Advertisement

ತುಂಗಾ ನದಿಗೆ ಕೊಳಚೆ ನೀರು;ಮೀನುಗಳ ಸಾವಿಗೆ ಹೊಣೆ ಯಾರು?

03:17 PM Dec 09, 2019 | Naveen |

ಶರತ್‌ ಭದ್ರಾವತಿ
ಶಿವಮೊಗ್ಗ:
ಸ್ಮಾರ್ಟ್‌ ಸಿಟಿ ಶಿವಮೊಗ್ಗದ ಕೊಳಚೆ ಪವಿತ್ರ ನದಿ ತುಂಗೆಗೆ ಸೇರಿ 20 ತಳಿಯ ಮೀನುಗಳನ್ನು ಆಪೋಷನ ತೆಗೆದುಕೊಂಡಿದ್ದು ಗಂಗಾ ಸ್ನಾನ, ತುಂಗಾ ಪಾನ ಎಂಬ ನಾಣ್ಣುಡಿಯನ್ನು ಬದಲಾಯಿಸುವ ಪರಿಸ್ಥಿತಿ ಬಂದಿದೆ.

Advertisement

ನಗರದ ಕೊಳಚೆಯನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇತ್ತ ಎಸ್‌ಟಿಪಿ ಪ್ಲಾಂಟ್‌ ಕಾಮಗಾರಿ ಕುಂಟುತ್ತಾ ಸಾಗಿದ್ದು ನವೆಂಬರ್‌ ತಿಂಗಳಲ್ಲೇ ನದಿಯ ಅಂಚಿನಲ್ಲಿ ಓಡಾಡಲು ಆಗುವುದಿಲ್ಲ. ಕೊಳಚೆ ವಾಸನೆ ಮೂಗಿಗೆ ರಾಚುತ್ತದೆ. ಶಿವಮೊಗ್ಗ ನಗರ ವಿಸ್ತಾರವಾಗಿ ಬೆಳೆದಿದ್ದು ನದಿಗೆ ಸೇರುವ ಕೊಳಚೆ ಪ್ರಮಾಣವು ಹೆಚ್ಚಾಗಿದೆ.

ಅಷ್ಟೇ ಪ್ರಮಾಣದಲ್ಲಿ ಜೀವ ಸಂಕುಲಗಳ ನಾಶ ಆಗುತ್ತಿದೆ. ಹಿಂದೆ ಶಿವಮೊಗ್ಗ ನಗರ ಸ್ಥಳೀಯ ಮೀನುಗಾರರ ಸ್ವರ್ಗವಾಗಿತ್ತು. ಸಾಂಪ್ರದಾಯಿಕವಾಗಿ ಮೀನು ಹಿಡಿದು ಬೀದಿಗಳಲ್ಲಿ ಮಾರುವ ಪರಂಪರೆ ಇತ್ತು. ಮುಂಜಾನೆ ಮೀನು ಹಿಡಿಯುವ ಸ್ಥಳಗಳಿಗೇ ಹೋಗಿ ಖರೀದಿಸುವ ವಾತಾವರಣವಿತ್ತು. ಮೀನುಗಾರರೂ ಕೂಡ ಉಕ್ಕಡ, ಹಾಯಿದೋಣಿಗಳಲ್ಲಿ ಹೋಗಿ ಬಲೆ ಬೀಸಿ, ಎಳೆಬಿಸಿಲು ಜಾರುವ ಮುನ್ನ ಹತ್ತಾರು ಕೆಜಿ ಮೀನು ಹಿಡಿಯುತ್ತಿದ್ದರು.

