Advertisement

ಹೈಟೆಕ್‌ ಕಳ್ಳರಿಂದ ಎಟಿಎಂ ಗ್ರಾಹಕರ ಮಾಹಿತಿಗೇ ಕನ್ನ!

12:34 PM May 15, 2019 | Team Udayavani |

ಶಿವಮೊಗ್ಗ: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎಟಿಎಂ ಬಳಕೆದಾರರ ಮಾಹಿತಿಯನ್ನು ಕದಿಯುವ ಪ್ರಕರಣಗಳು ಶಿವಮೊಗ್ಗದಲ್ಲಿ ಹೆಚ್ಚುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿರುವ ಎಟಿಎಂಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಲಾಭಕರವಲ್ಲ ಎಂಬ ಕಾರಣಕ್ಕೆ ಎಟಿಎಂಗಳ ಬಗ್ಗೆ ಬ್ಯಾಂಕ್‌ಗಳು ನಿರ್ಲಕ್ಷ್ಯ ತಾಳಿದ್ದು ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಹೈಟೆಕ್‌ ಕಳ್ಳರು ಗ್ರಾಹಕರ ಮಾಹಿತಿಗೆ ಕೈಹಾಕಿದ್ದಾರೆ.

Advertisement

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಷ್ಟೇ ಇದ್ದ ಮಾಹಿತಿ ಕದಿಯುವ ಜಾಲ ಈಗ ಜಿಲ್ಲಾಮಟ್ಟದಲ್ಲೂ ವ್ಯಾಪಿಸಿದೆ. ಗ್ರಾಹಕರ ಎಟಿಎಂ ಕಾರ್ಡ್‌ ನಂಬರ್‌, ಪಾಸ್‌ವರ್ಡ್‌ ಕದಿಯಲು ಅನುಕೂಲವಾಗುವಂತೆ ಸೂಕ್ಷ ್ಮವಾದ ಯಂತ್ರವನ್ನು ಎಟಿಎಂ ಮಷಿನ್‌ಗೆ ಅಳವಡಿಸಿರುತ್ತಾರೆ. ನೋಡಲು ಸಾಮಾನ್ಯ ಎಟಿಎಂನ ಬಿಡಿಭಾಗಗಳಂತೆ ಕಾಣುವುದರಿಂದ ಗ್ರಾಹಕರ ಗಮನಕ್ಕೆ ಬರುವುದೇ ಇಲ್ಲ. ಸಾಮಾನ್ಯ ಗ್ರಾಹಕರಂತೆ ಬರುವ ಕಳ್ಳರು 5 ನಿಮಿಷದಲ್ಲಿ ನಕಲು ಮಷಿನ್‌ ಅಳವಡಿಸಿ ವಾಪಸ್‌ ಆಗುತ್ತಾರೆ. ಎರಡ್ಮೂರು ದಿನ ಬಿಟ್ಟು ಅದನ್ನು ಕೊಂಡೊಯ್ದು ಅದರಲ್ಲಿ ಸಂಗ್ರಹವಾಗಿರುವ ಮಾಹಿತಿ ಆಧಾರದ ಮೇಲೆ ನಕಲಿ ಎಟಿಎಂ ಕಾರ್ಡ್‌ ತಯಾರಿಸಿ ಹಣ ಲಪಾಟಾಯಿಸುತ್ತಾರೆ.

