ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 25 ಕ್ಷೇತ್ರಗಳಲ್ಲಿ ಬಿಜೆಪಿಯ ಪ್ರಚಂಡ ಬಹುಮತಕ್ಕೆ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ 2018ರ ಅಕ್ಟೋಬರ್ ತಿಂಗಳಲ್ಲಿ ನಡೆದ ಉಪ ಚುನಾವಣೆಗಳೇ ಅಡಿಪಾಯವಾಯಿತೆ? ಇಂತಹದ್ದೊಂದು ವಿಶ್ಲೇಷಣೆ ಈಗ ನಡೆಯುತ್ತಿದೆ. ಉಪಚುನಾವಣೆಯೆಂಬ ಈ ಟೆಸ್ಟ್ ಮ್ಯಾಚ್‌ಗಳೇ ಬಿಜೆಪಿಗೆ ವರದಾನವಾಗಿದೆ. 2014ರಲ್ಲಿ 17 ಸ್ಥಾನ ಗೆದ್ದಿದ್ದ ಬಿಜೆಪಿ ಈಗ 25 ಸ್ಥಾನ ಗೆದ್ದು ದಾಖಲೆ ನಿರ್ಮಿಸಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
Advertisement
ಸಾರ್ವತ್ರಿಕ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗ ಉಪಚುನಾವಣೆ ಬೇಕಿತ್ತೇ ಎಂಬ ಪ್ರಶ್ನೆ ಮೂಡಿತ್ತು. ಅಲ್ಲದೆ ಇದಕ್ಕೆ ಆಕ್ಷೇಪವೂ ವ್ಯಕ್ತವಾಗಿತ್ತು. ಆದರೆ ಬಿಜೆಪಿ ಇದರ ಸಂಪೂರ್ಣ ಲಾಭ ಪಡೆಯಿತು. ಉಪ ಚುನಾವಣೆ ನಡೆದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎರಡರಲ್ಲಿ ಮೈತ್ರಿಕೂಟ ಜಯ ಗಳಿಸಿತ್ತು. ಒಂದರಲ್ಲಿ ಬಿಜೆಪಿ ಗೆದ್ದಿತ್ತು. (ಗೆಲುವಿನ ಅಂತರ ಕಡಿಮೆಯಾಗಿತ್ತು). ಆದರೆ ಪ್ರಸ್ತುತ ಮೂರು ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ. ಉಪ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಅಂತರದಿಂದ ಗೆದ್ದ ಕ್ಷೇತ್ರಗಳಲ್ಲಿ ಮೈತ್ರಿಕೂಟ ಹೀನಾಯವಾಗಿ ಸೋತಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ 52 ಸಾವಿರ ಅಂತರದಿಂದ ಗೆದ್ದಿದ್ದರೆ ಈಗ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದೆ. ಕೇವಲ ಆರು ತಿಂಗಳಲ್ಲಿ ಇಂತಹ ಗಮನಾರ್ಹ ಬದಲಾವಣೆ ಆಗಲು ಬಿಜೆಪಿಯ ಕಾರ್ಯತಂತ್ರವೇ ಕಾರಣವಾಗಿದೆ. ಉಪ ಚುನಾವಣೆ ನಡೆಯುವ ಬಗ್ಗೆ ಬಿಜೆಪಿಗೆ ಮೊದಲೇ ತಿಳಿದಿತ್ತು. ಹೀಗಾಗಿ ಶಿವಮೊಗ್ಗದಲ್ಲಿ ಉಪ ಚುನಾವಣೆ ಘೋಷಣೆಗೂ ಮುನ್ನವೇ ಪೂರ್ವತಯಾರಿ ನಡೆದಿದ್ದವು.
Related Articles
Advertisement
ನಾಯಕರ ಕಟ್ಟಿ ಹಾಕಲು ಯಶಸ್ವಿಉಪ ಚುನಾವಣೆಯಲ್ಲಿ ಸಿಎಂ ಕುಮಾರಸ್ವಾಮಿ ಶಿವಮೊಗ್ಗ, ಮಂಡ್ಯ. ಡಿ.ಕೆ. ಶಿವಕುಮಾರ್ ಬಳ್ಳಾರಿ ಚುನಾವಣೆಯ ಪೂರ್ಣ ಜವಾಬ್ದಾರಿ ಹೊತ್ತಿದ್ದರು. ಆದರೆ ಈ ಬಾರಿ ಈ ಇಬ್ಬರೂ ನಾಯಕರು ಮಂಡ್ಯಕ್ಕೆ ಹೆಚ್ಚು ಸಮಯ ಕೊಟ್ಟಿದ್ದು ಸಹ ಬಿಜೆಪಿಗೆ ಪ್ಲಸ್ ಆಯಿತು. ಈ ಬಾರಿ ಡಿ.ಕೆ. ಶಿವಕುಮಾರ್ ಮಧು ಬಂಗಾರಪ್ಪ ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ಅವರಿಗೆ ಮಂಡ್ಯದ ಜತೆ ಶಿವಮೊಗ್ಗ, ಬಳ್ಳಾರಿಗೂ ಹೋಗಬೇಕಾದ್ದರಿಂದ ಹೆಚ್ಚು ಸಮಯ ಸಿಗಲಿಲ್ಲ. ಮಂಡ್ಯ ಚುನಾವಣೆ ಮೊದಲನೇ ಹಂತದಲ್ಲಿ ಇದ್ದಿದ್ದರಿಂದ ಅಲ್ಲಿನ ಚುನಾವಣೆ ಮುಗಿಸಿ ಇತ್ತ ಕಾಲಿಟ್ಟರು. ಆದರೆ ಅಷ್ಟರಲ್ಲಿ ಬಿಜೆಪಿ ತನ್ನ ಕೆಲಸ ಪೂರ್ಣಗೊಳಿಸಿತ್ತು. ಕೊನೆಯ ಎರಡು ದಿನ 15ಕ್ಕೂ ಹೆಚ್ಚು ಶಾಸಕರು, ಸಚಿವರು ಬಂದ ಕಾರಣ ಕಾಂಗ್ರೆಸ್, ಜೆಡಿಎಸ್ ಮುಖಂಡರೆಲ್ಲ ಅವರ ಬೆನ್ನ ಹಿಂದೆ ಓಡಾಡಿಕೊಂಡು ಕಾಲ ಕಳೆದರು. ಜನರ ಮೂಡ್ ತಿಳಿಯುವಷ್ಟರಲ್ಲಿ ಮತದಾನವೇ ಮುಗಿದಿತ್ತು. ಕುಮಾರಸ್ವಾಮಿ ಕೊನೆ ಎರಡು ದಿನ ಶಿವಮೊಗ್ಗದಲ್ಲೇ ಉಳಿದರಾದರೂ ಬಹಿರಂಗ ಪ್ರಚಾರ ಮಾಡಲಿಲ್ಲ. ತಾಲೂಕುವಾರು ಮುಖಂಡರ ಸಭೆ ನಡೆಸಿದ್ದರು. ಅವರ ಕಾರ್ಯತಂತ್ರಗಳು ತಳ ತಲುಪಲು ಸಮಯವೇ ಇರಲಿಲ್ಲ.