ಶಿವಮೊಗ್ಗ: ದೀಪಾವಳಿ ಕೊನೆ ದಿನವಾದ ಮಂಗಳವಾರ ಜಿಲ್ಲಾದ್ಯಂತ ದನಕರುಗಳಿಗೆ ಮೈ ತೊಳೆದು ಶೃಂಗಾರ ಮಾಡಿ ಪೂಜೆ ಸಲ್ಲಿಸಲಾಯಿತು. ವರ್ಷಪೂರ್ತಿ ಸೇವೆ ಮಾಡುವ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಮನೆಗೆ ಕರೆದೊಯ್ಯಲಾಯಿತು.
ದನಕರು, ಹಸು, ಎತ್ತುಗಳ ಮೈಮೇಲೆ ವಿಧ- ವಿಧದ ರಂಗೋಲಿ ಬಿಡಿಸಿ, ಅದಕ್ಕೆ ಬಣ್ಣ ತುಂಬಲಾಗಿತ್ತು. ಬಲೂನ್, ವಿಶೇಷ ಹೊದಿಕೆ ಹಾಕಿ ಅಲಂಕರಿಸಲಾಗಿತ್ತು. ರೈತಾಪಿಗಳು ಶಕ್ತಿಯನುಸಾರ ಅಲಂಕಾರ ಮಾಡಿದ್ದು ಕಂಡುಬಂತು. ಶಿಕಾರಿಪುರ, ಸೊರಬ ಭಾಗದಲ್ಲಿ ಹೋರಿ ಬೆದರಿಸುವ ಹಬ್ಬ ವಿಶೇಷವಾಗಿದ್ದು ಬೆಳಗ್ಗೆಯಿಂದಲೇ ಅನೇಕ ಹಳ್ಳಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಳೆದ ಬಾರಿ ಹೋರಿ ಹಬ್ಬಕ್ಕೆ ಅನುಮತಿ ಸಿಕ್ಕಿರಲಿಲ್ಲ. ಕೆಲವು ಕಡೆ ಮೌಖೀಕ ಅನುಮತಿ ಮೇರೆಗೆ ಹಬ್ಬದ ನಡೆಸಲಾಗಿತ್ತು. ಈ ಬಾರಿ ಯಾವುದೇ ಅಡೆತಡೆಗಳು ಇಲ್ಲದ ಕಾರಣ ಹೋರಿ ಬೆದರಿಸುವ ಹಬ್ಬ ಜೋರಾಗಿ ನಡೆದಿದೆ.
ಲಂಬಾಣಿ ತಾಂಡಾದಲ್ಲಿ ರಂಗು: ಬುಡಕಟ್ಟು ಸಾಂಸ್ಕೃತಿಕ ಲಂಬಾಣಿ ತಾಂಡಾಗಳಲ್ಲಿಯೂ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು. ಯುವತಿಯರು ಹೊಸ ಉಡುಗೆ ತೊಟ್ಟು ಗ್ರಾಮದ ಸರ್ದಾರ್ ಸೇವಾಲಾಲ್ ಮಂದಿರದಲ್ಲಿ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಸುವಿಗೆ ದೀಪ ಬೆಳಗಿ ಪ್ರಾರ್ಥಿಸಿದರು. ಬಳಿಕ ಮನೆ- ಮನೆಗೂ ತೆರಳಿ (ಮೇರಾ) ದೀಪದ ಬೆಳಕು ಹಂಚಿ ದೀಪಾವಳಿಯ ಶುಭಾಶಯ ಕೋರಿದರು. ಬಳಿಕ ಊರಿನ ಕನ್ಯೆಯರೆಲ್ಲಾ ಒಟ್ಟಾಗಿ ತಂಗಟಿ ಹೂವು ತರಲೆಂದು ಕಾಡಿಗೆ ತೆರಳಲು ಅಣಿಯಾಗುತ್ತಾರೆ.
