ಸಾಗರ : ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಸೋಮವಾರ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಬಂದರೆ ನಿಮಗೆ ಹಿಂದೂ ಕಾರ್ಯಕರ್ತರು, ಹಿಂದೂ ಸಂಘಟನೆ ನೆನಪಾಗುತ್ತಿದೆ. ಉಳಿದ ಸಂದರ್ಭದಲ್ಲಿ ನಾವು ನಿಮಗೆ ನೆನಪಾಗದೆ ಇರುವುದು ದುರದೃಷ್ಟಕರ ಸಂಗತಿ. ನೀವು ಯಾವ ವಿಷಯವನ್ನು ಇರಿಸಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ ಎನ್ನುವುದನ್ನು ಬಹುಶಃ ಮರೆತಂತೆ ಕಾಣುತ್ತಿದೆ. ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆಗೆ ಕಾರಣವಾಗಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಹರ್ಷನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ನಡೆದ ಈ ಘಟನೆ ಅಲ್ಲಿಗೆ ಮಾತ್ರ ಸೀಮಿತವಾಗುವುದಿಲ್ಲ. ಸಾಗರದಲ್ಲೂ ಹಿಂದೂ ಕಾರ್ಯಕರ್ತರ ಮೇಲೆ ಕೆಲವರ ಕಣ್ಣಿದೆ. ಹಿಂದೂಗಳಿಗೆ ಸಂವಿಧಾನ, ದೇಶದ ಕಾನೂನಿನ ಮೇಲೆ ಗೌರವವಿದೆ. ಆದರೆ ನಮ್ಮ ಎದುರಾಳಿಗಳು ನ್ಯಾಯಾಲಯದಲ್ಲಿ ಮಾತ್ರ ಕಾನೂನು ಬಗ್ಗೆ ಮಾತನಾಡಿ ಹೊರಗೆ ಇಂತಹ ದುಷ್ಕೃತ್ಯ ಎಸಗುತ್ತಿದ್ದಾರೆ. ದೇಶದ ಸಂವಿಧಾನಕ್ಕೆ ಕೆಲವರು ತಲೆಬಾಗುತ್ತಿಲ್ಲ. ಸಂವಿಧಾನಕ್ಕೆ ಬೆಲೆ ಕೊಡದೆ ಇದ್ದವರ ಬಗ್ಗೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ : ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿಗೆ ಒತ್ತಾಯಿಸಿ ಮಾಜಿ ಶಾಸಕ ಮಧು ಪ್ರತಿಭಟನೆ
ಇಂತಹ ಕೃತ್ಯ ನಡೆಸಿದವರು ಆರು ತಿಂಗಳು ಜೈಲಿನಲ್ಲಿದ್ದು ನಂತರ ಜಾಮಿನು ಪಡೆದು ಹೊರಗೆ ಬಂದು ರಾಜರೋಷವಾಗಿ ತಿರುಗುತ್ತಿದ್ದಾರೆ. ಯಾವುದೋ ಒಂದು ಘಟನೆಯನ್ನು ಇರಿಸಿಕೊಂಡು ಹರ್ಷ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಸಂಘಟನೆಗೆ ಏನೂ ಕೊಡುಗೆ ನೀಡಿಲ್ಲ. ಆದರೂ ನಿಮಗೆ ಮುಖ್ಯಮಂತ್ರಿಯಂತಹ ಸ್ಥಾನ ದೊರೆತಿದೆ. ಈಶ್ವರಪ್ಪ ಅವರ ಕಾಳಜಿ ತೋರುಗಾಣಿಕೆಯದ್ದಾಗಬಾರದು. ಜೊತೆಗೆ ಗೃಹ ಸಚಿವರು ಇದೇ ಜಿಲ್ಲೆಯವರಾಗಿದ್ದಾರೆ. ಹರ್ಷನಂತಹ ಯುವಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈ ಘಟನೆ ಹಿಂದಿರುವ ಸಂಘಟನೆಗಳನ್ನು ನಿಷೇದ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮಾತೃಮಂಡಳಿ ತಾಲ್ಲೂಕು ಪ್ರಮುಖ್ ಪ್ರತಿಮಾ ಸತೀಶ್ ಜೋಗಿ, ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ, ಸಹ ಕಾರ್ಯದರ್ಶಿ ರಾಘವೇಂದ್ರ ಕಾಮತ್, ತಾಲೂಕು ಕಾರ್ಯದರ್ಶಿ ನಂದೀಶ್, ಭಜರಂಗದಳ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ, ಪ್ರಮುಖರಾದ ರವಿಕುಮಾರ್, ಕೋಮಲ್ ರಾಘವೇಂದ್ರ, ಬಾಲಕೃಷ್ಣ ಗುಳೇದ್, ಕಿರಣ್, ನಾಗರಾಜ್, ಅಶ್ವಿನಿ ಕಾಮತ್, ಶ್ರೀಧರ್ ಸಾಗರ್, ರಾಮು ಚವ್ಹಾನ್, ಆದಿತ್ಯ, ಶೇಷಗಿರಿ ಇನ್ನಿತರರು ಹಾಜರಿದ್ದರು.