Advertisement

ಮಲೆನಾಡಿನಲ್ಲಿ ಸತತ ಮಳೆ; ರೈತರು ಹೈರಾಣ

01:35 PM Sep 09, 2019 | Naveen |

•ವಿಶೇಷ ವರದಿ
ಶಿವಮೊಗ್ಗ:
ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆಯು ಮೆಕ್ಕೆಜೋಳ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಜುಲೈನಲ್ಲಿ ಮಳೆ ಸಂಪೂರ್ಣ ಕೈಕೊಟ್ಟ ಕಾರಣ ಭತ್ತ ಬಿತ್ತಬೇಕಾದ ರೈತರೆಲ್ಲ ಮೆಕ್ಕೆಜೋಳ ಬಿತ್ತನೆ ಮಾಡಿದರು. ಆದರೆ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಭಾರೀ ಮಳೆಯು ರೈತರನ್ನು ಹೈರಾಣಾಗಿಸಿದೆ.

Advertisement

ಮೆಕ್ಕೆಜೋಳ ಬಿತ್ತನೆ ಮಾಡಿ ಈಗಾಗಲೇ 45 ದಿನ ಕಳೆದಿದ್ದು ತೆನೆ ಕಟ್ಟುವ ಹಂತಕ್ಕೆ ಬಂದಿದೆ. ರೈತರು ಈಗಾಗಲೇ ರಸಗೊಬ್ಬರ ಕೊಟ್ಟಿರುವುದರಿಂದ ಬೆಳೆ ಫಲವತ್ತಾಗಿದೆ. ವಾರದಿಂದ ಜಿಟಿಜಿಟಿಯಾಗಿ ಸುರಿಯುತ್ತಿರುವ ಹುಬ್ಬೆ ಮಳೆಯು ತಗ್ಗು ಪ್ರದೇಶದಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳಕ್ಕೆ ಸಂಚಕಾರ ತಂದಿದೆ. ಮತ್ತೆ ನೆರೆ ನಿಂತರೆ ಬೆಳೆ ಹಾಳಾಗುವ ಜತೆಗೆ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಇದೆ.

ಆಗಸ್ಟ್‌ ಮೊದಲ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭತ್ತ ಬಿತ್ತನಗೆ ಸಾಕಾಗುವಷ್ಟು ನೀರಿದೆ. ಮೆಕ್ಕೆಜೋಳದ ಬೆಳೆ ಹಾಳಾದ ರೈತರು ಭತ್ತ ಬಿತ್ತನೆಗೆ ಮುಂದಾಗಿದ್ದಾರೆ. ಈಗಾಗಲೇ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ತೆಗೆದು ಭತ್ತ ನಾಟಿ ಮಾಡಲಾಗಿದೆ. ಕೆಲ ರೈತರು ಆರ್ಥಿಕ ಶಕ್ತಿ ಇಲ್ಲದೆ ಹಾಳಾಗಿರುವ ಬೆಳೆಯನ್ನು ಹಾಗೆಯೇ ಉಳಿಸಿ ಪರಿಹಾರಕ್ಕಾಗಿ ಮೊರೆ ಹಾಕುತ್ತಿದ್ದಾರೆ.

54949 ಹೆಕ್ಟೇರ್‌ನಲ್ಲಿ ಬೆಳೆ: ಮಳೆ ಏರಿಳಿತ ನಡುವೆಯೂ ಮೆಕ್ಕೆಜೋಳ ಬಿತ್ತನಗೆ ರೈತರು ಹಿಂದೇಟು ಹಾಕಲಿಲ್ಲ. ಜಿಲ್ಲೆಯಲ್ಲಿ 55100 ಹೆಕ್ಟೇರ್‌ ಬಿತ್ತನೆ ಗುರಿಗೆ 54949 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಶಿವಮೊಗ್ಗ 13970 ಹೆಕ್ಟೇರ್‌, ಭದ್ರಾವತಿ 1985 ಹೆಕ್ಟೇರ್‌, ಸಾಗರ 2850 ಹೆಕ್ಟೇರ್‌, ಹೊಸನಗರ 480 ಹೆಕ್ಟೇರ್‌, ಶಿಕಾರಿಪುರ 21995 ಹೆಕ್ಟೇರ್‌, ಸೊರಬ 12769 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಸಾಗರ, ಸೊರಬ ಭಾಗದಲ್ಲಿ ಹೆಚ್ಚಿನ ಹಾನಿಯಾಗಿದೆ. ಕೃಷಿ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದ್ದು ಮಳೆ ಕಡಿಮೆಯಾದರೆ ಉತ್ತಮ ಇಳುವರಿ ಲಭಿಸುವ ಸಾಧ್ಯತೆ ಇದೆ.

