ಶಿವಮೊಗ್ಗ: ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಹಣವನ್ನು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಪ್ಯಾಕೇಜ್ ಹಣವನ್ನು ಅರ್ಹರಿಗೆ ತಲುಪಿಸುವ ನಡುವೆ ಕೆಲವು ಮಧ್ಯವರ್ತಿಗಳು 300 ರಿಂದ 350 ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಇದನ್ನು ತಾವು ತೀವ್ರವಾಗಿ ಖಂಡಿಸುವುದಲ್ಲದೆ ಈ ಮಧ್ಯವರ್ತಿಗಳನ್ನು ದೂರವಿಟ್ಟು ಅರ್ಹ ಫಲಾನುಭವಿಗಳಿಗೆ ನೇರವಾಗಿ ಘೋಷಿತ ಮೊತ್ತ ತಲುಪಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ಮಧ್ಯವರ್ತಿಗಳ ಬಗ್ಗೆ ಸರ್ಕಾರ ಮತ್ತು ಇಲಾಖೆಯ ಅ ಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಅಸಂಘಟಿತ ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ದುರುಪಯೋಗವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಪ್ರಾಮಾಣಿಕವಾಗಿ ತಲುಪಬೇಕು ಈ ನಿಟ್ಟಿನತ್ತ ಸಂಘ ಕೆಲಸ ಮಾಡುತ್ತಿದೆ ಎಂದರು.
ಅಸಂಘಟಿತ ಕಾರ್ಮಿಕರೆಲ್ಲರೂ ಸಂಘಟಿತರಾಗಬೇಕಾದ ಅಗತ್ಯವಿದೆ. ಅನೇಕ ಅಸಂಘಟಿತ ಕಾರ್ಮಿಕರು ಇಂದು ಯಾವುದೇ ಸೌಲಭ್ಯಗಳು ಇಲ್ಲದೆ ವಂಚಿತರಾಗುತ್ತಿದ್ದಾರೆ. ಉದಾಹರಣೆಗೆ ಅಡುಗೆ ಕೆಲಸ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೆ ಮುಜರಾಯಿ ದೇವಸ್ಥಾನದಲ್ಲಿ ಅಡುಗೆ ಮಾಡುವರರಿಗೆ ಮಾತ್ರ ಸರ್ಕಾರ ಪರಿಹಾರ ಘೋಷಿಸಿದೆ. ಉಳಿದ ಸಾವಿರಾರು ಅಡುಗೆ ಮಾಡುವವರು ಎಲ್ಲಿಗೆ ಹೋಗಬೇಕು. ಹಾಗೆಯೇ ಟೈಲರಿಂಗ್ ಮಾಡುವವರು, ಹೊಟೇಲ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬೀಡಿ ಕಟ್ಟುವವರು ಹೀಗೆ ಲಕ್ಷಾಂತರ ಜನರು ಇನ್ನು ಸಂಘಟಿತರಾಗಿಲ್ಲ. ಅಸಂಘಟಿತರೂ ಅಗಿಲ್ಲ. ಇಂತಹವರಿಗೆ ಸರ್ಕಾರದ ಪರಿಹಾರಗಳು ಸಿಗುವುದಾದರೂ ಹೇಗೆ? ಹಾಗಾಗಿ ಮೊದಲು ಇವರನ್ನೆಲ್ಲಾ ಒಂದೇ ಸೂರಿನಡಿ ತರಬೇಕಾಗಿದೆ ಎಂದರು.
ಇದುವರೆಗೂ ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು, ಉದ್ಯೋಗವನ್ನು ನೋಂದಾಯಿಸದೆ ಇರುವ ಅಸಂಘಟಿತ ಕಾರ್ಮಿಕರು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಪಂ, ನಗರ ಪ್ರದೇಶಗಳಲ್ಲಿ, ನಗರಸಭೆ ಅಥವಾ ಪಾಲಿಕೆ ಅಥವಾ ಪಪಂಗಳಲ್ಲಿ ನಿಯೋಜಿತ ಅಧಿ ಕಾರಿಗಳಿಂದ ದೃಢೀಕರಣ ಪತ್ರ ಪಡೆದು ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಫೋಟೋದೊಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಇದು ಕೇವಲ ಪರಿಹಾರ ಪಡೆಯಲು ಅಷ್ಟೆ ಅಲ್ಲದೆ ಉಚಿತ ಲಸಿಕೆ ಹಾಕಿಸಿಕೊಳ್ಳಲು ಕೂಡ ನೆರವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕುಪೇಂದ್ರ ಆಯನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಘಾ ಮೋಹನ ಜೆಟ್ಟಿ, ಉಪಾಧ್ಯಕ್ಷೆ ಗೌರಿ ಶ್ರೀನಾಥ್, ಪದಾ ಧಿಕಾರಿಗಳಾದ ಸುರೇಖಾ ಪಾಲಾಕ್ಷಪ್ಪ ಇದ್ದರು.