Advertisement

ಯಕೃತ್‌ ಕ್ಯಾನ್ಸರ್‌ ಸಂಶೋಧನೆ

12:35 PM May 16, 2019 | Team Udayavani |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದಲ್ಲಿ ಯಕೃತ ಕ್ಯಾನ್ಸರ್‌ ಮತ್ತು ಅದರ ಚಿಕಿತ್ಸಾ ಪದ್ಧತಿ ಕುರಿತು ಸಂಶೋಧನೆ ನಡೆಯುತ್ತಿದೆ ಎಂದು ಕುಲಪತಿ ಪ್ರೊ| ಜೋಗನ ಶಂಕರ್‌ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ 48.51 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಅಧ್ಯಾಪಕ ಡಾ| ಎಚ್.ಎಂ.ಕುಮಾರಸ್ವಾಮಿ ಅವರು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನಾ ಚಟುವಟಿಕೆಗಾಗಿ ಸಿಂಡಿಕೇಟ್ ಸಭೆಯ ಅನುಮೋದನೆ ಮೇರೆಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ವಿಶ್ವವಿದ್ಯಾಲಯ ಹಾಗೂ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಪ್ರಸಕ್ತ ಎಂಟು ಸಂಸ್ಥೆಗಳೊಂದಿಗೆ ಒಡಗೂಡಿ ಈ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ‘ಫಿಸ್ಟ್‌’ ಯೋಜನೆ ಅಡಿಯಲ್ಲಿ ಪ್ರಸ್ತುತ ಸಾಲಿನ ಸ್ನಾತಕೋತ್ತರ ಜೀವರಾಸಾಯನಶಾಸ್ತ್ರ ವಿಭಾಗದ ಮೂಲ ಸೌಲಭ್ಯ ಹಾಗೂ ಸಂಶೋಧನೆಗೆ ಪ್ರಾರಂಭಿಕವಾಗಿ 1.21 ಕೋಟಿ ರೂ. ಮಂಜೂರು ಮಾಡಲಾಗಿದೆ. ಅದೇ ರೀತಿ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗಕ್ಕೂ 55 ಲಕ್ಷ ರೂ. ನೀಡಲಾಗಿದೆ. ಇನ್ನೂ ಎರಡು ಸ್ನಾತಕೋತ್ತರ ವಿಜ್ಞಾನ ವಿಭಾಗಗಳು ಟಿಬಿಟಿ ಯೋಜನೆ ವ್ಯಾಪ್ತಿಯಲ್ಲಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕಾರಾಗೃಹದಲ್ಲಿರುವ ಸಜಾಬಂಧಿಗಳು ಕಾರಾಗೃಹದ ಶಿಕ್ಷೆ ಮುಗಿಸಿ ಹೊರಬಂದ ನಂತರ ಮನಪರಿವರ್ತನೆಗೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವುದಕ್ಕಾಗಿ ಕಾರಾಗೃಹದಲ್ಲಿ ದೂರಶಿಕ್ಷಣ ನಿರ್ದೇಶನಾಲಯ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ. 2018-19ನೇ ಶೈಕ್ಷಣಿಕ ಸಾಲಿಗೆ ಒಟ್ಟು 7 ಜನ ಪ್ರವೇಶ ಪಡೆದಿದ್ದು, ಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಹೀಗೆ, ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಮಾಜಪರ ಕೆಲಸಗಳನ್ನೂ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2018ನೇ ಸಾಲಿಗೆ ವಿವಿಯು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯು ನೀಡುವ ರ್‍ಯಾಂಕಿಂಗ್‌ನಲ್ಲಿ 78ನೇ ರ್‍ಯಾಂಕ್‌ ಪಡೆದಿತ್ತು. ಇತ್ತೀಚೆಗೆ ಬಿಡುಗಡೆಯಾದ 2019ನೇ ಸಾಲಿನ ಪಟ್ಟಿಯಲ್ಲಿ ಕುವೆಂಪು ವಿವಿ 73ನೇ ರ್‍ಯಾಂಕ್‌ ಪಡೆದಿದೆ. ಸೈಮ್ಯಾಗೋ ಪಟ್ಟಿಯಲ್ಲೂ ಭಾರತೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಜ್ಯದ ಇತರೆ ವಿವಿಗಳನ್ನು ಹಿಂದಿಕ್ಕಿರುವ ವಿವಿ 45ನೇ ಸ್ಥಾನ ಪಡೆದಿದೆ. ಸಂಶೋಧನೆಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಕ್ಕಾಗಿ ಸಮಗ್ರ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 620ನೇ ಸ್ಥಾನ ಗಳಿಸಿದೆ. ಏಷ್ಯಾ ವಲಯದಲ್ಲಿ 1561 ಸಂಸ್ಥೆಗಳ ಪೈಕಿ 289ನೇ ಸ್ಥಾನದಲ್ಲಿದೆ. ಭಾರತದಲ್ಲಿ ಟಾಪ್‌ 50 ಸಂಸ್ಥೆಯೊಳಗಿದೆ. ಕಳೆದ 10 ವರ್ಷಗಳಿಂದ ವಿವಿಯ ಸಂಶೋಧನೆ ಮತ್ತು ಶೈಕ್ಷಣಿಕ ಗುಣಮಟ್ಟವು ಉತ್ಕೃಷ್ಟತೆಯಿಂದ ಕೂಡಿದೆ ಎಂಬುವುದನ್ನು ವರದಿಯ ರ್‍ಯಾಂಕಿಂಗ್‌ ಸ್ಪಷ್ಟಪಡಿಸಿದೆ. 2010ರಲ್ಲಿ 792ನೇ ರ್‍ಯಾಂಕ್‌ನಲ್ಲಿದ್ದ ವಿವಿ 172 ಸ್ಥಾನಗಳಿಗೆ ಜಿಗಿತ ಕಂಡಿದೆ. 2018ರಲ್ಲಿ 620ನೇ ರ್‍ಯಾಂಕ್‌ಗೆ ಏರಿದೆ ಎಂದು ಕುಲಪತಿ ಪ್ರೊ| ಜೋಗನ್‌ ತಿಳಿಸಿದರು.

