Advertisement

ಯಕ್ಪಗಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶೋಗಾಥೆ

06:26 PM Dec 30, 2019 | Team Udayavani |

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಜೀವನ ಯಶೋಗಾಥೆ ತಲೆ ತಲಾಂತರಗಳಿಗೆ ಉಳಿಯಬೇಕೆಂಬ ದೃಷ್ಟಿಯಿಂದ ಅಭಿಮಾನಿಯೊಬ್ಬರು ಯಕ್ಷಗಾನ ಪ್ರಸಂಗ “ನರೇಂದ್ರ ವಿಜಯ’ ಕೃತಿ ರಚಿಸಿದ್ದರು. ಈಗ ಅದು ತೆರೆ ಕಾಣಲು ಸಿದ್ಧವಾಗಿದೆ.

Advertisement

ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆದಾಗಿನಿಂದ ಇಲ್ಲಿವರೆಗಿನ ಪ್ರಮುಖ ಘಟನೆಗಳನ್ನು ಯಕ್ಷಗಾನದಲ್ಲಿ ಅಳವಡಿಸಲಾಗಿದೆ. ಅಮಿತ್‌ ಶಾ “ವಿಜಯ’ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ತೀರ್ಥಹಳ್ಳಿ ತಾಲೂಕಿನ ಯಕ್ಷಗಾನ ಕಲಾವಿದೆ ಜ್ಯೋತಿ ಶಾಸ್ತ್ರಿ ಕೃತಿ ರಚಿಸಿದ್ದಾರೆ.

ಅವರ ಮಾವ ದಿ| ಚಿದಂಬರ ಶಾಸ್ತ್ರಿಗಳು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬಾಬ್ರಿ ಧ್ವಂಸ ಪ್ರಕರಣದಲ್ಲಿ ಎಲ್‌.ಕೆ.ಅಡ್ವಾಣಿ ಬಂಧನ ಖಂಡಿಸಿ ಚಳವಳಿ ನಡೆಸಿದ್ದರಿಂದ 14 ದಿನ ಜೈಲು ವಾಸ ಅನುಭವಿಸಿದ್ದರು. ಕಳೆದ ನ.26ರಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಕೃತಿ ಲೋಕಾರ್ಪಣೆಗೊಳಿಸಿದ್ದರು. ಜ್ಯೋತಿ ಅವರ ತಂಡವು ಜ.5ರಂದು ಮಂಗಳೂರಿನ ಕೊಡಿಯಾಲ್‌ಬೈಲ್‌ ನಲ್ಲಿ ಮೊದಲ ಪ್ರದರ್ಶನ ನೀಡಲಿದೆ.

ಕೃತಿ ವಿಶೇಷತೆ ಏನು?: ನರೇಂದ್ರ ಮೋದಿ ಗುಜರಾತ್‌ ಸಿಎಂ ಆದಾಗಿನಿಂದ ಇಲ್ಲಿವರೆಗಿನ ಪ್ರಮುಖ ಘಟನಾವಳಿಗಳನ್ನು ಯಕ್ಷಗಾನಕ್ಕೆ ಪೂರಕವಾಗಿ ಕೃತಿಯನ್ನಾಗಿ ರಚಿಸಲಾಗಿದೆ. ಎರಡೂವರೆ ಗಂಟೆ ಪ್ರದರ್ಶನದಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದು, ಆ ಸಂದರ್ಭದಲ್ಲಿ ತಮ್ಮ ಬಲಗೈ ಭಂಟ ಜೈಲಿಗೆ ಹೋಗಿದ್ದನ್ನು ದುಃ ಖದ ಸಂದರ್ಭವನ್ನಾಗಿ ಹಾಗೂ ಜೈಲಿನಲ್ಲಿ ಕೊಟ್ಟ ಕಷ್ಟಗಳು, ನಂತರ ಜೈಲಿನಿಂದ ಹೊರಬಂದ
ಸಂದರ್ಭವನ್ನು ಸಂತೋಷದ ಕ್ಷಣವನ್ನಾಗಿ ತೋರಿಸಿದ್ದಾರೆ. ಯಕ್ಷಗಾನದಲ್ಲೂ ಅದೇ ರೀತಿ ಮೂಡಿ ಬರಲಿದೆ.

