Advertisement

ಒಡೆಯರ್‌ರದ್ದು ದೂರದೃಷ್ಟಿಯ ಆಡಳಿತ: ವೈಶಾಲಿ

03:37 PM Aug 25, 2019 | Naveen |

ಶಿವಮೊಗ್ಗ: ಅವಕಾಶ ವಂಚಿತರನ್ನು ಕೈಹಿಡಿದು ಮೇಲೆತ್ತುವ ಸಲುವಾಗಿ ಮೀಸಲಾತಿ ಜಾರಿಗೆ ಬಂತು. ಶಿಕ್ಷಣ ಮೀಸಲಾತಿಯಿಲ್ಲದೇ ಉಳಿದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದು ಎನ್ನುವ ದೂರದೃಷ್ಟಿಯಿಂದ ಕೆ. ಎಚ್. ರಾಮಯ್ಯ ಅವರು ಸೇರಿದಂತೆ ಹಲವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರ ಗಮನಕ್ಕೆ ತಂದು ಮೀಸಲಾತಿಯ ಸೌಲಭ್ಯ ನೀಡುವಲ್ಲಿ ಯಶಸ್ವಿಯಾಗಿದ್ದರಿಂದ ಇವತ್ತು ಅವರನ್ನು ಸ್ಮರಣೆ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಪಂ ನೂತನ ಸಿಇಒ ಎಂ.ಎಲ್. ವೈಶಾಲಿ ತಿಳಿಸಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಕಾರದಲ್ಲಿ ಶುಕ್ರವಾರ ನಗರದ ಡಿ. ದೇವರಾಜ ಅರಸು ಸಭಾಂಗಣದಲ್ಲಿ ‘ಮೀಸಲಾತಿ : ಒಡೆಯರು ಬೆಳಗಿದ ಹಣತೆ, ನೂರರ ನೆನಪು-ಸ್ಮರಣೆ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಾತು ಮಂಥನದಲ್ಲಿ ಭಾಗವಹಿಸಿದ್ದ ಸಾಹಿತಿ- ಚಿಂತಕ- ಪ್ರಾಧ್ಯಾಪಕ ಡಾ|ಸಿರಾಜ್‌ ಅಹಮದ್‌ ಅವರು ಕರ್ನಾಟಕದ ಶೈಕ್ಷಣಿಕ ಮಟ್ಟದ ಜ್ಞಾನವನ್ನು ಭಾರತದ ಉಳಿದ ಯಾವುದೇ ರಾಜ್ಯದ ಶೈಕ್ಷಣಿಕ ಗುಣಮಟ್ಟಕ್ಕೆ ಹೋಲಿಸಿದರೆ ಕರ್ನಾಟಕದ ಶೈಕ್ಷಣಿಕ ಮಟ್ಟ ಮೇಲಿದೆ. ಅದಕ್ಕೆ ಭದ್ರ್ರವಾದ ಅಡಿಪಾಯ ಹಾಕಿದವರು ಮೈಸೂರು ಅರಸು ಮನೆತನದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಎಂಬುದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕೆಂದು ವಿವರಿಸಿದರು.

ಮೀಸಲಾತಿ ಎಂದಾಕ್ಷಣ ಚರ್ಚೆಗಳು ಕಾವೇರುತ್ತವೆ. ಪರ- ವಿರೋಧದ ಮಾತುಗಳು ಕೇಳಿಬರುತ್ತವೆ. ಆ ಎಲ್ಲಾ ಸಂದರ್ಭಗಳನ್ನು ಪ್ರಜಾಸತಾತ್ಮಕವಾಗಿ ಕಾರ್ಯರೂಪಕ್ಕೆ ತಂದು ಪ್ರಜೆಗಳ ಹಿತಚಿಂತನೆ ಮಾಡಿದ ಕೆಲವೇ ಕಲವರಲ್ಲಿ ಒಡೆಯರ್‌ ಒಬ್ಬರು ಎಂದು ಸ್ಮರಿಸಿದರು. ಅವರು ತಂದ ಸುಧಾರಣೆಯಿಂದ ಎಲ್ಲಾ ಅವಕಾಶಗಳು 3.6 ರಷ್ಟಿದ್ದ ಜನರಿಗೆ ಮೀಸಲಾಗಿದ್ದನ್ನು ಹೊರತುಪಡಿಸಿ ಉಳಿದ ಎಲ್ಲಾ ಜನಸಮೂಹವನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಯಶಸ್ವಿಯಾಯಿತು ಎಂದರು.

1917 ರ ಫೆಬ್ರವರಿಯಲ್ಲಿ ಮಹಾರಾಜರಿಗೆ ಮನವಿ ಮಾಡಿ, ಹಿಂದುಳಿದ ಎಲ್ಲಾ ಸಮುದಾಯಕ್ಕೂ ಶೈಕ್ಷಣಿಕ, ಉದ್ಯೋಗ ಸೇರಿದಂತೆ ಎಲ್ಲಾ ವಿಚಾರದಲ್ಲೂ ಮೀಸಲು ಬೇಕು ಎನ್ನುವ ಮನವಿಪತ್ರ ನೀಡಲಾಗುತ್ತದೆ. ಅದರ ಹಿಂದೆ ಕೆ. ಎಚ್. ರಾಮಯ್ಯ , ಎಚ್. ಚನ್ನಯ್ಯ ಸೇರಿದಂತೆ ಕೆಲವರ ಪ್ರಯತ್ನವಿತ್ತು. ಮನವಿ ಸ್ವೀಕರಿಸಿದ ಮಾಹಾರಾಜರು ಮಿಲ್ಲರ್‌ ಸಮಿತಿಯನ್ನು ನೇಮಿಸುತ್ತಾರೆ. ಅವರು ಅಧ್ಯಯನ ಮಾಡಿ ವರದಿ ನೀಡುತ್ತಾರೆ. ವರದಿ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತದೆ. ಆಗ ಪ್ರಜಾಪ್ರತಿನಿಧಿ ಸಭೆಗೆ ವರದಿಯ ಅಭಿಪ್ರಾಯ ಕೇಳುತ್ತಾರೆ. ನಂತರ 1918ರ ಆ. 23 ರಂದು ಮೀಸಲಾತಿಯ ಹಕ್ಕ‌ನು ಜಾರಿಗೆ ತಂದು ಅನೇಕರಿಗೆ ದಾರಿದೀಪವಾದರು ಎಂದು ಡಾ| ಸಿರಾಜ್‌ ಅಹಮದ್‌ ವಿವರಿಸಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಶಂಕರ್‌ ಗುರು ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್‌ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಯುವರಾಜ್‌, ಕುಮಾರಿ ಕೆ. ಜಿ. ಅರ್ಪಿತಾ ಅವರು ಹಾಡುಗಳನ್ನು ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಎಂ. ಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next