ಬೀದರ್: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲೆಯ ಗೊಂಡ (ಕುರುಬ) ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಬೊಮ್ಮಗೊಂಡೇಶ್ವರ ವೃತ್ತದ ಬಳಿ ಸೇರಿದ ಕಾರ್ಯಕರ್ತರು, ಅಲ್ಲಿಂದ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಂತರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಜೋಳದಾಪಕೆ ಮಾತನಾಡಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ಕ್ರಮ ಸಂವಿಧಾನ ವಿರೋಧಿಯಾಗಿದೆ. ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡೆಸಿಕೊಂಡು ಕರ್ನಾಟಕ ಸರ್ಕಾರವನ್ನು ಬೀಳಿಸುವ ಕುತಂತ್ರ ನಡೆಸುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜನಪರ ಯೋಜನೆಗಳೊಂದಿಗೆ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಕಾರಣ, ಸರ್ಕಾರದ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಾಂವಿಧಾನಿಕ ಹುದ್ದೆಯಲ್ಲಿ ಇರುವ ರಾಜ್ಯಪಾಲರು ಕೇಂದ್ರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದು ರಾಜಕೀಯ ಪ್ರೇರಿತವಾಗಿದೆ. ರಾಷ್ಟ್ರಪತಿ ಅವರು ಕೂಡಲೇ ಈ ಅನುಮತಿಯನ್ನು ಹಿಂಪಡೆಯಲು ರಾಜ್ಯಪಾಲರಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಮುಖಂಡರಾದ ಮಾಳಪ್ಪ ಅಡಸಾರೆ, ಚಂದ್ರಕಾಂತ ಮೇತ್ರೆ, ನರಸಿಂಗ್ ಚಂದಾಪುರೆ, ಭೀಮಸಿಂಗ್ ಮಲ್ಕಾಪುರ, ಎಂ.ಎಸ್. ಕಟಗಿ, ಪಿ.ಎಸ್. ಇಟಕಂಪಳ್ಳಿ, ರಘುನಾಥ ಭೂರೆ, ಬಾಬುರಾವ್ ಸಂಗೋಳಗಿ, ರಮೇಶ ಜನವಾಡ, ವಿಠ್ಠಲ ರಾಜಗೀರಾ, ಹಣಮಂತ ಪಂಚಭಾಯಿ, ನಾಗೇಶ ಜಾನಕನೋರ, ಪಂಡಿತ ಬಾವಗಿ, ಬಸವರಾಜ ಕುತ್ತಾಬಾದ್, ಬಸವರಾಜ ಬಾವಗಿ, ಮಾರುತಿ ಗಾದಗಿ, ಪಂಢರಿ ಢೋಣೆ, ಅನಿಲ್ ಹೂಗೇರಿ, ಸಂಗಮೇಶ ಏಣಕೂರೆ, ಸುನೀಲ್ ಚಿಲ್ಲರ್ಗಿ ಮೊದಲಾದವರು ಪಾಲ್ಗೊಂಡಿದ್ದರು.