Advertisement

ಕುಲಸಚಿವ ಪ್ರೊ| ಎಚ್.ಎಸ್‌.ಭೋಜ್ಯಾನಾಯ್ಕ, ಮೌಲ್ಯಮಾಪನ ಕುಲಸಚಿವ ಪ್ರೊ| ರಾಜಾ ನಾಯ್ಕ, ಹಣಕಾಸು ಅಧಿಕಾರಿ ಪ್ರೊ| ಹಿರೇಮಣಿ ನಾಯ್ಕ ಇನ್ನಿತರರಿದ್ದರು.

ಸೌಕರ್ಯವಿಲ್ಲದಿದ್ದರೆ ಬಾಗಿಲು ಹಾಕಬೇಕಾಗುತ್ತೆ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಶೇ.85ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಅವರ ಭದ್ರತೆ ಹಾಗೂ ಅನುಕೂಲದ ದೃಷ್ಟಿಯಿಂದ ವಿವಿ ಆವರಣದೊಳಗೆ ಹಾಸ್ಟೆಲ್ ಸೇರಿದಂತೆ ಮತ್ತಿತರ ಮೂಲಸೌಲಭ್ಯ ನೀಡಬೇಕಾಗುತ್ತದೆ. ಆದರೆ, ಇದಕ್ಕೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ನೀಡಲಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳ ಪ್ರವೇಶ ಕುಸಿದು ವಿವಿಗೆ ಬಾಗಿಲು ಹಾಕಬೇಕಾಗುತ್ತದೆ ಎಂದು ಕುಲಸಚಿವ ಪ್ರೊ| ಎಚ್.ಎಸ್‌.ಭೋಜ್ಯಾನಾಯ್ಕ ತಿಳಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೂಲಸೌಕರ್ಯ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿಲ್ಲ. ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. 1979ರಲ್ಲಿ ಪಿಜಿ ಸೆಂಟರ್‌ ಆರಂಭವಾದಾಗ ಇದು ಸಿಂಗನಮನೆ ಕಿರು ಅರಣ್ಯ ಪ್ರದೇಶ ಎಂದು ಕರೆಲಾಗುತಿತ್ತು. 2017ರಲ್ಲಿ ಇದನ್ನು ಭದ್ರಾ ಸಂರಕ್ಷಿತ ವನ್ಯಜೀವಿ ಎಂದು ಗುರುತಿಸಲಾಯಿತು. ಅಲ್ಲಿಂದ ಅರಣ್ಯ ಇಲಾಖೆ ಹಾಗೂ ವಿವಿ ನಡುವೆ ಚರ್ಚೆ ಮತ್ತು ಪತ್ರ ವಿನಿಮಯ ನಡೆಯುತ್ತಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ಹಸಿರು ನ್ಯಾಯಪೀಠದಲ್ಲಿ ಹಾಗೂ ಕೇಂದ್ರದ ಸೆಂಟ್ರಲ್ ಎಂಪವರ್‍ರ್ಡ್ ಕಮಿಟಿಯಲ್ಲೂ ಈ ಪ್ರಕರಣ ಇತ್ಯರ್ಥವಾಗಿದೆ. ಹಸಿರು ಪೀಠವು ಈ ಪ್ರದೇಶಕ್ಕೆ ಪರ್ಯಾಯವಾಗಿ 230 ಎಕರೆ ಭೂಮಿಗೆ ಬದಲಾಗಿ 690 ಎಕರೆ ಹಾಗೂ 11 ಕೋಟಿ ರೂ. ಅಭಿವೃದ್ಧಿಗೆ ಕೊಡುವಂತೆ ಸೂಚನೆ ನೀಡಿದೆ. ಅದರನ್ವಯ, ಬೆಳಗಾವಿ ಅಧಿವೇಶದಲ್ಲಿ ಸರಕಾರ 11 ಕೋಟಿ ಬಿಡುಗಡೆ ಮಾಡಿದೆ. ಭೂಮಿ ಕೊಡುವುದಕ್ಕೂ ಹೇಳಲಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಬೇಡಿಕೆ ಪತ್ರ ನೀಡುವಂತೆ ವಿವಿ ಮನವಿ ಕೂಡ ಮಾಡಿದೆ. ಒಂದು ವೇಳೆ, ಪತ್ರ ನೀಡಿದ್ದಲ್ಲಿ 11 ಕೋಟಿ ರೂ. ನೀಡಲಾಗುವುದು. ಎಲ್ಲ ಸೂಚನೆಗಳನ್ನು ವಿವಿ ಚಾಚೂ ತಪ್ಪದೇ ಪಾಲಿಸಿದೆ. ಒಂದು ವೇಳೆ, ಅರಣ್ಯ ಭೂಮಿಯ ನವೀಕರಣ ಮಾಡಿಕೊಟ್ಟರೆ, ಎಲ್ಲ ಸಮಸ್ಯೆ ಬಗೆಹರಿಯಲಿದೆ. ನಂತರ, ಹಾಸ್ಟೆಲ್, ಕ್ರೀಡಾಂಗಣ, ಕಟ್ಟಡ, ಸಂಪರ್ಕ ರಸ್ತೆ, ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next