ಸೆಕ್ಯೂರಿಟಿ ಗಾರ್ಡ್‌ ಇಲ್ಲ: ನಕಲು ಮಷಿನ್‌ ಅಳವಡಿಸಿದರೂ ಅದನ್ನು ಪತ್ತೆ ಹಚ್ಚಲು ಸೂಕ್ತ ವ್ಯವಸ್ಥೆ ಇಲ್ಲ. ಸಿಸಿ ಕ್ಯಾಮೆರಾ ಬಿಟ್ಟರೆ ಯಾವುದೇ ಸೌಕರ್ಯ ಇಲ್ಲದಿರುವುದೇ ಕಳ್ಳರಿಗೆ ಅನುಕೂಲಕರವಾಗಿದೆ. ಎಟಿಎಂಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದಿರುವುದೇ ಕಳ್ಳತನಕ್ಕೆ ಪೂರಕವಾಗಿದೆ. ಇಂತಹ ಎಟಿಎಂಗಳನ್ನೇ ಆಯ್ಕೆ ಮಾಡಿಕೊಳ್ಳುವ ಕಳ್ಳರು ಸುಲಭವಾಗಿ ತಮ್ಮ ಕಾರ್ಯ ಸಾಧಿಸುತ್ತಾರೆ. ಇನ್ನು ಸಿಸಿ ಕ್ಯಾಮೆರಾ ಇದ್ದರೂ ಅದನ್ನು ಅನುಮಾನ ಬಂದಾಗ ಮಾತ್ರ ಪರಿಶೀಲಿಸಲಾಗುತ್ತದೆ. ಇದು ಕಳ್ಳರಿಗೆ ಮತ್ತಷ್ಟು ಅನುಕೂಲಕರವಾಗಿದೆ.

ಶಿವಮೊಗ್ಗ ನಗರದ ಎರಡು ಕಡೆ ಸ್ಕಿಮ್ಮಿಂಗ್‌ ಮಷಿನ್‌ ಬಳಸಿ ಗ್ರಾಹಕರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದು, ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಇದನ್ನು ಗಮನಿಸಿ ಬಯಲು ಮಾಡಿದ್ದಾರೆ. ಎರಡು ಪ್ರಕರಣಗಳಲ್ಲೂ ಬೇರೆ ಬೇರೆ ಕಳ್ಳರ ಕೈಚಳಕ ಇರುಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈವರೆಗೂ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ.

ಬ್ಯಾಂಕ್‌ಗೆ ಹೊರೆ: ಎಟಿಎಂಗಳನ್ನು ನಿಭಾಯಿಸುವುದು ಹೊರೆ ಎಂಬ ಕಾರಣಕ್ಕೆ ಬಹುತೇಕ ಎಟಿಎಂಗಳಲ್ಲಿ ಸೆಕ್ಯೂರಿಟ್ ಗಾರ್ಡ್‌ ಗಳನ್ನು ನೇಮಕ ಮಾಡುತ್ತಿಲ್ಲ. ಆರ್‌ಬಿಐ ಕೂಡ ಸೆಕ್ಯೂರಿಟ್ ಗಾರ್ಡ್‌ ನೇಮಕ ಕಡ್ಡಾಯ ಮಾಡಿಲ್ಲ. ಬೇಕೆಂದರೆ ಬ್ಯಾಂಕ್‌ಗಳೇ ನೇಮಕ ಮಾಡಿಕೊಳ್ಳಬಹುದು ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಗಳು.

Advertisement

ಇತ್ತೀಚೆಗೆ ಎಟಿಎಂ ಬಳಸುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಯುವಕ, ಯುವತಿಯರು ಆನ್‌ಲೈನ್‌ ಸರ್ವೀಸ್‌ಗಳಿಗೆ ಮಾರು ಹೋಗಿದ್ದಾರೆ. ಪ್ರತಿ ಹೋಟೆಲ್, ಅಂಗಡಿಗಳೂ ಆನ್‌ಲೈನ್‌ ವಹಿವಾಟು ನಡೆಸುತ್ತಿವೆ. ಒಂದು ಎಟಿಎಂ ಮಷಿನ್‌ಗೆ 18 ರಿಂದ 20 ಲಕ್ಷ, ಎಸಿಗೆ 1 ಲಕ್ಷ, ಸಿಬ್ಬಂದಿ ಸಂಬಳ, ಇಂಟರ್‌ನೆಟ್, ಕಟ್ಟಡ ಬಾಡಿಗೆ, ವಿದ್ಯುತ್‌ ಇತರೆ ಖರ್ಚು ಸೇರಿ ತಿಂಗಳಿಗೆ 50 ಸಾವಿರ ರೂ. ನಿರ್ವಹಣೆ ವೆಚ್ಚ ಬರುತ್ತದೆ. ಎಟಿಎಂ ಬಳಕೆದಾರರಿಂದ ಇಷ್ಟೊಂದು ಆದಾಯ ಬರುತ್ತಿಲ್ಲ. ಅದಕ್ಕಾಗಿ ಸೆಕ್ಯೂರಿಟಿ ನೇಮಕವನ್ನು ಬಹುತೇಕ ಬ್ಯಾಂಕ್‌ಗಳು ಬಂದ್‌ ಮಾಡಿವೆ.