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಕಡಿವಾಣಕ್ಕೆ ಕೈಗೊಂಡ ನೋಟ್‌ ಬ್ಯಾನ್‌, ತ್ರಿವಳಿ ತಲಾಖ್‌ ಮಸೂದೆ ಜಾರಿ, ಕೇದಾರನಾಥಕ್ಕೆ ಭೇಟಿ ನೀಡಿದ್ದು (ಈ ಸಂದರ್ಭದಲ್ಲಿ ಶಿವ ಪ್ರತ್ಯಕ್ಷನಾಗುವ ಸನ್ನಿವೇಶ ಕೂಡ ಇದೆ). ಆರ್ಟಿಕಲ್‌ 370 ರದ್ದು ಮಾಡಿದ್ದು, ಇದರಿಂದ ಉಂಟಾದ ಪರಿಣಾಮಗಳು, ಬಾಲಾಕೋಟ್‌ ಉಗ್ರ ಶಿಬಿರದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಹೀಗೆ ಅನೇಕ ವಿಷಯಗಳು ಪ್ರಸಂಗದಲ್ಲಿ ಬರಲಿವೆ. ಸರ್ಜಿಕಲ್‌ ಸ್ಟ್ರೈಕ್‌ ವಿಷಯವನ್ನು ಮಾತಿನಲ್ಲಿ ಹೇಳಲಿದ್ದಾರೆ.

Advertisement

ಹೀಗೆ ಹಲವು ದಿನಗಳ ಪರಿಶ್ರಮದಿಂದ ಅಂತಿಮ ರೂಪ ಕೊಡಲು ಪರಿಶ್ರಮ ಹಾಕುತ್ತಿದ್ದಾರೆ ಕಲಾವಿದೆ ಜ್ಯೋತಿ ಶಾಸ್ತ್ರಿ. ನಿಜ ಜೀವನದಲ್ಲಿ ಚಂದ್ರಯಾನ-2 ಯೋಜನೆಯು ನಿಗದಿತ ಗುರಿ ತಲುಪದಿದ್ದರೂ ಅದೊಂದು ಐತಿಹಾಸಿಕ ಸಾಧನೆ ಹಿನ್ನೆಲೆಯಲ್ಲಿ ತಮ್ಮ ಕೃತಿಯಲ್ಲಿ ಯೋಜನೆಯನ್ನು ಯಶಸ್ವಿಗೊಳಿಸಿರುವುದು ಮತ್ತೊಂದು ವಿಶೇಷ.

ಮೋದಿ ಪಾತ್ರದಲ್ಲಿ ಜ್ಯೋತಿ, ಶಾ ಪಾತ್ರದಲ್ಲಿ ವರದಾ
ಯಕ್ಷಗಾನ ಕಲಾವಿದೆಯಾಗಿರುವ ಜ್ಯೋತಿ ಚೊಚ್ಚಲ ಕೃತಿಯಾಗಿ “ನರೇಂದ್ರ ವಿಜಯ’ ರಚಿಸಿದ್ದಲ್ಲದೇ ಆ ಪಾತ್ರವನ್ನು ತಾವೇ ಖುದ್ದು ನಿರ್ವಹಿಸುತ್ತಿದ್ದಾರೆ. ಅಮಿತ್‌ ಶಾ ಪಾತ್ರವನ್ನು ಶಿವಮೊಗ್ಗದ ವರದಾ ಎಂಬುವರು ನಿರ್ವಹಿಸಲಿದ್ದಾರೆ. ಇವರ ಜತೆ ತ್ರಿವಳಿ ತಲಾಖ್‌ನಲ್ಲಿ ಅಪ್ಪ, ಮಗಳ ಪಾತ್ರ, ಬಾಲಾಕೋಟ್‌ ದಾಳಿ ವೇಳೆ ಸೈನಿಕರು, ಶಿವ ಪ್ರತ್ಯಕ್ಷನಾಗುವುದು, ನೋಟ್‌ ಬ್ಯಾನ್‌ ಕುರಿತು ಓರ್ವ ಕಲಾವಿದ ಸೇರಿ 7 ಮಂದಿ ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ನರೇಂದ್ರ ಮೋದಿ ಮಹಾನ್‌ ದೇಶಭಕ್ತ, ಶಿವಭಕ್ತ. ಅವರ ಕುರಿತು ಕೃತಿ ರಚಿಸಿದ್ದೇ ನನ್ನ ಪುಣ್ಯ. ಈಗ ಅವರ ಪಾತ್ರವನ್ನು ನಾನೇ ನಿರ್ವಹಿಸುತ್ತಿರುವುದು ಪೂರ್ವ ಜನ್ಮದ ಪುಣ್ಯವೆಂದೇ ಭಾವಿಸಿದ್ದೇನೆ. ಆ ಸಂತೋಷವನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ.
ಜ್ಯೋತಿ ಶಾಸ್ತ್ರಿ,
ಯಕ್ಷಗಾನ ಕಲಾವಿದೆ

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next