ಶಿವಮೊಗ್ಗ: ಕವಚ ಒಂದು ವಿಭಿನ್ನ ಚಿತ್ರವಾಗಿದ್ದು, ಜನರಿಗೆ ತುಂಬಾ ಹತ್ತಿರವಾಗಿದೆ. ನಾನು ಮೊದಲ ಬಾರಿಗೆ ಅಂಧನ ಪಾತ್ರ ಮಾಡಿದ್ದೇನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣ್ಣಿಲ್ಲದೇ ಇರುವ ವ್ಯಕ್ತಿ ಹೇಗೆ ಕಮಿಟ್ಮೆಂಟ್ ಪೂರ್ಣಗೊಳಿಸುತ್ತಾನೆ ಎಂಬುದನ್ನು ಚಿತ್ರ ತೋರಿಸಿದೆ. ಗ್ಲಾಸ್ (ಕನ್ನಡಕ) ಹಾಕಿ ಅಂಧರ ಪಾತ್ರ ಮಾಡಬಹುದು, ಅದರೆ ಗ್ಲಾಸ್ ಇಲ್ಲದೇ ನೇರ ದೃಷ್ಟಿ ಇಟ್ಟುಕೊಂಡು ಪಾತ್ರ ಮಾಡುವುದು ಸ್ವಲ್ಪ ಕಷ್ಟ. ಜನ ಸಹ ಒಳ್ಳೆಯ ಅಭಿಪ್ರಾಯ ನೀಡಿದ್ದಾರೆ. ಇದರಿಂದ ಪ್ರಯೋಗಶೀಲ ಸಿನಿಮಾ ಮಾಡಲು ಧೈರ್ಯ ಬರುತ್ತದೆ ಎಂದರು.
ಟಗರು ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದಾಗ ಶಿವಣ್ಣ ಈ ವಯಸ್ಸಿನಲ್ಲೂ ಈ ರೀತಿ ಡ್ಯಾನ್ಸ್ ಮಾಡುತ್ತಾರಲ್ಲಾ ಎಂದು ಜನರು ಹೇಳಿದ್ದರು. ಈ ರೀತಿ ಅಭಿಪ್ರಾಯ ಬಂದಾಗ, ನಮಗೆ ಸ್ಪೂರ್ತಿ ಬರುತ್ತದೆ. ಈ ರೀತಿ ವಿಭಿನ್ನ ಸಿನಿಮಾ ಮಾಡಿದಾಗ ಮತ್ತೆ ಮತ್ತೆ ಇಂತಹ ಸಿನಿಮಾಗಳು ಮಾಡಬೇಕು ಎನ್ನಿಸುತ್ತದೆ. ಈಸೂರು ದಂಗೆ ಸಿನಿಮಾ ಮಾಡಬೇಕು, ಅದರೆ ಬಳಿಗಾರ್ ಅವರು ಇಲ್ಲೇ ಬ್ಯುಸಿಯಾಗಿದ್ದಾರೆ. ಅವರು ಬರುತ್ತಿಲ್ಲ, ಅವರು ಬಂದ ತಕ್ಷಣ ಮಾಡುತ್ತೇವೆ, ಅದೊಂದು ಒಳ್ಳೆಯ ಸಿನಿಮಾ ಎಂದರು.
ಶಿವಮೊಗ್ಗ ನನಗೆ ತುಂಬಾ ಇಷ್ಟವಾಗುವಂತ ಊರು. ಇಲ್ಲಿ ಒಳ್ಳೆಯ ಊಟ ಸಿಗುತ್ತದೆ. ಮಧು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ, ಒಳ್ಳೆ ಕೆಲಸ ಮಾಡುವವರೂ ಯಾವಾಗಲೂ
ಗೆಲ್ಲುತ್ತಾರೆ. ಒಳ್ಳೆಯ ಅಭ್ಯರ್ಥಿ ಬರಬೇಕು. ನಾನು ಬಂದು ಯಾರಿಗೂ ಪ್ರಚಾರ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದರು.