Advertisement

ಸಮಾಜ ವಿಜ್ಞಾನದಲ್ಲಿ ಸಂಶೋಧನೆಯಾಗಲಿ

04:18 PM Aug 23, 2019 | Team Udayavani |

ಶಿವಮೊಗ್ಗ: ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಸಮಾಜ ವಿಜ್ಞಾನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ. ಇಲ್ಲವಾದರೆ ಈಗಾಗಲೇ ಬೇಡಿಕೆ ಕಳೆದುಕೊಳ್ಳುತ್ತಿರುವ ಕಲಾ ವಿಷಯಗಳು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಲಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಜೆ. ಎಸ್‌. ಸದಾನಂದ ಎಚ್ಚರಿಸಿದರು.

Advertisement

ಕುವೆಂಪು ವಿವಿಯ ಪ್ರೊ| ಹಿರೇಮs್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರೊ| ಎಸ್‌. ಎ. ಜಾವಿದ್‌ ಅವರು ರಚಿಸಿರುವ ‘ಫಂಡಮೆಂಟಲ್ಸ್ ಆಫ್‌ ಸೈಂಟಿಫಿಕ್‌ ಸೋಷಿಯಲ್ ರಿಸರ್ಚ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂಲಭೂತ ವಿಜ್ಞಾನಗಳ ಅಧ್ಯಯನ ವಿಧಾನಗಳನ್ನು ಸಮಾಜ ವಿಜ್ಞಾನಿಗಳು ಅಳವಡಿಸಿಕೊಂಡರೆ ಸಾಲದು. ಭಾರತದಂತಹ ದೇಶಗಳು ಇಂದಿಗೂ ಎದುರಿಸುತ್ತಿರುವ ಬಡತನ, ನಿರುದ್ಯೋಗ, ಆರ್ಥಿಕ ಹಿನ್ನಡೆಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆಯನ್ನೂ ನೀಡಬೇಕಿದೆ ಎಂದರು.

ಇಂದು ಅತ್ಯಧಿಕ ಯುವಜನತೆಯನ್ನು ಹೊಂದಿರುವ ಭಾರತ ಕೆಲವೇ ವರ್ಷಗಳಲ್ಲಿ ಅತಿ ಹೆಚ್ಚು ವೃದ್ಧರನ್ನು ಹೊಂದುವ ಸಮಸ್ಯೆಗಳನ್ನು ಎದುರಿಸಲಿದೆ. ಅಂತಹ ಸಂಧರ್ಭದಲ್ಲಿ ಉತ್ಪಾದಕತೆಯ ಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡುವುದರ ಬಗ್ಗೆ ಸಮಾಜ ವಿಜ್ಞಾನಗಳ ಸಂಶೋಧನೆಗಳು ಉತ್ತರ ಹುಡುಕಬೇಕಿದೆ. ಇಂತಹ ಮುನ್ನೋಟದ ಲಕ್ಷಣ ತೋರದಿದ್ದರೆ, ಮುಂಬರುವ ದಿನಗಳಲ್ಲಿ ಸಮಾಜ ವಿಜ್ಞಾನ ಅಧ್ಯಯನಗಳಿಗೆ ಅನುದಾನ ಯಾಕೆ ನೀಡಬೇಕೆಂದು ಸಾರ್ವಜನಿಕರು ಪ್ರಶ್ನಿಸಿದರೆ ಆಶ್ಚರ್ಯಪಡಬೇಕಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ| ಬಿ. ಪಿ. ವೀರಭದ್ರಪ್ಪ, ಸಂಶೋಧನಾ ಚಟುವಟಿಕೆಗಳಲ್ಲಿ ವಿವಿಯ ವಿದ್ಯಾರ್ಥಿ ಮತ್ತು ಅಧ್ಯಾಪಕರು ಮುಂದಿದ್ದು, ಬೇಡಿಕೆಗನುಗುಣವಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಿಶೇಷವಾಗಿ ಸಮಾಜ ವಿಜ್ಞಾನಿಗಳ ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.

Advertisement

ವಿವಿಯ ಕುಲಸಚಿವ ಪ್ರೊ| ಭೋಜ್ಯಾನಾಯ್ಕ, ಪ್ರೊ| ಜಾವಿದ್‌, ಪ್ರೊ| ಚಂದ್ರಶೇಖರ್‌, ಪ್ರೊ| ವೆಂಕಟೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next