ಶೇ. 70ರಷ್ಟು ಎಟಿಎಂ ಅಸುರಕ್ಷಿತ: ಜಿಲ್ಲೆಯಲ್ಲಿ ಖಾಸಗಿ, ಸರಕಾರಿ ಬ್ಯಾಂಕ್‌ಗಳ 427 ಎಟಿಎಂಗಳಿದ್ದು, ಶೇ. 70ರಷ್ಟು ಎಟಿಎಂಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಇಲ್ಲ. ಕೆನರಾ ಬ್ಯಾಂಕ್‌ನ 115, ಎಸ್‌ಬಿಐ 100, ಕಾರ್ಪೋರೇಷನ್‌ 31, ಸಿಂಡಿಕೇಟ್ 24, ವಿಜಯಾ ಬ್ಯಾಂಕ್‌ 31, ಕರ್ಣಾಟಕ ಬ್ಯಾಂಕ್‌ 23 ಹಾಗೂ ಖಾಸಗಿ ಬ್ಯಾಂಕ್‌ಗಳ ಎಟಿಎಂಗಳಿದ್ದು, ಈಗ ನಡೆದಿರುವ ಎರಡು ಸ್ಕಿಮ್ಮಿಂಗ್‌ ಪ್ರಕರಣಗಳು ಕೆನರಾ ಬ್ಯಾಂಕ್‌ ಎಟಿಎಂಗಳಲ್ಲೇ ನಡೆದಿದೆ.

ರಾಜ್ಯದೆಲ್ಲೆಡೆ ಇದೆ ಸಮಸ್ಯೆ
ಎಟಿಎಂ ಸ್ಕಿಮ್ಮಿಂಗ್‌, ಆನ್‌ಲೈನ್‌ ವಂಚನೆ ಪ್ರಕರಣಗಳು ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜ್ಯವ್ಯಾಪಿ ಇದೆ. ಎಟಿಎಂಗಳ ಬಗ್ಗೆ ಬ್ಯಾಂಕ್‌ಗಳು ನಿರ್ಲಕ್ಷ್ಯ ವಹಿಸಿರುವುದು ಇದಕ್ಕೆ ಕಾರಣ. ಮೋಸದ ಕರೆ, ಇಮೇಲ್, ಲಾಟರಿಗಳಿಗೆ ಮರುಳಾಗುತ್ತಿರುವುದು ಸಹ ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಸ್ಕಿಮ್ಮಿಂಗ್‌ ಸೇರಿ ಆನ್‌ಲೈನ್‌ನಲ್ಲಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಗ್ರಾಹಕರು ತಮ್ಮ ಬ್ಯಾಂಕಿಂಗ್‌ ಗೌಪ್ಯ ಮಾಹಿತಿಯನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು.
ಕೆ. ಕೃಷ್ಣಮೂರ್ತಿ,
ಇನ್ಸ್‌ಪೆಕ್ಟರ್‌, ಸೈಬರ್‌ ಕ್ರೈಂ
•ಶರತ್‌ ಭದ್ರಾವತಿ
Advertisement

Udayavani is now on Telegram. Click here to join our channel and stay updated with the latest news.

Next