Advertisement

ಋಣಮುಕ್ತ ಕಾಯ್ದೆಗೆ ಭರ್ಜರಿ ರೆಸ್ಪಾನ್ಸ್‌!

03:08 PM Oct 20, 2019 | |

„ಶರತ್‌ ಭದ್ರಾವತಿ
ಶಿವಮೊಗ್ಗ:
ಖಾಸಗಿ ಸಾಲ ಪಡೆದು ಸಂಕಷ್ಟದಲ್ಲಿರುವ ಬಡವರ ಅನುಕೂಲಕ್ಕಾಗಿ ಜಾರಿಗೆ ತಂದ ಋಣಮುಕ್ತ ಕಾಯ್ದೆಗೆ ಜಿಲ್ಲೆಯಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. 12 ಸಾವಿರಕ್ಕೂ ಹೆಚ್ಚು ಅರ್ಜಿಗಳ ಸಲ್ಲಿಕೆಯಾಗಿದ್ದು ರಾಜ್ಯದಲ್ಲೇ ಇದು ಅತಿ ಹೆಚ್ಚು ಎನ್ನಲಾಗಿದೆ. ಆದರೆ ಇವರೆಲ್ಲರಿಗೂ ನ್ಯಾಯ ಸಿಗುವ ಬಗ್ಗೆ ಅಧಿಕಾರಿಗಳಲ್ಲೇ ಅನುಮಾನವಿದೆ.

Advertisement

ಸಮ್ಮಿಶ್ರ ಸರಕಾರದ ಕೊನೆ ದಿನಗಳಲ್ಲಿ ಋಣಮುಕ್ತ ಕಾಯ್ದೆ ಜಾರಿಗೆ ತರಲಾಗಿತ್ತು. ಚಿನ್ನ ಅಡವಿಟ್ಟು , ಚೆಕ್‌, ಆಸ್ತಿ ಪತ್ರ ಕೊಟ್ಟು ಖಾಸಗಿಯಾಗಿ ಸಾಲ ಪಡೆದವರು ನಮ್ಮ ಸಾಲ ಮನ್ನಾ ಆಗುತ್ತದೆ ಎಂದು ಸಂತಸಗೊಂಡರು. ಅರ್ಜಿ ಸಲ್ಲಿಕೆಗೆ 90 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅ.23ಕ್ಕೆ ಈ ಅವಧಿ ಮುಗಿಯಲಿದ್ದು ಶಿವಮೊಗ್ಗ ಜಿಲ್ಲೆಯಲ್ಲೇ ಸುಮಾರು 12 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ಜನರು ಬೆಳಗ್ಗೆಯಿಂದ ಸಂಜೆವರೆಗೂ ಕ್ಯೂನಲ್ಲಿ ನಿಂತು ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಎಲ್ಲರೂ ಶಿವಮೊಗ್ಗ ಎಸಿ ಕಚೇರಿಯಲ್ಲೇ ಅರ್ಜಿ ಸಲ್ಲಿಸುತ್ತಿದ್ದರು. ನಂತರ ತಾಲೂಕು ಕೇಂದ್ರಗಳಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಕಾರಣ ಜನರು ನಿರಾಳಗೊಂಡರು. ಅರ್ಜಿ ಸಲ್ಲಿಕೆಗೆ ಇನ್ನೆರಡು ದಿನ ಅವಕಾಶವಿದ್ದು ಇನ್ನಷ್ಟು ಅರ್ಜಿಗಳು ಸೇರ್ಪಡೆಗೊಳ್ಳಲಿವೆ.

ಭದ್ರಾವತಿಯಲ್ಲಿ ಹೆಚ್ಚು: ಅರ್ಜಿ ಸಲ್ಲಿಸಿದವರಲ್ಲಿ ಭದ್ರಾವತಿ ತಾಲೂಕಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭದ್ರಾವತಿಯಲ್ಲಿ ಬಡ್ಡಿ ವ್ಯವಹಾರ ಜೋರಾಗಿತ್ತು ಎನ್ನುವುದಕ್ಕೆ ಇದು ಪುಷ್ಠಿ ನೀಡಿದೆ. ಭದ್ರಾವತಿಯಲ್ಲಿ 5714, ಶಿವಮೊಗ್ಗ 5598, ತೀರ್ಥಹಳ್ಳಿಯಲ್ಲಿ 150, ಸಾಗರ ವಿಭಾಗದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಗರ ಪ್ರದೇಶದಲ್ಲಿ ಖಾಸಗಿ ಫೈನಾನ್ಸ್‌, ಗಿರವಿ ಅಂಗಡಿ, ಪಾನ್‌ ಬ್ರೋಕರ್ಗಳ ಸಂಖ್ಯೆ ಹೆಚ್ಚಿರುವುದರಿಂದ ಅರ್ಜಿ ಸಲ್ಲಿಕೆಯ ಪ್ರಮಾಣ ಹೆಚ್ಚಿದೆ.

ಅರ್ಜಿ ಸಲ್ಲಿಕೆಗೆ ದುಂಬಾಲು: ಕಾನೂನುಬದ್ಧವಾಗಿ ಲೈಸೆನ್ಸ್‌ ಪಡೆದು ವ್ಯವಹಾರ ನಡೆಸುತ್ತಿರುವ ಪಾನ್‌ ಬ್ರೋಕರ್, ಲೇವಾದೇವಿದಾರರು, ಫೈನಾನ್ಸ್‌ ದಾರರು ಈ ಕಾಯ್ದೆ ವ್ಯಾಪ್ತಿಗೆ ಬರುವುದು ಅನುಮಾನ. ಅರ್ಜಿ ಸಲ್ಲಿಕೆದಾರರು ಇಂತಹ ಕಾನೂನುಬದ್ಧ ಲೈಸೆನ್ಸ್‌ದಾರರಿಂದಲೇ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರೂ ಸಾಲ ಮನ್ನಾ ಆಗುವ ಖಾತ್ರಿ ಇಲ್ಲದಿದ್ದರೂ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸುವವರು ನಿಮಗೆ ಬರುವುದಿಲ್ಲ ಎಂದರೂ ಕೇಳದೆ, ‘ಅರ್ಜಿ ತೆಗೆದುಕೊಳ್ಳುವುದಕ್ಕೆ ನಿಮಗೇನು ಕಷ್ಟ’ ಎಂದು ಒತ್ತಾಯಿಸಿ ಅರ್ಜಿ ಹಾಕಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next