Advertisement

ನಕಲಿ ವೈದ್ಯರ ಹಾವಳಿ ತಡೆಗೆ ಸೂಚನೆ

12:52 PM May 31, 2019 | Team Udayavani |

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿ ತಪ್ಪಿಸಲು ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಎಚ್ಚರಿಕೆ ನೀಡಿದರು.

Advertisement

ಗುರುವಾರ ನಡೆದ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸ್ಥಿತಿಗತಿ ಹಾಗೂ ಅಲ್ಲಿನ ಅವ್ಯವಸ್ಥೆಗಳ ಕುರಿತು ಅವರು ಚರ್ಚಿಸಿದರು.

ಜಿಲ್ಲೆಯಲ್ಲಿ ನಕಲಿ ವೈದ್ಯರಿಂದ ಜನರಿಗೆ ತೊಂದರೆ ಆಗುತ್ತಿದ್ದು ಸಾವಿನ ಪ್ರಮಾಣ ಹೆಚ್ಚುತ್ತಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಔಷಧವನ್ನು ರೋಗಿಗಳಿಗೆ ನೀಡುವ ಮೂಲಕ ಔಷಧಗಳಿಗೆ ದಾಸರಾಗುವ ಹಾಗೂ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಹೆಚ್ಚಿದೆ. ಈ ಕುರಿತಾಗಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಿಡಬೇಕು ಎಂದು ಅವರು ಹೇಳಿದರು.

ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆ ಕುರಿತಾಗಿ ಅಧಿಕಾರಿಗಳು ಖುದ್ದು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಂತಹ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ವೈದ್ಯರ ಸಲಹೆ ಇಲ್ಲದಂತೆ ಮಾರುಕಟ್ಟೆಯಲ್ಲಿ ದೊರೆಯುವ ಗರ್ಭಪಾತದ ಮಾತ್ರೆಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಹಾಗೂ ಸಂಭವಿಸಬಹುದಾದ ಸಾವಿನ ಬಗ್ಗೆ ಸಹ ಜಾಗೃತೆ ಮೂಡಿಸುವ ಕಾರ್ಯವಾಗಬೇಕಿದೆ. ವೈದ್ಯರ ಚೀಟಿ ಇಲ್ಲದೆ ಔಷಧಗಳನ್ನು ನೀಡುವ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಆಸ್ಪತ್ರೆಗಳಲ್ಲಿನ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೆ ಸೂಜಿಗಳ ಸಮೇತ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವುದು ಹಾಗೂ ಸುಡುವುದು ಗಮನಕ್ಕೆ ಬಂದಿದ್ದು, ಈ ಕುರಿತು ಶಿಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

Advertisement

ಆಸ್ಪತ್ರೆಗಳಲ್ಲಿ ಅವ್ಯವಸ್ಥೆಗಳ ಕುರಿತು ಸಿಬ್ಬಂದಿ ಅಧಿಕಾರಿಗಳೊಂದಿಗೆ ಚರ್ಚಿಸಬೇಕು ಹಾಗೂ ಸೂಕ್ತ ಪರಿಹಾರಕ್ಕೆ ಬೇಡಿಕೆ ಇಡಬೇಕು. ನೀವು ಮಾಹಿತಿ ನೀಡದೆ ಮೌನ ವಹಿಸಿದರೆ ಅಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಸಮಸ್ಯೆ ತಿಳಿಯುವುದು ಹೇಗೆ? ಮತ್ತು ಅದು ಪರಿಹಾರ ಕಾಣುವುದು ಹೇಗೆ? ಆದ್ದರಿಂದ ಸಿಬ್ಬಂದಿ- ಅಧಿಕಾರಿಗಳಿಗಾಗಲಿ ಸರ್ಕಾರಕ್ಕಾಗಲಿ ಸಮಸ್ಯೆಗಳನ್ನು ಗಮನಕ್ಕೆ ತರುವಂತೆ ತಿಳಿಸಿದರು.

ಜನರಲ್ಲಿ ಸರ್ಕಾರಿ ಆಸ್ಪತ್ರೆಗಳ ಮೇಲಿನ ತಿರಸ್ಕಾರ ಭಾವನೆ ಹೋಗಬೇಕು. ಇಲ್ಲಿ ಸಿಗುವ ಚಿಕಿತ್ಸೆಯನ್ನು ಪಡೆಯಲು ಮುಂದಾಗಬೇಕು. ಹಾಗೂ ಯಾವುದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ಗಮನಕ್ಕೆ ತರಬೇಕು, ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆಗಳಲ್ಲಿ ಸರಿಯಾದ ಆಡಳಿತ ಮಂಡಳಿ ಹೊಂದಿರಬೇಕು ಯಾವುದೇ ನಿರ್ಲಕ್ಷ್ಯ ಸ್ವಭಾವದ ಅಧಿಕಾರಿಗಳಿದ್ದರೆ ಕೂಡಲೇ ಅವರ ಸ್ಥಳದಲ್ಲಿ ಸೂಕ್ತ ಅಧಿಕಾರಿಗಳನ್ನು ನೇಮಿಸುವ ಕಾರ್ಯ ಆಗಬೇಕು ಎಂದರು. ಸಿಇಒ ಕೆ. ಶಿವರಾಮೇ ಗೌಡ ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next