ಶಿವಮೊಗ್ಗ: ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಅನಿಯಮಿತ ಅಸಾಧಾರಣ ಕೊಡುಗೆಗಳನ್ನು ನೀಡುವಲ್ಲಿ ಎಂಜಿನಿಯರ್‌ಗಳು ಕಾರ್ಯತತ್ಪರರಾಗಿದ್ದು, ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸುವಲ್ಲಿ ಕಾರ್ಯೋನ್ಮುಖರಾಗುವಂತೆ ಶಿವಮೊಗ್ಗದ ಎಂಜಿನಿಯರ್ ಮತ್ತು ಪರಿಶೋಧಕ ಅಜಯ್‌ಕುಮಾರ್ ಶಮ ತಿಳಿಸಿದರು.
ನಗರದ ಪಿ.ಇ.ಎಸ್.ಐ.ಟಿ.ಎಂ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಎಂಜಿನಿಯರ್ ದಿನಾಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಬದ್ಧತೆಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿ ಹೇಳಿದ ಅವರು, ವಿದ್ಯಾರ್ಥಿಗಳು ಕಾರ್ಯತತ್ಪರತೆ, ಕಂಡ ಕನಸುಗಳ ಸಾಕಾರಗೊಳಿಸುವಿಕೆ ಹಾಗೂ ದೃಢ ನಿರ್ಧಾರದೊಂದಿಗೆ ಜೀವನದಲ್ಲಿ ಗುರಿಮುಟ್ಟುವಿಕೆಯನ್ನು ಪ್ರಾಯೋಗಿಕವಾಗಿ ಸಾಧಿಸುವಲ್ಲಿ ಹೆಚ್ಚಿನ ಗಮನ ನೀಡಬೇಕೆಂದರು. ಎಂಜಿನಿಯರ್‌ಗಳ ಅಪ್ರತಿಮ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು 1968ರಿಂದ ಪ್ರತಿ ವರ್ಷವು ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಂಕವನ್ನು ಎಂಜಿನಿಯರ್ ದಿನ ಎಂದು ಆಚರಿಸುತ್ತಿದೆ ಎಂದರು.
ಪಿ.ಇ.ಎಸ್. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ| ನಾಗರಾಜ ಮಾತನಾಡಿ, ವಿಶ್ವೇಶ್ವರಯ್ಯನವರ ಅಪರೂಪದ ಗುಣಗಳನ್ನು ಉಲ್ಲೇಖೀಸಿ ಪ್ರಸ್ತುತ ಎಂಜಿನಿಯರ್‌ಗಳು ಆ ಗುಣಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಪ್ರಾಯೋಗಿಕ ಮಟ್ಟದಲ್ಲಿ ಅಳವಡಿಸಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹಲವು ಘಟನೆಗಳನ್ನು ನೆನಪಿಸುವುದರ ಮೂಲಕ ತಿಳಿ ಹೇಳಿದರು.
ಪಿ.ಇ.ಎಸ್. ಐ.ಟಿ.ಎಂ.ನ ಆವರಣದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಕಾಲೇಜಿನ ಹಲವು ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ಬಸವರಾಜಪ್ಪ ವೈ.ಎಚ್. ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕ ಪ್ರೊ| ಗೌತಮ್ ಜೆ.ಕೆ. ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಅಮೋಘ್ ತೆರದಾಳ್ ಕಾರ್ಯಕ್ರಮ ನಿರೂಪಿಸಿದರು.