ಶೇ.21ರಷ್ಟು ಹೆಚ್ಚುವರಿ ಮಳೆ
ಮುಂಗಾರು ಮಳೆ ಅವಧಿಯಲ್ಲಿ ವಾಡಿಕೆಗಿಂತ ಶೇ.21ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್‌ನಲ್ಲಿ ಶೇ.44ರಷ್ಟು ಮಳೆ ಕೊರತೆಯಾದರೆ, ಜುಲೈನಲ್ಲಿ ಶೇ.16ರಷ್ಟು ಕೊರತೆಯಾಗಿತ್ತು. ಆದರೆ ಆಗಸ್ಟ್‌ನಲ್ಲಿ ಶೇ.112ರಷ್ಟು ಹೆಚ್ಚುವರಿ ಮಳೆಯಾಗಿದೆ. ಸೆ. 1ರಿಂದ 7ರವರೆಗೆ ವಾಡಿಕೆಗಿಂತ ಶೇ.313ಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್‌, ಜುಲೈನ ಬರವನ್ನು ಆಗಸ್ಟ್‌, ಸೆಪ್ಟೆಂಬರ್‌ ಮಳೆಗಳು ನೀಗಿಸಿವೆ. ಶಿವಮೊಗ್ಗ ತಾಲೂಕಿನಲ್ಲಿ ಈ ಬಾರಿಯ ಮಾನ್ಸೂನ್‌ನಲ್ಲಿ ಅಧಿಕ ಮಳೆ ದಾಖಲಾಗಿದೆ. ಜೂ. 1ರಿಂದ ಸೆ.7ರವರೆಗೆ 565 ಮಿಮೀ ಮಳೆ ವಾಡಿಕೆ ಬದಲಿಗೆ 903 ಮಿಮೀ ಮಳೆಯಾಗಿದೆ. ಅದೇ ರೀತಿ ಭದ್ರಾವತಿಯಲ್ಲೂ ಶೇ.51ರಷ್ಟು ಹೆಚ್ಚು ಮಳೆಯಾಗಿದೆ. 457 ಮಿಮೀ ವಾಡಿಕೆಗೆ 688 ಮಿಮೀ ಮಳೆಯಾಗಿದೆ. ಸಾಗರದಲ್ಲಿ 2303 ಮಿಮೀ ವಾಡಿಕೆಗೆ 3153 (ಶೇ.37). ಶಿಕಾರಿಪುರ 580 ಮಿಮೀ ವಾಡಿಕೆಗೆ 777 ಮಿಮೀ (ಶೇ.34), ಹೊಸನಗರದಲ್ಲಿ 2499 ಮಿಮೀ ವಾಡಿಕೆಗೆ 3209 ಮಿಮೀ, ಸೊರಬ 1388 ಮಿಮೀ ವಾಡಿಕೆಗೆ 1435 ಮಿಮೀ ಮಳೆಯಾಗಿದೆ. ಆದರೆ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಆಶ್ಚರ್ಯ ಮೂಡಿಸಿದೆ. 2998 ಮಿಮೀ ವಾಡಿಕೆಗೆ 2810 ಮಿಮೀ ಮಳೆಯಾಗಿದೆ.

ಭತ್ತ ನಾಟಿಯಲ್ಲಿ ಪ್ರಗತಿ

ಆಗಸ್ಟ್‌ 15ರ ನಂತರ ಜಿಲ್ಲಾದ್ಯಂತ ಭತ್ತದ ನಾಟಿ ಆರಂಭವಾಗಿದ್ದು ಶೇ.95ರಷ್ಟು ಪೂರ್ಣಗೊಂಡಿದೆ. ನೆರೆ ಆವರಿಸಿದ್ದ ಗದ್ದೆಗಳಲ್ಲಿ ಮತ್ತೂಮ್ಮೆ ನಾಟಿ ಆರಂಭವಾಗಿದ್ದು ವಾರದೊಳಗೆ ಗುರಿ ತಲುಪುವ ವಿಶ್ವಾಸದಲ್ಲಿ ಕೃಷಿ ಇಲಾಖೆ ಇದೆ. ಜಿಲ್ಲೆಯಲ್ಲಿ 99684 ಹೆಕ್ಟೇರ್‌ ಭತ್ತದ ಬೆಳೆ ಗುರಿ ಹೊಂದಲಾಗಿದ್ದು, ಸೆ.7ರವರೆಗೆ 92614 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಭತ್ತದ ನಾಟಿಗೆ ಬೇಕಾದಷ್ಟು ನೀರು ಲಭ್ಯವಿದ್ದು ರೈತ ನಿರಾತಂಕಗೊಂಡಿದ್ದಾನೆ.
ಮಳೆ ಮುಂದುವರಿದಿರುವುದರಿಂದ ತಗ್ಗು ಪ್ರದೇಶದಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳದಲ್ಲಿ ಇಳುವರಿ ಕುಂಠಿತವಾಗಬಹುದು. ಅಗತ್ಯ ಪೋಷಕಾಂಶ ನೀಡಿದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು.
ಡಾ| ಕಿರಣ್‌ಕುಮಾರ್‌,
 ಜಂಟಿ ನಿರ್ದೇಶಕ, ಕೃಷಿ ಇಲಾಖೆ
Advertisement
Advertisement

Udayavani is now on Telegram. Click here to join our channel and stay updated with the latest news.

Next