Advertisement

ಸುಳ್ಳುಗಳ ಮಧ್ಯೆ ಸತ್ಯ ಹೇಳ್ಳೋದು ಕಷ್ಟ

12:07 PM Jul 31, 2019 | Team Udayavani |

ಶಿವಮೊಗ್ಗ: ಪತ್ರಕರ್ತರು ತಮ್ಮದಲ್ಲದ ಕಾರಣಕ್ಕಾಗಿ ಟೀಕೆಗೆ ಒಳಗಾಗುತ್ತಿದ್ದಾರೆ ಎಂದು ಪತ್ರಕರ್ತ ರವೀಂದ್ರಭಟ್ ಐನಕೈ ವಿಷಾದಿಸಿದರು.

Advertisement

ಮಂಗಳವಾರ ಪ್ರಸ್‌ ಟ್ರಸ್ಟ್‌ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸುಳ್ಳುಗಳ ನಡುವೆ ಸತ್ಯ ಹೇಳುವುದು ತುಂಬಾ ಕಷ್ಟವಾಗುತ್ತದೆ. ಪತ್ರಕರ್ತರು ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ರಾಜಕಾರಣ ಬಿಟ್ಟರೆ ಹೆಚ್ಚು ಟೀಕೆಗೆ ಒಳಗಾಗುತ್ತಿರುವುದು ಮಾಧ್ಯಮ ಕ್ಷೇತ್ರ. ಅದರಲ್ಲೂ ಎಲೆಕ್ಟ್ರಾನಿಕ್‌ ಮಾಧ್ಯಮವಂತೂ ತುಂಬಾ ಟೀಕೆಗೆ ಒಳಗಾಗುತ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ನಮ್ಮದಲ್ಲದ ಕಾರಣಕ್ಕೆ ನಾವು ಟೀಕೆಗೆ ಒಳಗಾಗಿದ್ದೇವೆ ಎಂದರು.

ಪತ್ರಿಕೋದ್ಯಮ ಅಭಿರುಚಿ ಮತ್ತು ರುಚಿಯ ನಡುವೆ ಸದಾ ಮುಖಾಮುಖೀಯಾಗಿರುತ್ತದೆ. ರುಚಿ ಸುದ್ದಿಗಳೇ ಬೇರೆ. ಅಭಿರುಚಿ ಸುದ್ದಿಯೇ ಬೇರೆ. ಎರಡರ ನಡುವಿನ ವ್ಯತ್ಯಾಸವನ್ನು ಪತ್ರಕರ್ತರು ಗಮನಿಸಬೇಕು. ಫೀಲ್ಡ್ ಪತ್ರಿಕೋದ್ಯಮ ಕಳೆದುಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲೋ ಕುಳಿತು, ಮೊಬೈಲ್ ಮೂಲಕ, ಟಿವಿ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಸುದ್ದಿಗಳನ್ನು ಬೆನ್ನತ್ತಿ ಸುದ್ದಿ ಮಾಡುವ ಸುಲಭ ದಾರಿಯನ್ನು ನಮ್ಮ ಪತ್ರಕರ್ತರು ಕಂಡುಕೊಳ್ಳತೊಡಗಿದ್ದಾರೆ. ಆದರೆ ಇದು ನಿಜವಾದ ಪತ್ರಿಕೋದ್ಯಮ ಅಲ್ಲ ಎಂದರು.

ಯಾವ ರೀತಿಯ ಸುದ್ದಿಯನ್ನು ನೀಡಬೇಕು ಎಂಬುದೇ ಕಷ್ಟವಾಗುತ್ತಿದೆ. ದೃಶ್ಯ ಮಾಧ್ಯಮಗಳು ಸೇರಿದಂತೆ ಪ್ರಿಂಟ್ ಮೀಡಿಯಾ ಕೂಡ ಏನಾಗಿತ್ತು ಎಂದು ಹೇಳುವುದಕ್ಕೆ ಬದಲಾಗಿ ಮುಂದೆ ಏನಾಗಬಹುದು ಎಂದು ಹೇಳುವ ಸುದ್ದಿಗಳೇ ಮುಖ್ಯವಾಗಿ ಬಿಡುತ್ತವೆ. ಇದು ಪತ್ರಿಕೋದ್ಯಮದ ಮತ್ತೂಂದು ಭಾಷೆಯಾದರೂ ಕೂಡ ಕೆಲವೊಮ್ಮೆ ನಾವೇ ತೀರ್ಮಾನ ಮಾಡುವ ಮಟ್ಟಿಗೆ ಮುಂದುವರಿಯುವುದು ಅಷ್ಟೊಂದು ಒಳ್ಳೆಯ ಬೆಳವಣಿಗೆ ಅಲ್ಲ. ಸಮಾಜವೇ ನಮ್ಮ ಬಗ್ಗೆ ಟೀಕಿಸುತ್ತದೆ ಎಂದರು

ಸುದ್ದಿ ಮಾಡುವುದು ಎಂದರೆ ಅದು ಅಷ್ಟೊಂದು ಸುಲಭವಲ್ಲ. ಓದಿನ ಜ್ಞಾನವಿರಬೇಕು. ಭಾಷೆಯ ಮೇಲೆ ಹಿಡಿತವಿರಬೇಕು. ಇತಿಹಾಸ ಗೊತ್ತಿರಬೇಕು ಒಂದು ಪಕ್ಷ ಗೊತ್ತಿಲ್ಲದಿದ್ದರೆ ಯಾರಿಗೆ ಗೊತ್ತಿದೆ ಎಂಬುದಾದರೂ ತಿಳಿದಿರಬೇಕು ಎಂದರು.

