ಶಿವಮೊಗ್ಗ: ತರಕಾರಿ ಬೆಲೆಗಳು ನಿಜಕ್ಕೂ ಗಗನಕ್ಕೆ ಏರಿವೆ. ಅದರಲ್ಲೂ ಸೊಪ್ಪಿನ ಬೆಲೆಯಂತೂ ಮುಗಿಲು ಮುಟ್ಟಿದೆ. ಪ್ರಮುಖವಾಗಿ ಎಲ್ಲ ರೀತಿಯ ಸೊಪ್ಪುಗಳು ಮಾರುಕಟ್ಟೆಗೆ ಬಾರದೇ ಇರುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಗ್ರಾಹಕರು ಸೊಪ್ಪು ತಿನ್ನುವುದಕ್ಕೆ ಯೋಚಿಸುವಂತಾಗಿದೆ. ಒಂದು ಸಣ್ಣ ಮೆಂತೆಕಟ್ಟಿಗೆ 10 ರಿಂದ 15 ರೂ., ಪಾಲಕ್ ಕೂಡ ಒಂದು ಕಟ್ಟಿಗೆ 10ರೂ., ಕೊತ್ತಂಬರಿ 10 ರೂ., ಅಲ್ಲದೇ ತುಂಬಾ ಸರಳವಾಗಿ ಸಿಗುತ್ತಿದ್ದ ಎಳೆರ್ಬೆ, ದಂಟಿನಸೊಪ್ಪು, ಸಬ್ಬಸಿಗೆ, ಕಿರುಕ್ ಸಾಲೆ, ನುಗ್ಗೆಸೊಪ್ಪಿನ ಬೆಲೆಯೂ ಕೂಡ ತುಂಬಾ ಏರಿದೆ. 50 ರೂ. ಕೊಟ್ಟರೂ ಒಂದು ಹೊತ್ತಿನ ಸಾರಿಗೂ ಸಾಲದಾಗಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸೊಪ್ಪಿನ ಬೆಳೆ ಕೂಡ ನಾಶವಾಗಿದೆ. ಸೊಪ್ಪಿನ ಜೊತೆಗೆ ಇತರೆ ತರಕಾರಿಗಳಾದ ಬೆಂಡೆಕಾಯಿ, ಹಿರೇಕಾಯಿ, ಕ್ಯಾರೆಟ್, ಬೀನ್ಸ್, ಬದನೆಕಾಯಿ, ಪಡುವಲಕಾಯಿ, ಕುಂಬಳಕಾಯಿ, ಜವಳಿಕಾಯಿ ಸೇರಿದಂತೆ ಇತರೆ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದೆ. ಬೆಂಡೆಕಾಯಿ 40 ರೂ., ಹಿರೇಕಾಯಿ 50 ರೂ., ಕ್ಯಾರೆಟ್ 60 ರೂ., ಬೀನ್ಸ್ 60 ರೂ., ಮ್ಯಾಟೋ ಕೆಜಿಗೆ 25 ರೂ., ಇದೆ. ಇದು ಒಂದು ವಾರದಿಂದ ಪ್ರತಿದಿನ ಏರಿಕೆಯಾಗುತ್ತಲೇ ಇದೆ. ಸೌತೆಕಾಯಿ ಬೆಲೆ ಕೂಡ ಜಾಸ್ತಿಯಾಗಿದೆ. ಇದರ ಜೊತೆಗೆ ಈರುಳ್ಳಿ ಬೆಲೆ ಕೂಡ ಗಗನಕ್ಕೆ ಏರಿದೆ. ಕೆಲವೇ ದಿನಗಳ ಹಿಂದೆ 20 ರೂ.ಗೆ ಸಿಗುತ್ತಿದ್ದ ಈರುಳ್ಳಿ ಇಂದು ಕೆಜಿಗೆ 50 ರೂ. ದಾಟಿದೆ.
ಬೆಳ್ಳುಳ್ಳಿ ಬೆಲೆ ಕೆಜಿಗೆ 200 ರೂ. ಆಗಿದೆ. ಹೀಗೆ ಸಾಲು ಸಾಲು ಹಬ್ಬಗಳ ನಡುವೆ ಬೆಲೆ ಏರಿಕೆಯಾಗುತ್ತಲೇ ಇದೆ. ಬಾಳೆಹಣ್ಣು, ಸೇಬು ಕೂಡ ಏರಿಕೆಯಾಗಿದೆ ಇದೆ. ಪೇರಲೆ ಹಣ್ಣು ಕೆಜಿಗೆ 100 ರೂ.ಎಂದರೆ ಆಶ್ಚರ್ಯವಾಗುತ್ತದೆ. ಇತರೆ ಚಿಕ್ಕ ಚಿಕ್ಕ ವಸ್ತುಗಳಾದ ನಿಂಬೆಹಣ್ಣು, ಶುಂಠಿ, ಪುದೀನ ಮುಂತಾದವುಗಳ ಬೆಲೆ ಕೂಡ ಏರಿಕೆಯಾಗಿದೆ.
ಇದರ ಜೊತೆಗೆ ಮದುವೆ, ಗೃಹ ಪ್ರವೇಶ,ನಾಮಕರಣ ಮುಂತಾದ ಕಾರ್ಯಕ್ರಮಗಳು ಕೂಡ ಹೆಚ್ಚಾಗಿರುವುದರಿಂದ ತರಕಾರಿಗೆ ಬೇಡಿಕೆ ಹೆಚ್ಚಿದೆ. ತರಕಾರಿ ಸರಬರಾಜು ಕಡಿಮೆಯಾಗಿರುವುದರಿಂದ ಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಬೆಲೆ ವಾರದಿಂದ ವಾರಕ್ಕೆ ಏರುತ್ತಲೇ ಇದೆ.
ಗುಣಮಟ್ಟದ ತರಕಾರಿಗಳು ಕೂಡ ಇಲ್ಲವಾಗಿದೆ. ಸೊಪ್ಪುಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿವೆ. ಆದರೂ ಕೂಡ ಕೆಲವು ಸಣ್ಣ ಮತ್ತು ದೊಡ್ಡ ಹೊಟೇಲ್ ನವರು ಇಂತಹ ಗುಣಮಟ್ಟವಲ್ಲದ ತರಕಾರಿಗಳನ್ನೇ ಕೊಂಡುಕೊಂಡು ಹೋಗಿ ಬಳಸುತ್ತಾರೆ. ಇದು ಹೊಟೇಲಿನಲ್ಲಿ ಊಟ ಮಾಡುವ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಟ್ಟಾರೆ ಹಬ್ಬಗಳು ಮುಗಿಯುತ್ತಾ ಬಂದರೂ ಕೂಡ ಬೆಲೆ ಏರಿಕೆ ಕಡಿಮೆಯಾಗುತ್ತಲೇ ಇಲ್ಲ.