ತುಂಗಾ ತೀರದಲ್ಲೊಬ್ಬ ಗಾಳ ಹಾಕಿ ಕುಳಿತುಕೊಂಡಿದ್ದಾನೆಂದರೆ ಅವನ ಪಕ್ಕದಲ್ಲಿನ ಚೀಲದಲ್ಲಿ ಮೀನುಗಳು ಪಟಪಟನೇ ಬಡಿದಾಡುತ್ತಿದ್ದವು. ಆದರೆ, ಈಗ ಪರಿಸ್ಥಿತಿ ತುಂಬಾ ಕರಾಳವಾಗಿದೆ. ತುಂಗಾ ತೀರ ಕೊಳಕು ಅರಸಿ ಬರುವ ಹಂದಿಗಳ ಸಾಮ್ರಾಜ್ಯ, ಪ್ಲಾಸ್ಟಿಕ್‌ ಕಾರ್ಖಾನೆಯಾಗಿ ಬದಲಾಗಿದ್ದು, ದುರ್ನಾತ ಬೀರುತ್ತಾ ರೋಗ ಹರಡುವ ಸ್ಥಳವಾಗಿದೆ. ಚಳಿಗಾಲದಲ್ಲಿ ನೀರಿನ ಹರಿವು ಕಡಿಮೆಯಾದರೂ ತಿಳಿನೀರಿನಲ್ಲಿ ವಿರಮಿಸುತ್ತಿದ್ದ ಹತ್ತಾರು ದೇಸಿ ಮೀನಿನ ತಳಿಗಳಿಂದು ಸಿಟಿ ಸರಹದ್ದಿನಲ್ಲಿ ಮಾಯವಾಗಿವೆ. ಬಾಂಬೆ ಕಾಟ್ಲಾ ಎಂದು ಸ್ಥಳೀಯವಾಗಿ ಕರೆಯುವ ಮೀನಿನ ಸಂತತಿ ಮಾತ್ರ ಉಳಿದುಕೊಂಡಿದೆ. ಪ್ರತಿದಿನ ಹತ್ತಾರು ಮೀನುಗಾರರು ಇಲ್ಲಿ ಗಿರಕಿ ಹೊಡೆಯುತ್ತಾರೆ. ಆದರೆ ಎರಡು ಕೆಜಿ ಮೇಲೆ ಮೀನು ಸಿಗುವುದಿಲ್ಲ.

ಗೊಂದಿ ಚಟ್ನಹಳ್ಳಿಯ ಪ್ರಕಾಶ್‌ ಇದೇ ಸ್ಥಳದಲ್ಲಿ ಹನ್ನೆರಡು ವರ್ಷದ ಹಿಂದೆ ಗೌರಿ ಮೀನು, ಔಲು, ಗಿರ್ಲು ಸೇರಿ ದಿನಕ್ಕೆ 20 ಕೆ.ಜಿ ಮೀನು ಹಿಡಿಯುತ್ತಿದ್ದರು. ಆದರೆ ಪ್ರಸ್ತುತ 2 ಕೆಜಿ ಸಿಗುವುದು ಕಷ್ಟವಿದೆ. ಅದು ಕೂಡ ಒಂದೇ ಜಾತಿಯ ಮೀನು. ತುಂಗಾ ತೀರದಲ್ಲಿ ಸೆಪ್ಟೆಂಬರ್‌ನಿಂದಲೇ ಮೀನುಗಾರಿಕೆ ಆರಂಭವಾಗುತ್ತೆ. ಕಾರಣ ತುಂಗಾ ಜಲಾಶಯವಿರುವುದರಿಂದ ನೀರಿನ ಹರಿವು ದಿಢೀರನೇ ಕ್ಷೀಣಿಸುತ್ತದೆ. ಅಲ್ಲಲ್ಲಿ ವಿಸ್ತಾರವಾಗಿ ಚಾಚಿಕೊಂಡು, ಕೆಲವೆಡೆ ಬರಿದಾಗುತ್ತಾ ಬೇಸಿಗೆಯವರೆಗೆ ಮೀನಿನ ಆಶ್ರಯವಾಗಿರುವ ನೀರಿಗೆ ನಗರದ ತ್ಯಾಜ್ಯ ಸೇರಿ ಜೀವ ವೈವಿಧ್ಯಕ್ಕೆ ಮಾರಕವಾಗಿದೆ.

Advertisement

ನಗರ ವ್ಯಾಪ್ತಿಯ ತುಂಗಾ ನದಿಗೆ ಬಿಡುವ ಹೊಲಸು ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಈ ಮೀನಿನ ಸಂತತಿ ಉಳಿಯುತ್ತಿತ್ತು, ಕಳೆದ ಹತ್ತು ವರ್ಷದಲ್ಲಿ ಇಪ್ಪತ್ತು ವಿವಿಧ ಬಗೆಯ ಮೀನು ತಳಿಗಳನ್ನು ಶಿವಮೊಗ್ಗದ ಹೊಲಸು ನುಂಗಿ ಹಾಕಿದೆ. ಸ್ಮಾರ್ಟ್‌ ಸಿಟಿಗೆ ಕೋಟಿಗಟ್ಟಲೇ ಹಣ ಹರಿಯುತ್ತಿದ್ದರೂ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಈ ಕರಾಳ ಸತ್ಯವನ್ನು ಮೀನುಗಾರಿಕೆ ಇಲಾಖೆ ಕೂಡ ಒಪ್ಪಿಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next