ಶಿವಮೊಗ್ಗ,: ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವವರ ನೆರವಿಗೆ, ರಾಜ್ಯ ಸರ್ಕಾರ ಹೆಗಲು ಕೊಟ್ಟು ನಿಂತಿದೆ. ಪರಿಹಾರ ಕಾರ್ಯ ಚುರುಕುಗೊಳಿಸಲಾಗಿದೆ. ನೆರೆಯಿಂದ ಮನೆ, ಜಾನುವಾರು, ಕೃಷಿ ಭೂಮಿ ಕಳೆದುಕೊಂಡವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.
ಗುರುವಾರ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು,
ಈ ಬಾರಿ ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ಸಾವಿರಾರು ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ, ನೂರಾರು ಕುಟುಂಬಗಳು, ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಇದುವರೆಗೂ ಆಗದಷ್ಟು ನಾಶ, ನಷ್ಟ ಉಂಟಾಗಿದೆ. ಜನರ ಬದುಕು ಕೊಚ್ಚಿ ಹೋಗಿದೆ. ಕುಸಿದ ಮನೆಗಳು, ಜರಿದ ಗುಡ್ಡಗಳು, ಮುಳುಗಿದ ತೋಟಗಳು, ಎಲ್ಲೆಲ್ಲೂ ನೀರೋ ನೀರು. ನೂರಾರು ಮಂದಿ ನೆರೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನ-ಜಾನುವಾರುಗಳನ್ನು ರಕ್ಷಿಸುವ ಕೆಲಸ ಜಿಲ್ಲಾಡಳಿತದಿಂದ, ತಮ್ಮೆಲ್ಲರ ಸಹಕಾರದಿಂದ ಮಾಡಲಾಗಿದೆ ಎಂದರು. ಭಾರತದ ಸ್ವಾತಂತ್ರ್ಯ ಬಡವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ. ಅನೇಕರ ಬಲಿದಾನದ ಅಡಿಗಲ್ಲ ಮೇಲೆ ಭಾರತದ ಸ್ವಾತಂತ್ರ್ಯ ಭದ್ರವಾಗಿ ನಿಂತಿದೆ ಎಂದರು.
ರೈತರಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಕಿಸಾನ್ ಸನ್ಮಾನ್ ಯೋಜನೆಯಡಿ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ, ಪ್ರತಿ ರೈತರ ಖಾತೆಗಳಿಗೆ, 4 ಸಾವಿರ ರೂಪಾಯಿ, ಎರಡು ಕಂತಿನಲ್ಲಿ ಹಾಕುವ ಯೋಜನೆಗೆ ಚಾಲನೆ ನೀಡಿದೆ. ಮೀನುಗಾರರ ಹಾಗೂ ನೇಕಾರರ ಸಾಲಮನ್ನಾ ಘೋಷಣೆಯಿಂದ, ಸಾವಿರಾರು ಮಂದಿ ಪ್ರಯೋಜನ ಪಡೆಯಲಿದ್ದಾರೆ ಎಂದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಜಿಲ್ಲೆಯ ಪಾತ್ರ ಗಣನೀಯ. ಈಸೂರು ದೇಶದ ಪ್ರಥಮ ಸ್ವಾತಂತ್ರ್ಯ ಗ್ರಾಮ ಎಂಬ ಹೆಗ್ಗಳಿಕೆ ನಮ್ಮದು. ಈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ 5 ಮಂದಿ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ, ಹಲವು ಪ್ರಮುಖ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ರೈತರ ಹೊಲಗಳಿಗೆ ನೀರು ಉಣಿಸುವ ಇನ್ನೂ ಹಲವು ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಮಂಗಳವಾರ ವಿಮಾನ ನಿಲ್ದಾಣ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಇದು ಸಂತೋಷದ ವಿಷಯ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಎಸ್.ರುದ್ರೇಗೌಡ್ರು, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಜಿ.ಪಂ. ಸಿಇಓ ಕೆ.ಶಿವರಾಮೇಗೌಡ ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ, ಹೆಚ್ಚು ಅಂಕ ಪಡೆದವರಿಗೆ ಹಾಗೂ ತುಕಡಿಯ ನಾಯಕರನ್ನು ಸನ್ಮಾನಿಸಲಾಯಿತು