Advertisement

ಕನ್ನಡವಾಗಲೀ, ಇಂಗ್ಲಿಷ್‌ ಆಗಲೀ, ಸ್ಥಳೀಯ ಪತ್ರಿಕೆಯಾಗಲೀ, ರಾಜ್ಯಪತ್ರಿಕೆಯಾಗಲೀ, ಪತ್ರಕರ್ತರಾಗಿ ಕೆಲಸ ಮಾಡುವವರಿಗೆ ಕನ್ನಡ ಭಾಷೆ ಸರಿಯಾಗಿ ಬರಬೇಕು. ಇಂಗ್ಲಿಷ್‌ ಅಲ್ಲದ ಕನ್ನಡವೂ ಬಾರದ ಪತ್ರಕರ್ತರನ್ನು ನಾವು ಈಗ ನೋಡುತ್ತಿದ್ದೇವೆ. ಇದರ ಜತೆಗೆ ಯಾವ ಪತ್ರಿಕೋದ್ಯಮದ ಉನ್ನತ ಶಿಕ್ಷಣದಲ್ಲೂ ಒಂದು ಭಾಷೆಯಾಗಿ ಕನ್ನಡ ಇಲ್ಲ. ಹೀಗಾಗಿ ಕನ್ನಡ ಭಾಷೆಯ ಬಗ್ಗೆ ಪತ್ರಕರ್ತರು ಹಿಡಿತ ಸಾಧಿಸದಿದ್ದರೆ ಅವರ ಬರವಣಿಗೆ ಖಂಡಿತ ಯಶಸ್ವಿಯಾಗುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಮಾತನಾಡಿ, ಮಾಧ್ಯಮ ಇಂದು ವಿಮರ್ಶೆಗೆ ಒಳಗಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಷ್ಟೇ ಇದ್ದರೂ ಬದಲಾವಣೆಗಳು ಹೇಗೆ ಆದರೂ ವರ್ತಮಾನದ ಸನ್ನಿವೇಶದಲ್ಲಿ ಪತ್ರಿಕೆ ಮತ್ತು ಸಮಾಜದ ನಡುವೆ ಸಂಘರ್ಷ ಇದೆ. ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ಸ್ಥಿತಿಯನ್ನು ನಾವು ತಲುಪಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣ ಪತ್ರಕರ್ತರ ಅವಸರದ ಓಟ. ಅದರಲ್ಲೂ ದೃಶ್ಯ ಮಾಧ್ಯಮಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ ಎಂದರು

ಏನೇ ಆದರೂ ಪತ್ರಿಕೋದ್ಯಮ ಒಂದು ಪ್ರಭಾವಿ ಮಾಧ್ಯಮ. ಸಮಾಜ ಸ್ವಾಸ್ಥ ್ಯ ಕಾಪಾಡುವಲ್ಲಿ ಅದರ ಪಾತ್ರ ಹಿರಿದಾಗಿದೆ. ತಪ್ಪುಗಳ ನಡುವೆಯೂ ಒಪ್ಪುಗಳನ್ನು ಒಪ್ಪಿಸುವ ಕೆಲಸ ಪತ್ರಿಕೋದ್ಯಮ ಮಾಡುತ್ತಿದೆ. ಒಳ್ಳೆಯದನ್ನು ಆರಿಸಿಕೊಳ್ಳುವುದು ನಮ್ಮ ಜವಾಬ್ದಾರಿಯೇ ಆಗಿದೆ ಎಂದ ಅವರು, ಶಿವಮೊಗ್ಗದ ಪತ್ರಿಕೋದ್ಯಮ ಅತ್ಯಂತ ಉತ್ತಮವಾಗಿದೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಶಿವಮೊಗ್ಗ ನಂದನ್‌ ಮತ್ತು ಮುದಾಸಿರ್‌ ಅಹಮ್ಮದ್‌ ಅವರನ್ನು ಸನ್ಮಾನಿಸಲಾಯಿತು. ಛಾಯಾಚಿತ್ರಗ್ರಾಹಕ ನಂದನ್‌ ತಮಗೆ ಸಂದ ಸನ್ಮಾನವನ್ನು ಗುರುವಾದ ಶ್ರೀಮತಿ ಗ್ರೇಸ್‌ ಮನೋಹರ್‌ ಅವರಿಗೆ ಅರ್ಪಿಸಿದರು.

ನಂತರ ಪತ್ರಿಕೋದ್ಯಮದ ವಿದ್ಯಾರ್ಥಿಗಳೊಂದಿಗೆ ರವೀಂದ್ರಭಟ್ ಸಂವಾದ ನಡೆಸಿಕೊಟ್ಟರು. ಪ್ರಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ಕಾರ್ಯದರ್ಶಿ ಶಿ.ವಿ.ಸಿದ್ದಪ್ಪ ಉಪಸ್ಥಿತರಿದ್ದರು. ಪ್ರಸನ್ನ ಸ್ವಾಗತಿಸಿದರು. ಗೋಪಾಲ್ ಯಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಣಾರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next