Advertisement

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

12:03 AM Oct 04, 2023 | Team Udayavani |

ಉಡುಪಿ: ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯಕ್ಕೆ ಯಾರೂ ಕೈ ಹಾಕಬಾರದು. ಪೊಲೀಸರ ಮೇಲೆ ಕಲ್ಲೆಸೆಯುವ ಮನಸ್ಥಿತಿಯಿಂದ ಕಾನೂನಿನ ಮೇಲೆ ಭಯ, ಗೌರವ ಇಲ್ಲದಂತಾಗುತ್ತಿದೆ. ಪೊಲೀಸರ ಮೇಲೆ ಹಲ್ಲೆಯಾಗುತ್ತದೆ ಎಂದರೇ ಸರಕಾರ ಏನು ಮಾಡುತ್ತಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶ್ನಿಸಿದ್ದಾರೆ.

Advertisement

ಶಿವಮೊಗ್ಗ ಗಲಭೆ ವಿಚಾರವಾಗಿ ಉಡುಪಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಅಶಾಂತಿಗೆ ಕಾರಣರಾಗುವರಿಗೆ ಶಿಕ್ಷೆಯಾಗಬೇಕು. ಒಂದು ಬಾರಿ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ಕೊನೆಯಿಲ್ಲ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಿದಲ್ಲಿ ಇಂಥಹ ಪರಿಸ್ಥಿತಿ ಮತ್ತೂಮ್ಮೆ ಮರುಕಳಿಸದು.

ತಲ್ವಾರ್‌ ಹಿಡಿದು ವಿಕೃತಿ
ಶಿವಮೊಗ್ಗದ ಘಟನೆ ಅತ್ಯಂತ ದುರದೃಷ್ಟಕರ. ತಲ್ವಾರ್‌ ಹಿಡಿದು ವಿಕೃತ ನೃತ್ಯ ಮಾಡಿ ಹಿಂದೂಗಳನ್ನು ಪ್ರಚೋದಿಸುತ್ತಿದ್ದರು. ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ತಪ್ಪಿತಸ್ಥರು ಯಾರು ಎಂಬುದು ಗಮನಕ್ಕೆ ಬಂದಿದೆ. ಪ್ರಕರಣ ಹತೋಟಿಗೆ ತರಲು ಪೊಲೀಸರು ಸಮರ್ಥರಾಗಿದ್ದಾರೆ. ಚಿಕ್ಕ ಮಕ್ಕಳು ಕೂಡ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಉಡುಪಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕೋಟ ಆಕ್ರೋಶ
ಈದ್‌ ಮಿಲಾದ್‌ ಮೆರವಣಿಗೆ ವೇಳೆ ಶಿವಮೊಗ್ಗದಲ್ಲಿ ನಡೆದ ಘರ್ಷಣೆಯಲ್ಲಿ ಕೆಲವರು ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಮಾನ, ಪ್ರಾಣಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟಿದೆಯೇ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿಯಲ್ಲಿ ಪ್ರಶ್ನಿಸಿದರು.

ಗಲಭೆ ಮಾಡಿದವರನ್ನು ಅಮಾಯಕರೆಂದು ಹೇಳಿ ರಕ್ಷಿಸಲಾಗುತ್ತಿದೆ. ತಲ್ವಾರ್‌ ಪ್ರದರ್ಶಿಸಿ, ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿಗೂ ಕಲ್ಲು ತೂರಲಾಗಿದೆ. ಇಷ್ಟಾದರೂ ಏನೂ ನಡೆದೇ ಇಲ್ಲ ಎನ್ನುವಂತೆ ರಾಜ್ಯದ ಗೃಹ ಸಚಿವರು ಬಾಲಿಷ ಹೇಳಿಕೆ ನೀಡುತ್ತಿರುವುದು ಖಂಡನೀಯ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಶಿವಮೊಗ್ಗದಲ್ಲಿ ಕಿಡಿಗೇಡಿಗಳಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿ ಅಧ್ಯಯನ ನಡೆಸಲಿದೆ ಎಂದರು.

Advertisement

ರಾಜ್ಯ ಸರಕಾರದ ವೈಫ‌ಲ್ಯ
ಮತಾಂಧ ಶಕ್ತಿಗಳ ಪ್ರಾಯೋಜಿತ ಗಲಭೆ ನಿಯಂತ್ರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಗಲಭೆಕೋರರ ಮೇಲಿನ ಕೇಸು ವಾಪಸು ತೆಗೆದುಕೊಂಡ ಪರಿಣಾಮ ಈ ಘಟನೆ ಸಂಭವಿಸಿದೆ. ಗೃಹ ಸಚಿವರು ಚಿಕ್ಕ ಘಟನೆ ಎನ್ನುವ ಮೂಲಕ ಪೊಲೀಸ್‌ ಇಲಾಖೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಪರೋಕ್ಷ ಆದೇಶ ನೀಡಿದಂತಿದೆ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಆಕ್ರೋಶ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next