ಶರತ್ ಭದ್ರಾವತಿ
ಶಿವಮೊಗ್ಗ: ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಗಳ ಮಧ್ಯೆ ಅಲ್ಲಲ್ಲಿ ಸ್ವಲ್ಪ ಡಾಂಬರು ಹಾಕಲಾಗಿದೆಯೋ..’ ರಸ್ತೆಯ ಅವಸ್ಥೆ ಕಂಡು ಆಟೋ ಚಾಲಕ ಮಂಜುನಾಥ್ ಪ್ರಶ್ನೆ ಇದು.
ಶಿವಮೊಗ್ಗದ ಎಲ್‌ಎಲ್‌ಆರ್ ರೋಡ್‌ನಲ್ಲಿ ಎಲ್ಲಿ ನೋಡಿದರೂ ಗುಂಡಿಗಳೇ. ರಸ್ತೆಯ ಆರಂಭದಿಂದ ಅಂತ್ಯದವರೆಗೆ ಸಾಲು ಸಾಲು ಗುಂಡಿಗಳಿವೆ. ಈ ರಸ್ತೆ ಮಳೆಗಾಲಕ್ಕೂ ಮುನ್ನವೇ ಹಾಳಾಗಿದ್ದು ಡಾಂಬರು ಕಂಡು ಹಲವು ವರ್ಷಗಳೇ ಆಗಿವೆ. ಮಳೆ ಬಂದ ನಂತರವಂತೂ ಇದು ಒಂದು ರಸ್ತೆಯೇ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ಹಾಳಾಗಿದೆ. ಪ್ರತಿಷ್ಠಿತ ಹೊಟೇಲ್ ಹಾಗೂ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಬೈಕ್‌ನಿಂದ ಹಿಡಿದು ಲಾರಿಗಳ ಸಂಚಾರ ಸಾಮಾನ್ಯವಾಗಿದೆ. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಹೋಗಲು ಇದು ಸಮೀಪದ ರಸ್ತೆ ಕೂಡ ಆಗಿರುವುದರಿಂದ ಆಟೋಗಳು ಸಹ ಸರ್ವೇ ಸಾಮಾನ್ಯವಾಗಿದೆ. ಈ ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದು ವಾಹನ ಚಾಲಕರಿಗೆ ಅತಿ ದೊಡ್ಡ ಸವಾಲಾಗಿದೆ.
ವಾಹನ ಚಾಲಕರು ಬೀಳ್ಳೋದು, ಗಾಯಗೊಳ್ಳುವುದು, ವಾಹನಗಳಿಗೆ ಡ್ಯಾಮೇಜ್ ಅಗುವುದೆಲ್ಲ ಎಲ್‌ಎಲ್‌ಆರ್ ರೋಡ್‌ನಲ್ಲಿ ಸಾಮಾನ್ಯವಾಗಿದೆ ಅನ್ನುತ್ತಾರೆ ವ್ಯಾಪಾರಿ ಜಗದೀಶ್. ಈ ರಸ್ತೆಯಲ್ಲಿರುವ ಗುಂಡಿಗಳು ವಾಹನ ಚಾಲಕರಿಗಷ್ಟೇ ಅಲ್ಲ, ಸ್ಥಳೀಯರು, ವ್ಯಾಪಾರಿಗಳಿಗೂ ಕಿರಿಕಿರಿ ಉಂಟು ಮಾಡುತ್ತಿದೆ. ಗುಂಡಿಯಿಂದ ಏಳುವ ಧೂಳು ಮನೆ, ಮಳಿಗೆಗಳಿಗೆ ನುಗ್ಗುತ್ತಿವೆ. ಇದರಿಂದ ವ್ಯಾಪಾರ, ವಹಿವಾಟಿಗೂ ತೊಂದರೆಯಾಗುತ್ತಿದೆ. ಆರೋಗ್ಯದ ಸಮಸ್ಯೆ ಎದುರಾಗುತ್ತಿವೆ.
ಕೂಡಲೆ ಎಲ್‌ಎಲ್‌ಆರ್ ರಸ್ತೆಗೆ ಡಾಂಬರು ಬರಲಿ ಅಂತಾ ಜನರು ಆಗ್ರಹಿಸಿದ್ದಾರೆ. ಆದರೆ ಜನಪ್ರತಿನಿಧಿ ಗಳು, ಅಧಿಕಾರಿಗಳ್ಯಾರೂ ಇದಕ್ಕೆ ಕ್ಯಾರೇ ಅನ್ನದಿರುವುದು ಸ್ಥಳೀಯರು ಆಕೋಶಕ್ಕೆ ಕಾರಣವಾಗಿದೆ.