Advertisement

ಎಂ.ಬಿ.ಪಾಟೀಲ ರಾಜೀನಾಮೆಗೆ ಆಗ್ರಹಿಸಿ ಬಬಲೇಶ್ವರದಿಂದ ಬೆಂಗಳೂರಿಗೆ ಪಾದಯಾತ್ರೆ: ವಿಜುಗೌಡ

04:33 PM Aug 31, 2024 | keerthan |

ವಿಜಯಪುರ: ರಾಜ್ಯದ ಕೆಐಎಡಿಬಿ ಹಗರಣ ಹಾಗೂ ವಿಜಯಪುರ ಜಿಲೆಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಸಚಿವ ಎಂ.ಬಿ.ಪಾಟೀಲ ರಾಜೀನಾಮೆಗೆ ಆಗ್ರಹಿಸಿ ಬಬಲೇಶ್ವರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಬಬಲೇಶ್ವರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿಜುಗೌಡ ಪಾಟೀಲ್ ಹೇಳಿದರು.

Advertisement

ಶನಿವಾರ ಬಬಲೇಶ್ವರ ಪಟ್ಟಣದಲ್ಲಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕೇಳಿ ಬಂದಿರುವ ಕೆಐಎಡಿಬಿ ಹಗರಣದ ತನಿಖೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ವಿದೇಶದ ಯಾವ ಯಾವ ದೇಶದಲ್ಲಿ ಏನೇನು ಇಟ್ಟಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುಟುಕಿದರು.

ವಿಜಯಪುರ ಜಿಲ್ಲೆಯ ಧೀಮಂತ ನಾಯಕ, ಇತರರಿಂದ ಒಂದು ರೂಪಾಯಿ ಮುಟ್ಟದವರು, ಒಂದು ರೂಪಾಯಿ ಅವ್ಯವಹಾರ ಮಾಡದ ಸತ್ಯಹರಿಶ್ಚಂದ್ರ, ಕಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಹರಿಹಾಯ್ದರು.

ರೈತರಿಗೆ ನೀರು ಬೇಕು, ನೀರಾವರಿ ಮಾಡಿದ್ದಾರೆ, ನೀರು ಕೊಟ್ಟಿದ್ದಾರೆ ಎಂದೆಲ್ಲ ನೀವು ಅವರನ್ನು ಆಯ್ಕೆ ಮಾಡಿಕೊಂಡು ಬರುತ್ತಿದ್ದೀರಿ. ಸತತವಾಗಿ ನಾಲ್ಕು ಬಾರಿ ಸೋತರೂ ನಾನು ಸುಮ್ಮನಿದ್ದೆ. ಆದರೆ ನೀರಾವರಿ ಮಾಡಿದ್ದರಿಂದ ಯಾರ ಮನೆಗಳು ಅಭಿವೃದ್ಧಿ ಆಗಿವೆ ಎಂಬುದನ್ನು ಕ್ಷೇತ್ರದ ಜನರು ಅರಿಬೇಕು ಎಂದರು.

ತಮ್ಮ ವಿರುದ್ಧ ದೂರು ಪಡೆದಿರುವ ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರು, ತಮ್ಮ ವಿರುದ್ಧ ಹೇಳಿಕೆ ನೀಡಿದರೆಂಬ ಕಾರಣಕ್ಕೆ ದಲಿತ ನಾಯಕರಾಗಿರುವ ಮೇಲ್ಮನೆ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಹಗುರ ಪದ ಬಳಸಿ ನಿಂದಿಸಲಾಗುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಅವರು ನಿಧರಾದಾಗ ಅಂತ್ಯ ಸಂಸ್ಕಾರಕ್ಕೆ ಸ್ಥಳ ನೀಡದ ಕಾಂಗ್ರೆಸ್ ಪಕ್ಷದವರ ದಲಿತ ವಿರೋಧಿ ಮನಸ್ಥಿತಿ ಎಂಬುದನ್ನು ಜನರು ಅರಿಯಬೇಕು. ನರೆಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಿರದಿದ್ದರೆ ದೇಶದ ಪರಿಸ್ಥಿತಿ ಗಂಭೀರವಾಗುತ್ತಿತ್ತು ಎಂದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಏನೇನು ಮಾತನಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಆಸ್ತಿ, ಅಂತಸ್ತು, ಅಧಿಕಾರ ಇದೇ ಎಂಬ ಕಾರಣಕ್ಕೆ ಅಧಿಕಾರದ ಮದದಲ್ಲಿ ಏನೇನೋ ಮಾತನಾಡಿದರೆ ಸರಿಯಲ್ಲ, ಕಾಲಚಕ್ರ ತಿರುಗುತ್ತಿದೆ ಎಂದು ಕುಟುಕಿದರು.

