Advertisement

ಕೋಟೆಗಂಗೂರಲ್ಲಿ ಸೆಟಲೈಟ್ ರೈಲ್ವೆ ಸ್ಟೇಷನ್‌ ಮಂಜೂರಾತಿ ನಿರೀಕ್ಷೆ

12:54 PM Jun 29, 2019 | Team Udayavani |

ಶಿವಮೊಗ್ಗ: ಕೋಟೆಗಂಗೂರಿನಲ್ಲಿ ಸೆಟಲೈಟ್ ರೈಲ್ವೆ ಸ್ಟೇಷನ್‌ ಸ್ಥಾಪಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದು ಈ ಬಾರಿಯ ಬಜೆಟ್‌ನಲ್ಲಿ ಇದು ಮಂಜೂರಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಶುಕ್ರವಾರ ಪ್ರಸ್‌ ಟ್ರಸ್ಟ್‌ನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಬಹು ಕಾಲದಿಂದ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ, ರೈಲ್ವೆ ಸೇರಿದಂತೆ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಈ ಅವಧಿಯಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಚರ್ಚೆ ಆರಂಭವಾಗಿದೆ. ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳು, ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಇವುಗಳಿಗೆ ಚುರುಕಾಗಿ ಚಾಲನೆ ನೀಡಲಾಗುವುದು. ಈಗಾಗಲೇ ವಿಮಾನ ಪ್ರಾಧಿಕಾರದ ಜೊತೆ ಚರ್ಚಿಸಲಾಗಿದ್ದು, ಈಗಿರುವ ವಿಮಾನ ನಿಲ್ದಾಣದಲ್ಲಿಯೇ ರನ್‌ವೇ ಬದಲಾಯಿಸಿ, ಹೊಸ ಗುತ್ತಿಗೆದಾರನ ನೇಮಕ ಮಾಡಿ ಶೀಘ್ರದಲ್ಲೇ ವಿಮಾನ ನಿಲ್ದಾಣ ಸ್ಥಾಪನೆಗೆ ಮರು ಜೀವ ನೀಡಲಾಗುವುದು ಎಂದರು. ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ರೈಲ್ವೆ ಕೆಳ ಹಾಗೂ ಮೇಲ್ಸೇತುವೆ ನಿರ್ಮಾಣವಾಗಬೇಕಾಗಿದೆ. ಜು. 7 ರಂದು ಕೇಂದ್ರ ರೈಲ್ವೆ ಸಚಿವರು ನಗರಕ್ಕೆ ಆಗಮಿಸಲಿದ್ದು, ಅವರೊಡನೆ ಚರ್ಚಿಸಿ ರೈಲ್ವೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ವಿಶೇಷವಾಗಿ ಹೊಸ ರೈಲುಗಳ ಸಂಚಾರಕ್ಕೂ ಸಚಿವರ ಮುಂದೆ ಬೇಡಿಕೆ ಇಡಲಾಗುವುದು. ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ಸೆಟಲೈಟ್ ರೈಲ್ವೆ ಕೇಂದ್ರವನ್ನಾಗಿ ನಿರ್ಮಿಸಲಾಗುವುದು ಎಂದರು.

ಈಗಾಗಲೇ ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ಸುಮಾರು 42 ಕೈಗಾರಿಕೆಗಳು ನಷ್ಟದಲ್ಲಿವೆ ಎಂದು ಗುರುತಿಸಿದೆ. ಅದರಲ್ಲಿ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಕೂಡ ಒಂದು. ವಿಐಎಸ್‌ಎಲ್ನ್ನು ಉಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದ ಅವರು, ಹಾಗೆಯೇ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಕೂಡ ವಿಳಂಬವಾಗದಂತೆ ನಡೆಯಲಿವೆ. ಬಿಎಸ್‌ಎನ್‌ಎಲ್ ಉಳಿಸಲು ಸಹ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೂಗೆದ್ದಿರುವ ಶರಾವತಿ ಉಳಿಸಿ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇದೆ. ಬೆಂಗಳೂರಿಗೆ ನೀರಿನ ಮೂಲಗಳನ್ನು ಹುಡುಕಬೇಕು. ಅಲ್ಲಿನ ಕೆರೆ ಒತ್ತುವರಿಗಳನ್ನು ತಡೆಯಬೇಕು. ಆದರೆ ಲಿಂಗನಮಕ್ಕಿಯಿಂದ ನೀರು ತೆಗೆದುಕೊಂಡು ಹೋಗುವುದು ಸಾಧುವಲ್ಲ. ಅದು ಸಾಧ್ಯವೂ ಇಲ್ಲ ಎಂದ ಅವರು, ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಮುಖ ನೀರಾವರಿ ಯೋಜನೆಗಳು ರೂಪುಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುದಾನಗಳನ್ನು ಸಮರ್ಥವಾಗಿ ಬಳಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಭರವಸೆ ನೀಡಿದರು. ಪ್ರಸ್‌ಟ್ರಸ್ಟ್‌ ಅಧ್ಯಕ್ಷ ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next