತು ಮಾಹಿತಿ ಪಡೆದರು.
ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪಿಡಿಆರ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. 15 ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆಂದು ನೀರಾವರಿ ಇಲಾಖೆ ಇಇ ಮರಿಸ್ವಾಮಿ ಮೊಬೈಲ್ ಮೂಲಕ ಶಿವಣ್ಣರಿಗೆ ಮಾಹಿತಿ ನೀಡಿದರು.
ಅಧಿಕಾರಿಗಳ ವೈಫಲ್ಯ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟೆ ಶಿವಣ್ಣ, 104 ಕೋಟಿ ರೂ. ಅನುದಾನದಲ್ಲಿ ನಾಲೆಯ ಆಧುನೀಕರಣ ನಡೆದು ವರ್ಷ ಪೂರ್ಣಗೊಳ್ಳುವ ಮೊದಲೇ ನಾಲೆ ಕುಸಿದಿದೆ. ಇದು ನಮ್ಮ ಅಧಿಕಾರಿಗಳ ವೈಫಲ್ಯ ಎಂದರು.
ಮರಳು ಮಾಫಿಯಾ ಅಥವಾ ಕಳಪೆ ಕಾಮಗಾರಿ ಯಾವುದು ಕಾರಣ ಎಂಬುದರ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲಾಖೆಗಳ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ಇಲ್ಲಿ ನಡೆದಿದೆ. ಮಳೆ ನೀರಿನ ಪ್ರವಾಹಕ್ಕೆ ನಾಲೆ ಕೊಚ್ಚಿ ಹೋಗಿದೆ ಎಂಬುದು ಸುಳ್ಳು. ಮರಳು ಮಾಫಿಯಾ ಹಾಗೂ ಕಾಮಗಾರಿಯ ಗುತ್ತಿಗೆದಾರರನ್ನು ರಕ್ಷಿಸಲು ಈ ನೇಪ ಹೇಳಲಾಗುತ್ತಿದೆ ಎಂದು ಆರೋಪಿಸಿದರು.
ಉಗ್ರ ಹೋರಾಟ: 104 ಕೋಟಿ ರೂ. ಮೊತ್ತದ ಆಧುನೀಕರಣ ಕಾಮಗಾರಿ ಕೊಚ್ಚಿ ಹೋಗಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆಗೆ ಸರ್ಕಾರ ಶಿಫಾರಸ್ಸು ಮಾಡಬೇಕು. ಇಲ್ಲವಾದಲ್ಲಿ ಬಿ ಜೆಪಿ ವತಿಯಿಂದ ಉಗ್ರ ಹೋರಾಟ ಕೈಗೊಳ್ಳುವುದಾಗಿ ಮಾಜಿ ಸಚಿವರೂ ಆದ ಶಿವಣ್ಣ ಈ ಸಮಯದಲ್ಲೇ ಎಚ್ಚರಿಕೆ ನೀಡಿದರು. ಅವರೊಂದಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಸನ್ನಗೌಡ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ನಗರಸಭಾ ಸದಸ್ಯ ರಾಜೇಶ್, ವಳಗೆರೆ ಪುಟ್ಟಸ್ವಾಮಿ ಇತರರು ಇದ್ದರು.