Advertisement

ಪಿಬಿಎಸ್‌ ಹಾಡುಗಳಿಂದ ಹೊಸ ಮೈಲಿಗಲ್ಲು

07:05 PM Sep 25, 2019 | Naveen |

ಶಿವಮೊಗ್ಗ: ಡಾ| ಪಿ.ಬಿ.ಶ್ರೀ ನಿವಾಸ್‌ ಅವರ ಹಾಡುಗಳು ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿವೆ ಎಂದು ಶಿವಮೊಗ್ಗ ಎಜುರೈಟ್‌ ತರಬೇತಿ ಅಕಾಡೆಮಿಯ ನಿರ್ದೇಶಕ ಎನ್‌. ದಿವಾಕರ್‌ ರಾವ್‌ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಅರಿವು ಶಿವಮೊಗ್ಗ ಸಾಮಾಜಿಕ ಸೇವಾ ಸಂಸ್ಥೆಯಿಂದ ಡಾ| ಪಿ.ಬಿ.ಶ್ರೀನಿವಾಸ್‌ ಅವರ 89ನೇ ಜನ್ಮದಿನದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ “ಎಂದೂ ಮರೆಯದ ಈ ಹಾಡು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಪಿ.ಬಿ. ಶ್ರೀನಿವಾಸ್‌ ಕಾಲಾನಂತರದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸಾಧನೆ ಮಾಡಿದರು.

ಕಾಲಾನಂತರದಲ್ಲಿ ಪಿ.ಬಿ. ಶ್ರೀನಿವಾಸ್‌ ಅವರ ಹಾಡುಗಳು ಇಲ್ಲ ಎಂದರೆ ಚಿತ್ರಗಳೇ ನೀರಸ ಎನ್ನುವ ವಾತಾವರಣ ಸೃಷ್ಟಿಸಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂನಲ್ಲಿ ಹಾಡಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ 3 ದಶಕಗಳ ಕಾಲ ಸಂಗೀತ ಸಾಮ್ರಾಟರಾಗಿ ಮೆರೆದರು ಎಂದರು.

ಪಿ.ಬಿ. ಶ್ರೀನಿವಾಸ್‌ ಅವರು ಡಾ| ರಾಜ್‌ಕುಮಾರ್‌ ಅವರಿಗಾಗಿಯೇ ಸುಮಾರು 300 ಹಾಡುಗಳನ್ನು ಹಾಡಿದ್ದಾರೆ. ಇವರಿಬ್ಬರ ಧ್ವನಿ ಹೊಂದಾಣಿಕೆಯಾಗುತ್ತಿತ್ತು. ಈ ಕಾರಣಕ್ಕಾಗಿಯೇ ಒಂದೆಡೆ ರಾಜ್‌ಕುಮಾರ್‌ ಅವರೇ ನಾನು ಕೇವಲ ಶರೀರ ಸ್ವರೂಪ, ಪಿ.ಬಿ.ಶ್ರೀ ಅವರೇ ನಿಜವಾದ ಶರೀರ ಎಂದಿದ್ದರು. ಪಿ.ಬಿ.ಶ್ರೀ ಅವರು 1952ರ ಮಿಸ್ಟರ್‌ ಸಂಪತ್‌ ಎನ್ನುವ ಹಿಂದಿ ಸಿನಿಮಾದಿಂದ ಹಿಡಿದು 2010ರ ತಮಿಳಿನಿ ಹೈರತ್ಕಲ್‌ ವರ್ಣನ್‌ ಸಿನಿಮಾದವರೆಗೆ ಸುಮಾರು 3 ಸಾವಿರ ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳಿದರು.

Advertisement

1974ರಲ್ಲಿ ಪಿ.ಬಿ.ಶ್ರೀನಿವಾಸ್‌ ಜೀವನದಲ್ಲಿ ಒಂದು ಸಣ್ಣ ತಿರುವು ಎದುರಾಗುತ್ತದೆ. ಅಂದು ಸಂಪತ್ತಿಗೆ ಸವಾಲ್‌ ಚಿತ್ರದ ಹಾಡಿಗಾಗಿ ಪಿ.ಬಿ.ಶ್ರೀ ಅವರನ್ನು ಹುಡುಕುತ್ತಿದ್ದಾಗ ಅಂದು ಅವರು ಸಿಗುವುದಿಲ್ಲ. ಅನಿವಾರ್ಯವಾಗಿ ನಿರ್ದೇಶಕರು ರಾಜ್‌ಕುಮಾರ್‌ ಅವರಿಂದಲೇ “ಯಾರೇ ಕೂಗಾಡಲಿ’ ಹಾಡನ್ನು ಹಾಡಿಸುತ್ತಾರೆ. ನಂತರ ಜನರು ಡಾ| ರಾಜ್‌ ಕುಮಾರ್‌ ಅವರ ಪಾತ್ರಗಳಿಗೆ ಅವರೇ ಹಾಡಬೇಕು ಎಂದು ಪಟ್ಟು ಹಿಡಿದಿದ್ದರು.

ಈ ಸಂದರ್ಭದಲ್ಲಿ ಪಿ.ಬಿ. ಶ್ರೀನಿವಾಸ್‌ ನಿರಾಶೆಗೊಳಗಾಗಿದ್ದರು. ಅನಂತರ ಕನ್ನಡ ಚಿತ್ರರಂಗದ ಮಟ್ಟಿಗೆ ನೇಪಥ್ಯಕ್ಕೆ ಸರಿಯುತ್ತ ಸಾಗಿದರು ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಚ್‌. ಖಂಡೋಬರಾವ್‌, ಅಪೇಕ್ಷಾ ಮಂಜುನಾಥ್‌, ಪತಂಜಲಿ ಜೆ. ನಾಗರಾಜ್‌, ವಿ. ಮೂರ್ತಿ, ಎಸ್‌.ಜಿ. ತುಕ್ಕೋಜಿರಾವ್‌ ಅವರನ್ನು ಗೌರವಿಸಲಾಯಿತು. ಅರಿವು ಸಂಸ್ಥೆಯ ಅಧ್ಯಕ್ಷ ಎಸ್‌.ಎಲ್‌. ಲಕ್ಷ್ಮೀಕಾಂತ್‌ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next