Advertisement

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

03:13 PM Nov 08, 2019 | Team Udayavani |

ಶಿವಮೊಗ್ಗ: ಗಂಟೆಗೂ ಹೆಚ್ಚು ಕಾಲ ಮದ್ಯರಾತ್ರಿಯಲ್ಲಿ ಸುರಿದ ನಡುರಾತ್ರಿಯಲ್ಲಿ ಸುರಿದ ಭಾರೀ ಮಳೆಗೆ ಮತ್ತೆ ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ತತ್ತರಿಸಿ ಹೋಗಿದ್ದಾರೆ.

Advertisement

ಪದೇ ಪದೇ ಸುರಿಯುವ ಮಳೆಗೆ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ ನಗರದ ಟ್ಯಾಂಕ್‌ ಮೊಹಲ್ಲಾ, ಬಾಪೂಜಿ ನಗರದ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ನೀರು ಕಾಣಿಸಿಕೊಂಡ ತಕ್ಷಣ ಅಲ್ಲಿನ ಜನರು ಇಡೀರಾತ್ರಿ ನಿದ್ದೆ ಇಲ್ಲದೆ ಹಿಡಿಶಾಪ ಹಾಕಿದರು. ರಾತ್ರಿಯೇ ಮಹಾನಗರ ಪಾಲಿಕೆಗೆ ಸಂಬಂಧಪಟ್ಟವರಿಗೆ ಮೊಬೈಲ್‌ ಮೂಲಕ ನೆರವಿಗೆ ಬರುವಂತೆ ಅಳಲು ತೋಡಿಕೊಂಡರು. ಆದರೆ ಆಯುಕ್ತರು ಸೇರಿದಂತೆ ಅಧಿಕಾರಿಗಳು ಯಾರೂ ಕೂಡ ಸ್ಥಳಕ್ಕೆ ಬರಲಿಲ್ಲ.

ಜನರ ಕಷ್ಟ ಆಲಿಸಲಿಲ್ಲ. ಮುಖ್ಯವಾಗಿ ಆಯುಕ್ತರೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಸಂಕಷ್ಟ ಜನರ ಆಕ್ರೋಶಕ್ಕೆ ಕಾರಣವಾಯಿತು.

ಬಾಪೂಜಿನ ನಗರ ಮುಖ್ಯ ರಸ್ತೆಯಲ್ಲಿನ ರಾಜ ಕಾಲುವೆಗೆ ಪೈಪ್‌ ಅಳವಡಿಸಿದ್ದರಿಂದ ದಿಢೀರನೆ ಸುರಿದ ಭಾರೀ ಮಳೆಯಿಂದಾಗಿ ರಾಜಕಾಲುವೆಯಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿದಿದ್ದು, ಟ್ಯಾಂಕ್‌ ಮೊಹಲ್ಲಾ 6, 7, ಬಾಪೂಜಿ ನಗರದ ಅನೇಕ ತಿರುವುಗಳಲ್ಲಿ ನೀರು ಮನೆಗಳಿಗೆ ನುಗ್ಗಿ ನಡುರಾತ್ರಿಯಲ್ಲಿ ಜನರ ಆತಂಕದಿಂದ ಕಾಲ ಕಳೆಯುವಂತಾಯಿತು. ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿದ್ದರಿಂದ ಮನೆಯಲ್ಲಿನ ಸಾಮಾನು- ಸರಂಜಾಮುಗಳು ನೀರಿನಲ್ಲಿ ತೇಲುತ್ತಿದ್ದವು.

ನೂರಾರು ಮನೆಗಳಿಗೆ ಹಾನಿಯಾಗಿದೆ. ಇಲ್ಲಿ ನೀರು ನುಗ್ಗಲ್ಲು ಪ್ರಮುಖವಾಗಿ ರಾಜ ಕಾಲುವೆಯೇ ಕಾರಣ. ಕಾಲುವೆಯಲ್ಲಿ ನೀರು ಸರಾಗವಾಗಿ ಹೋಗದೆ ತುಂಬಿ ತಗ್ಗಿದ್ದ ಕಡೆಗೆ ಹರಿಯುತ್ತದೆ. ಕಳೆದ ಕೆಲವು ದಿನಗಳ ಹಿಂದೆ ರಾಜಕಾಲುವೆ ದುರ್ಬಲವೂ ಆಗಿದ್ದ ಸೇತುವೆಯನ್ನು ತೆರವುಗೊಳಿಸಲಾಗಿತ್ತು. ಈಗಾಗಲೇ ಹೊಸ ಸೇತುವೆಗೆ ಟೆಂಡರ್‌ ಮುಗಿದ ಕಾಮಗಾರಿ ಆರಂಭವಾಗಬೇಕಿದೆ. ಆದರೆ ಅದು ವಿಳಂಬವಾಗುತ್ತಿರುವುದರಿಂದ ಪದೇ ಪದೇ ಈ ಭಾಗದ ಜನರು ಸಂಕಷ್ಟಪಡುವಂತಾಗಿದೆ.

Advertisement

ಈ ಮಧ್ಯೆ ಭಾನುವಾರ ಈದ್‌ ಮಿಲಾದ್‌ ಮೆರವಣಿಗೆ ಈ ರಸ್ತೆಯಲ್ಲಿ ಹಾದು ಹೋಗುವುದರಿಂದ ತಾತ್ಕಾಲಿಕವಾಗಿ ದಾರಿ ಮಾಡಿಕೊಡಬೇಕೆಂಬ ಮುಸ್ಲಿಂ ಸಮುದಾಯದವರ ಒತ್ತಾಯದ ಮೇರೆಗೆ ಬುಧವಾರ ಮಹಾನಗರ ಪಾಲಿಕೆ ವತಿಯಿಂದ ರಾಜಕಾಲುವೆಗೆ ಪೈಪ್‌ವೊಂದನ್ನು ಅಳವಡಿಸಿ ದಾರಿ ಮಾಡಿಕೊಡಲಾಗಿತ್ತು. ಆದರೆ ರಾತ್ರಿ ದಿಢೀರನೆ ಸುರಿದ ಭಾರೀ ಮಳೆಯಿಂದಾಗಿ ರಾಜಕಾಲುವೆ ತುಂಬಿ ಉಕ್ಕಿದ್ದು ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ರಸ್ತೆಗಳ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಮಾಡಿದೆ.

ಈ ಮಧ್ಯೆ ಗುರುವಾರ ಮುಂಜಾನೆಯ ನಂತರ ಪಾಲಿಕೆ ಸದಸ್ಯರಾದ ಸುರೇಖಾ ಮುರಳೀಧರ್‌, ಯೋಗೇಶ್‌ ಮತ್ತು ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next