ಶಿವಮೊಗ್ಗ: ಸಂಸತ್ ಚುನಾವಣೆ ಮುಗಿಯುತ್ತಿದ್ದಂತೆ ಶಿವಮೊಗ್ಗ ಜಿಪಂನಲ್ಲಿ ದೋಸ್ತಿಗಳ ನಡುವೆ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ಶುರುವಾಗಿದೆ.
ಜಿಪಂ ಚುನಾವಣೆ ನಡೆದಾಗ ಅತಂತ್ರ ಸೃಷ್ಟಿಯಾಗಿತ್ತು. ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಗ್ಗೂಡಿದ್ದವು. ಆದರೂ ಸಹ ಒಬ್ಬ ಸದಸ್ಯರ ಅವಶ್ಯಕತೆ ಇತ್ತು. ಪಕ್ಷೇತರರಾಗಿ ಗೆದ್ದಿದ್ದ, ಮೂಲತಃ ಕಾಂಗ್ರೆಸ್ ಪಕ್ಷದವರೇ ಆಗಿದ್ದ ಮುಖಂಡ ವಿಜಯಕುಮಾರ್ ಅವರ ಪತ್ನಿ ವೇದಾ ವಿಜಯಕುಮಾರ್ ಅವರ ಬೆಂಬಲವನ್ನು ಪಡೆಯುವಲ್ಲಿ ದೋಸ್ತಿಗಳು ಯಶಸ್ವಿಯಾಗಿದ್ದರು. ಆಗ ಕಾಂಗ್ರೆಸ್ ಪಕ್ಷವು ಒಪ್ಪಂದದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊರೆಯುವ ಸ್ಥಾನವನ್ನು ವೇದಾ ವಿಜಯಕುಮಾರ್ ಅವರಿಗೆ ಬಿಟ್ಟುಕೊಡುವುದಾಗಿ ಹೇಳಿತ್ತು. ಅದರಂತೆ ಜೆಡಿಎಸ್ ಜ್ಯೋತಿ ಎಸ್. ಕುಮಾರ್ ಅಧ್ಯಕ್ಷರಾಗಿ, ವೇದಾ ವಿಜಯಕುಮಾರ್ ಉಪಾಧ್ಯಕ್ಷರಾಗಿ ನೇಮಕವಾದರು.
ಇದೇ ಒಪ್ಪಂದ ವೇಳೆ ಇನ್ನೊಂದು ಅಂಶವೂ ಚರ್ಚೆಗೆ ಬಂದಿತ್ತು. ಜೆಡಿಎಸ್ ಪಕ್ಷದ ಮಧು ಬಂಗಾರಪ್ಪ, ಅಪ್ಪಾಜಿ ಗೌಡ, ಶಾರದಾ ಪೂರ್ಯಾನಾಯ್ಕ, ಕಾಗೋಡು ತಿಮ್ಮಪ್ಪ, ಆರ್. ಪ್ರಸನ್ನ ಕುಮಾರ್ ಸೇರಿದಂತೆ ಹಲವು ಮುಖಂಡರು ಚರ್ಚೆ ನಡೆಸಿದ್ದರು. ಆಗ ಜಿಪಂ ಅಧ್ಯಕ್ಷ ಸ್ಥಾನವು ಸೊರಬ ಕ್ಷೇತ್ರದ ಸದಸ್ಯರಿಗೆ 2 ವರ್ಷ ಭದ್ರಾವತಿ ಸದಸ್ಯರಿಗೆ 2 ವರ್ಷ ಹಾಗೂ ಪಕ್ಷೇತರ ಅಭ್ಯರ್ಥಿ ವೇದಾ ಅವರಿಗೆ 1 ವರ್ಷ ಎಂದು ಚರ್ಚಿಸಲಾಗಿತ್ತು. ದೋಸ್ತಿ ಪಕ್ಷವು ಅಧಿಕಾರಕ್ಕೆ ಬರಲು ಅತ್ಯಗತ್ಯವಾಗಿದ್ದ ಪಕ್ಷೇತರ ಸದಸ್ಯೆಯ ಬೆಂಬಲವನ್ನು ನೀಡಿದ್ದ ವೇದಾ ವಿಜಯಕುಮಾರ್ ಅವರ ಕಡೆಯಿಂದ ಇದಕ್ಕೆ ಆಕ್ಷೇಪಣೆ ವ್ಯಕ್ತವಾಗಿತ್ತು. ಆಗ ಸಚಿವ ಡಿ.ಕೆ. ಶಿವಕುಮಾರ್ ಅವರು ಮಧ್ಯೆ ಪ್ರವೇಶಿಸಿ, ಪಕ್ಷ ಅಧಿಕಾರಕ್ಕೆ ಬರಲು ಅಗತ್ಯ ನೆರವು ನೀಡಿದ್ದ ವೇದಾ ವಿಜಯಕುಮಾರ್ ಅವರಿಗೆ 2 ವರ್ಷ ಅಧ್ಯಕ್ಷಾವಧಿ ನೀಡಲು ಸೂಚಿಸಿದ್ದರು. ಅದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದರು. ಅದರಂತೆ ವೇದಾ ವಿಜಯಕುಮಾರ್ ಅವರು 1 ವರ್ಷದ ಹಿಂದೆಯೇ ಅಧ್ಯಕ್ಷರಾಗಬೇಕಿತ್ತು.