ಕೆಐಎಡಿಬಿ ಮಂಡಳಿಯಲ್ಲಿ ಒಂದೇ ವಿಳಾಸದಲ್ಲಿ ಹಲವರಿಗೆ ಹಾಗೂ ಅಡ್ರೆಸ್, ಫೋನ್ ನಂಬರ್ ಇಲ್ಲದವರಿಗೆ ನೂರಾರು ಕೋಟಿ ರೂ. ಆಸ್ತಿ ಹಂಚಿಕೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ರಾಜ್ಯಪಾಲರಿಗೆ ದೂರು ನೀಡಿದರೆ ದಲಿತನಾಯಕ ರಾಜ್ಯಪಾಲರ ವಿರುದ್ಧ, ಹೇಳಿಕೆ ನೀಡಿದ ಮೇಲ್ಮನೆ ವಿಪಕ್ಷ ನಾಯಕ ದಲಿತ ಎಂದು ಗೊತ್ತಿದ್ದರೂ ಹಗುರ ಪದಗಳಿಂದ ಟೀಕಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಬಲೇಶ್ವರ ಕ್ಷೇತ್ರದಲ್ಲೂ ಸತ್ತವರ ಹೆಸರಿನಲ್ಲಿ ಆಸ್ತಿ ಕಬಳಿಸಿದ್ದು, ಇದೀಗ ವಿಜಯಪುರ ನಗರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಭೂ ಹಗರಣದ ಸುಮಾರು 35 ಪ್ರಕರಣ ದಾಖಲಾಗಿವೆ. ಭೂಮಿ, ಹಣ ಕಳೆದುಕೊಂಡವರು ಬೊಂಬಡ ಹೊಡೆದು ಹೊಯ್ಕೊಂತ ಹೋಗಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಇನ್ನೂ ಬಹಳ ಹಗರಣಗಳಿದ್ದು, ಪಿಚ್ಚರ್ ಬಾಕಿ ಹೈ ಎಂದಿದ್ದೆ, ಇವರ ಬಹಳ ಹಗರಣಗಿಳಿದ್ದು, ಇದೀಗ ಇವರ ಒಂದೊಂದೇ ಹಗರಣ ಬಿಚ್ಚಿಡುತ್ತೇನೆ. ಇವರ ಹಗರಣ ಬಹಳಷ್ಟಿದ್ದು, ಮುಂದೆ ಒಂದೊಂದೇ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು.

ಬಬಲೇಶ್ವರದಲ್ಲಿ ಇಂದು ನಡೆಯುತ್ತಿರುವ ಹೋರಾಟಕ್ಕೆ ವಾಹನ ವ್ಯವಸ್ಥೆ ಮಾಡಿದ್ದರೂ ವಾಹನಗಳ ಮಾಲೀಕರಿಗೆ ಫೋನ್ ಮಾಡಿ ವಾಹನ ಬಿಡದಂತೆ ಬೆದರಿಕೆ ಹಾಕಿದ್ದಾರೆ. ಆದಿಲ್ ಶಾಹಿ ಕೂಡ ಮಾಡದಂತೆ ವಿಜಯಪುರದಲ್ಲಿ ಇದೀಗ ಆಡಳಿತ ನಡೆಸಿದ್ದಾರೆ ಎಂದು ಹರಿಹಾಯ್ದರು.

ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ತಾವೇನು ಎಂಬುದನ್ನು ಅರಿಯಬೇಕು. ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನೇ ನಿಮ್ಮ ಕ್ಷೇತ್ರದ ಶಾಸಕನಾಗಿ ತಪ್ಪು ಮಾಡಿದ್ದರೆ ಸುಮ್ಮನೆ ಇರುತ್ತಿದ್ದಿರೇನು ಎಂದು ಜನರನ್ನು ಪ್ರಶ್ನಿಸಿದ ವಿಜುಗೌಡ, ತಪ್ಪು ಮಾಡಿದವರನ್ನು ಕಿವಿಗೆ ಹಳ್ಳು ಹಚ್ಚಿ ಕೇಳಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next