ತಲೆ ಮೇಲೆ ತಾಯಂದಿರು ಕಟ್ಟಿಕೊಟ್ಟ ಬುತ್ತಿ, ಬುತ್ತಿಗೆ ಸಹೋದರರು ಪ್ರೀತಿಯಿಂದ ಹಾರೈಸಿ ನೀಡಿದ ದಕ್ಷಿಣೆ ರೂಪದ ಹಣದ ಮೂಲಕ ಸಿಂಗರಿಸಲಾಗಿರುತ್ತದೆ. ಬುತ್ತಿಹೊತ್ತು ಸಾಗುವ ಯುವತಿಯರ ಸಾಲು ನೋಡುವುದೇ ಕಣ್ಣಿಗೆ ಹಬ್ಬ.
ಊರಿನ ಮಂದಿಯೆಲ್ಲಾ ಸೇರಿ ಭಾಜಾ ಭಜಂತ್ರಿಯೊಂದಿಗೆ ಗ್ರಾಮದ ಗಡಿವರೆಗೆ ಯುವತಿಯರೊಂದಿಗೆ ಮೆರವಣಿಗೆ ಹೊರಡುತ್ತಾರೆ. ಮಹಿಳೆಯರೂ ಸಹ ಯುವತಿಯರೊಂದಿಗೆ ಹಾಡಿ ಕುಣಿಯುತ್ತಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಹೆಜ್ಜೆ ಹಾಕುತ್ತಾರೆ. ಗ್ರಾಮದ ಗಡಿ ಬರುತ್ತಿದ್ದಂತೆ ಯುವತಿಯರು ಮಾತ್ರ ಕಾಡಿಗೆ ಕಳುಹಿಸಿ ಉಳಿದವರು ಗ್ರಾಮಕ್ಕೆ ಹಿಂದಿರುಗುತ್ತಾರೆ. ಎಲ್ಲ ಕಡೆ ಕಾಡು ಇಲ್ಲದ ಕಾರಣ ಊರಿನ ಹೊರಗೆ ಕಳುಹಿಸುತ್ತಾರೆ. ಕಾಡಿಗೆ ತೆರಳಿದ ಯುವತಿಯರು ದೇವರಿಗೆ ಪ್ರಿಯವಾದ ತಂಗಟಿ ಹೂವನ್ನು ಕೀಳುತ್ತಾರೆ.
ಪೋಷಕರು ನೀಡಿದ ಬುತ್ತಿ, ಸಹೋದರರು ನೀಡಿದ ಹಣದಲ್ಲಿ ಪಡೆದ ಸಿಹಿ ತಿನಿಸುಗಳನ್ನು ಹಂಚಿಕೊಂಡು ತಿನ್ನುತ್ತಾರೆ. ಯುವತಿಯರು ತಂಗಟಿ ಹೂವು ತಂದ ನಂತರವೇ ಮನೆಯಲ್ಲಿ ಪೂಜೆ, ಪುನಸ್ಕಾರ ಶುರುವಾಗುತ್ತದೆ. ಪಾಂಡವರು ಮುಡಿಗೇರಿಸಿಕೊಂಡಿದ್ದ ತಂಗಟಿ ಹೂವು ಮನೆಯಲ್ಲಿದ್ದರೆ ಶಾಂತಿ, ಸಂಪತ್ತು, ಸಮೃದ್ಧಿ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಬುಡಕಟ್ಟು ಸಮುದಾಯದ ಜನರಲ್ಲಿದೆ.
ಮನೆಗಳಲ್ಲಿ ಎರಡು ಮಣ್ಣಿನ ಹಣತೆಗಳಲ್ಲಿ ದೀಪವನ್ನು ಹಚ್ಚಿಡಲಾಗುತ್ತದೆ. ಹಬ್ಬ ಮುಗಿಯುವವರೆಗೂ ಆ ಹಣತೆ ಆರದಂತೆ ನೋಡಿಕೊಳ್ಳುವುದು ಮಹಿಳೆಯರ ಜವಬ್ದಾರಿ ಆಗಿರುತ್ತದೆ. ಇಂತಹ ವಿಶಿಷ್ಟ ಆಚರಣೆಯನ್ನು ಜಿಲ್ಲೆಯ ಅನೇಕ ಕಡೆ ಆಚರಿಸಿದರು.