ಶಿವಮೊಗ್ಗ: ಬೆಂಗಳೂರು ಭೇಟಿ ಕೊಟ್ಟವರಿಗೆ ರಸ್ತೆ ಬದಿ ಕಾಂಪೌಂಡ್‌ಗಳಲ್ಲಿ ಆಕರ್ಷಕ ಚಿತ್ರಗಳು ಗಮನ ಸೆಳೆಯದೆ ಇರದು. ಇಂತಹ ಆಕರ್ಷಕ ಚಿತ್ತಾರಗಳು ಇನ್ಮುಂದೆ ಶಿವಮೊಗ್ಗದಲ್ಲೂ ಕಾಣಬಹುದು. ಬೇರೆ ಬೇರೆ ಕಾರಣಗಳಿಗೆ ವಿರೂಪಗೊಳ್ಳುತ್ತಿದ್ದ ಇಂತಹ ಕಾಂಪೌಂಡ್‌ಗಳನ್ನು ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕಲರ್‌ಫುಲ್ ಮಾಡಲಾಗುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ನಗರದ ಸೌಂದರ್ಯ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. 52 ಲಕ್ಷ ರೂ. ವೆಚ್ಚದಲ್ಲಿ ಎಂಟು ಇಲಾಖೆಗಳ ಕಾಂಪೌಂಡ್‌ಗಳಿಗೆ ಬಣ್ಣ ತುಂಬುವ ಕೆಲಸ ಅಚ್ಚುಕಟ್ಟಾಗಿ ನಡೆದಿದ್ದು, ಜನರನ್ನು ಆಕರ್ಷಿಸುತ್ತಿವೆ.
ಸಾಗರ ರಸ್ತೆಯ ಪೊಲೀಸ್ ಇಲಾಖೆ, ಎಸ್ಪಿ ಕಚೇರಿ, ಮೆಗ್ಗಾನ್ ಆಸ್ಪತ್ರೆ, ಆರ್‌ಟಿಒ ರಸ್ತೆಯ ಅರಣ್ಯ ಇಲಾಖೆ, ಪತ್ರಿಕಾ ಭವನ, ಬಾಲರಾಜ್ ಅರಸ್ ರಸ್ತೆಯ ಅಂಚೆ ಇಲಾಖೆ, ತಾಪಂ ಕಚೇರಿಯ ಸಾಮರ್ಥ್ಯ ಸೌಧದ ಕಟ್ಟಡಗಳು ಈಗಾಗಲೇ ಸ್ಮಾರ್ಟ್ ಆಗಿವೆ. ವಿವಿಧ ಚಿತ್ರಕಲೆಯಿಂದ ಕಂಗೊಳಿಸುತ್ತಿವೆ. ವಿಶೇಷವೆಂದರೆ ಆಯಾ ಇಲಾಖೆಗಳ ಕಾಂಪೌಂಡ್ ಮೇಲೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವುದನ್ನು ಬಿಂಬಿಸಲಾಗಿದೆ.
ಶಿವಮೊಗ್ಗ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಜೋಗ್‌ಫಾಲ್ಸ್, ಸಕ್ರೆಬೈಲ್‌ನ ಆನೆ ಬಿಡಾರ, ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ, ಶಿವಪ್ಪ ನಾಯಕ ಅರಮನೆ, ತುಂಗಾ ಮತ್ತು ಭದ್ರಾ ಜಲಾಶಯಗಳು ಹೀಗೆ ಹತ್ತು ಹಲವು ಪ್ರವಾಸಿಗಳ ಚಿತ್ರಣ ಗೋಡೆಗಳ ಮೇಲೆ ಮುದ್ರಿತಗೊಳ್ಳುತ್ತಿದೆ. ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಹಾಗೂ ಹೊರ ಜಿಲ್ಲೆ, ರಾಜ್ಯ ಅಥವಾ ವಿದೇಶಿ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಪ್ರವಾಸಿ ತಾಣಗಳ ಪರಿಚಯವನ್ನು ಗೋಡೆಗಳ ಮೇಲೆ ಮಾಡಿಕೊಡಲಾಗುತ್ತಿದೆ. ಸ್ಮಾರ್ಟ್‌ಸಿಟಿಯಿಂದ ಪ್ರಾಯೋಗಿಕ ವಾಗಿ ನಗರದ ಎಂಟು ಸರ್ಕಾರಿ ಕಚೇರಿಗಳ ಕಾಂಪೌಂಡ್‌ಗಳಿಗೆ ಚಿತ್ರ ಬಿಡಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ನಗರದ ಎಲ್ಲ ಕಾಂಪೌಂಡ್‌ಗಳಲ್ಲೂ ಬಣ್ಣ ಬಣ್ಣದ ಚಿತ್ರ ಬಿಡಿಸುವ ಮೂಲಕ ಹೊಸ ಕಲ್ಪನೆ ಹುಟ್ಟು ಹಾಕಲಾಗುವುದು. ಇದರಿಂದ ಹೊರ ಊರು ಅಥವಾ ಪ್ರದೇಶಗಳಿಂದ ಬಂದವರಿಗೆ ಮಲೆನಾಡಿನ ಸಂಪೂರ್ಣ ಚಿತ್ರಣ ಕಣ್ಮುಂದೆ ಬರಲಿದೆ. ಜತೆಗೆ ಏನೆಲ್ಲ ಪ್ರವಾಸಿ ತಾಣಗಳಿವೆ ಎಂಬುದು ಸುಲಭವಾಗಿ ಪ್ರವಾಸಿಗರಿಗೂ ತಿಳಿಯಲಿದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು , ಪಾಲಿಕೆ ಗೋಡೆಗೆ
ಭಿತ್ತಿಚಿತ್ರ: ಜನರಲ್ ಥೀಮ್ ಇಟ್ಟುಕೊಂಡು 46 ಎಕರೆ ಪ್ರದೇಶದ ಫ್ರೀಡಂ ಪಾರ್ಕ್‌ನ 8 ಎಕರೆ ಜಾಗ (ಹಳೆಯ ಜೈಲಿನ ಗೋಡೆ) ಹಾಗೂ ಮಹಾನಗರ ಪಾಲಿಕೆ ಕಾಂಪೌಂಡ್ ಗಳಿಗೆ ಭಿತ್ತಿಚಿತ್ರಗಳ ಮುದ್ರಿಸಲು ಸ್ಮಾಟ್ ìಸಿಟಿ ಚಿಂತನೆ ನಡೆಸಿದೆ. ಈ ಮೂಲಕ ಸಿನಿಮಾ, ರಾಜಕೀಯ, ಧಾರ್ಮಿಕ ಸೇರಿ ಇತರೆ ಪೋಸ್ಟರ್ ಹಚ್ಚುವುದನ್ನು ತಡೆಯಲು ಮುಂದಾಗಿದೆ.