ಆದರೆ ಜ್ಯೋತಿ ಎಸ್. ಕುಮಾರ್ ಅವರು ರಾಜೀನಾಮೆ ನೀಡಲು ಹಿಂದೆ ಮುಂದೆ ನೋಡಿದ್ದು, ಅಷ್ಟರಲ್ಲೇ ಉಪ ಚುನಾವಣೆ ಘೋಷಣೆಯಾಗಿದ್ದು ತಡೆಯಾಗಿತ್ತು. ಕಳೆದ ಮೂರು ತಿಂಗಳ ಹಿಂದೆ ಮತ್ತೆ ಚರ್ಚೆ ಶುರುವಾಗಿತ್ತು. ಚರ್ಚೆ ಕಾವೇರುವ ವೇಳೆಗೆ ಸಂಸತ್ ಚುನಾವಣೆ ಘೋಷಣೆಯಾಗಿತ್ತು. ಈಗ ಚುನಾವಣೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ಈಗ ಮತ್ತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚರ್ಚೆ ಆರಂಭವಾಗಿದೆ. ಆಗ ನಡೆದ ಒಪ್ಪಂದದಂತೆ ಅಧ್ಯಕ್ಷರಾಗಿ ಜ್ಯೋತಿ ಎಸ್. ಕುಮಾರ್ ಅವರು ರಾಜೀನಾಮೆ ನೀಡಿ, ಉಪಾಧ್ಯಕ್ಷರಾಗಿರುವ ವೇದಾ ವಿಜಯಕುಮಾರ್ ಅವರಿಗೆ ಅವಕಾಶ ನೀಡಲು ಮುಖಂಡರು ಮನವೊಲಿಸಲು ಮುಂದಾಗಿದ್ದಾರೆ. ಸದ್ಯವೇ ಪ್ರಮುಖ ನಾಯಕರ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂದಿನ ಸಂಧಾನ ಸಭೆಯಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ಹಾಗೂ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಜೆಡಿಎಸ್ ಕಡೆಯಿಂದ ಚರ್ಚೆ ನಡೆಸಿದ್ದರು. ಆರು ತಿಂಗಳ ಹಿಂದೆಯೇ ಒಪ್ಪಂದದಂತೆ ಬಿಟ್ಟುಕೊಡಲು ಚರ್ಚೆ ಶುರುವಾಗಿತ್ತು. ಅಷ್ಟರಲ್ಲಿ ಲೋಕಸಭೆ ಉಪ ಚುನಾವಣೆ ಬಂತು. ಈ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೋತಿದ್ದರಿಂದ ಜೆಡಿಎಸ್ ಮುಖಂಡರ ಜತೆಗಿನ ಚರ್ಚೆ ಪೂರ್ಣಗೊಳ್ಳಲಿಲ್ಲ. ಈಗ ಸಾರ್ವತ್ರಿಕ ಚುನಾವಣೆಯಲ್ಲೂ ಸೋತಿರುವುದರಿಂದ ಅವರು ಸದ್ಯಕ್ಕೆ ಕೈಗೆ ಸಿಗುವುದು ಕಷ್ಟ ಎನ್ನಲಾಗಿದೆ. ಇನ್ನು ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿ ಕೂಡ ಚುನಾವಣೆ ಸೋಲಿನ ನಂತರ ಬೇಜಾರಿನಲ್ಲಿರುವುದರಿಂದ ಚರ್ಚೆ ಯಾರ ಬಳಿ ಮಾಡಬೇಕೆಂಬ ಗೊಂದಲದಲ್ಲಿ ಮುಖಂಡರಿದ್ದಾರೆ.
2 ವರ್ಷ ಮಾತ್ರ ಬಾಕಿ
ಜಿಪಂ ಅಧಿಕಾರಾವಧಿಯಲ್ಲಿ ಈಗಾಗಲೇ 3 ವರ್ಷ ಮುಗಿದಿದ್ದು ಒಪ್ಪಂದದಂತೆ 2 ವರ್ಷ ಬಾಕಿ ಇದೆ. ಮೈತ್ರಿ ಮುಖಂಡರ ಸಭೆ ಮುಂದೂಡಿಕೆ ಆದರೆ ಸಿಗುವ ಅವಧಿಯೂ ಕಡಿಮೆಯಾಗುತ್ತ ಹೋಗಲಿದೆ.
ಶರತ್ ಭದ್ರಾವತಿ