Advertisement

Shivamogga: ಉಚಿತ ಪ್ರವಾಸ ಆಮಿಷವೊಡ್ಡಿ ವಂಚನೆ ಪತ್ತೆ

08:36 AM Jul 24, 2024 | Kavyashree |

ಶಿವಮೊಗ್ಗ: “ಮೇಕ್‌ ಫ್ರೀ ಟ್ರಿಪ್‌, ಮೇಕ್‌ ಫ್ರೀ ಮನಿ’ ಎಂಬ ಕಂಪೆನಿ ಹೆಸರಿನಲ್ಲಿ ಉಚಿತವಾಗಿ ಪ್ರವಾಸ ಕರೆದುಕೊಂಡು ಹೋಗುವ ಭರವಸೆ ನೀಡಿ ವಂಚಿಸುತ್ತಿದ್ದ ಜಾಲವನ್ನು ಜಯನಗರ ಠಾಣೆ ಪೊಲೀಸರು ಬಯಲಿಗೆ ಎಳೆದಿದ್ದಾರೆ.

Advertisement

ಕಿಶೋರ್‌ ಕುಮಾರ್‌ ಎಂಬುವವರಿಗೆ ನಾಗರಾಜ್‌ ಎಂಬವರು ನೀವು 9 ಸಾವಿರ ರೂ. ಕಟ್ಟಿ ಸದಸ್ಯರಾಗಿ, ಆರು ಜನರನ್ನು ಸೇರಿಸಿದರೆ ಹೊರರಾಜ್ಯಕ್ಕೆ ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ, ಜತೆಗೆ 9 ಸಾವಿರ ರೂ. ವಾಪಸ್‌ ಕೊಡುತ್ತೇವೆ. 90 ಸಾವಿರ ರೂ. ಹೂಡಿಕೆ ಮಾಡಿದರೆ ಬೆಂಗಳೂರಿನಿಂದ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ಕ್ರೂಜ್‌ ಮೂಲಕ ಗೋವಾಗೆ 2 ರಾತ್ರಿ, ಮೂರು ಹಗಲು ಉಚಿತವಾಗಿ ಟ್ರಿಪ್‌ ಕರೆದುಕೊಂಡು ಹೋಗುತ್ತೇವೆ. ಅಲ್ಲದೇ ಹಣ ಹೂಡಿಕೆ ಮಾಡಿದ್ದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು 6 ಸಾವಿರ ರೂ., ನಂತರ 33 ತಿಂಗಳು 1.98 ಲಕ್ಷ ರೂ. ವಾಪಸ್‌ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು.

ಅಲ್ಲದೇ ನಾಗರಾಜ್‌ ಜತೆಗೆ ಉಳಿದ ಆರೋಪಿಗಳಾದ ಮಹಮ್ಮದ್‌ ಲತೀಫ್‌, ಕಿಶೋರ್‌ ಬಿ.ಕೆ., ಮಹಮ್ಮದ್‌ ಅಶ್ರಫ್‌ ಅವರು ಖಾಸಗಿ ಹೋಟೆಲ್‌ಗ‌ಳಲ್ಲಿ ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡಿ ನಂಬಿಕೆ ಹುಟ್ಟಿಸಿದ್ದರು. ಅವರ ಮಾತು ನಂಬಿ ಕಿಶೋರ್‌ ಕುಮಾರ್‌ ಅವರು ನಗದು ರೂಪದಲ್ಲಿ 7.52 ಲಕ್ಷ ರೂ., ಕಿಶೋರ್‌ ಖಾತೆಗೆ ಫೋನ್‌ ಪೇ, ಗೂಗಲ್‌ ಪೇ ಮೂಲಕ 1.16 ಲಕ್ಷ ರೂ., ಮಹಮದ್‌ ಆಶ್ರಫ್‌ ಬ್ಯಾಂಕ್‌ ಖಾತೆಗೆ 1ಲಕ್ಷ ರೂ. ಹಾಗೂ ಮಹಮದ್‌ ಲತೀಫ್‌ ಅವರ ಹೆಂಡತಿ ಫಾತೀಮಾ ಬ್ಯಾಂಕ್‌ ಖಾತೆಗೆ 2.80 ಲಕ್ಷ ರೂ. ಹಾಕಿದ್ದರು.

ಅನಂತರ ಕಿಶೋರ್‌ ಕುಮಾರ್‌ ಹಾಗೂ ಅವರು ಕುಟುಂಬದವರಿಗೆ ಒರಿಸ್ಸಾ ಹಾಗೂ ಗೋವಾಕ್ಕೆ ಪ್ರವಾಸ ಕರೆದುಕೊಂಡು ಹೋಗಿದ್ದರು ಹಾಗೂ ಕಂಪೆನಿಯಿಂದ 12 ಸಾವಿರ ರೂ. ಮಾತ್ರ ವಾಪಸ್‌ ಕೊಟ್ಟಿದ್ದರು. ಕಿಶೋರ್‌ ಕುಮಾರ್‌ ಅವರಂತೆ ಪ್ರಸನ್ನ ಎಂಬುವರು 90 ಸಾವಿರ ರೂ., ಗೈಬಾನ್‌ ಖಾನ್‌ 1.80 ಲಕ್ಷ ರೂ, ದೊಡ್ಡವೀರಪ್ಪ 2.18 ಲಕ್ಷ ರೂ., ಮೋಹನ್‌ 4.85 ಲಕ್ಷ ರೂ., ಶಿವಶಂಕರ ಶಾಸ್ತಿÅ 2.13 ಲಕ್ಷ ರೂ., ಗಂಗಾವತಿ 45 ಸಾವಿರ ರೂ., ರಮೇಶ 9 ಸಾವಿರ ರೂ., ಅಬ್ದುಲ್‌ ಮುತಲಬ್‌ 9 ಸಾವಿರ ರೂ. ಹೂಡಿಕೆ ಮಾಡಿದ್ದು ಅವರಿಗೂ ಸಹ ಹಣ ವಾಪಸ್‌ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕಂಪೆನಿಗೆ ಹೂಡಿಕೆ ಮಾಡಿ ಮೋಸ ಹೋದವರು ಯಾರಾದರೂ ಇದ್ದಲ್ಲಿ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡುವಂತೆ ಜಯನಗರ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next