Advertisement

ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಆಗ್ರಹಿಸಿ ಮನವಿ

05:28 PM Mar 13, 2020 | Naveen |

ಶಿವಮೊಗ್ಗ: ಈ ಹಿಂದೆ ತೀರ್ಮಾನಿಸಿದಂತೆ ಶಿವಮೊಗ್ಗ ನಗರದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಗುರುವಾರ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಪಾಲಿಕೆ ಮೇಯರ್‌ ಸುವರ್ಣ ಶಂಕರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಅನಿವಾಸಿ ಭಾರತೀಯರಾದ ಡಾ| ನೀರಜ್‌ ಪಟೇಲ್‌ ಅವರು ಲಂಡನ್‌ನ ಥೇಮ್ಸ್‌ ನದಿ ದಂಡೆ ಮೇಲೆ ಪ್ರತಿಷ್ಠಾಪಿಸಿದ ಬಸವೇಶ್ವರರ ಪುತ್ಥಳಿ ಮಾದರಿಯಲ್ಲಿರುವ ಸುಮಾರು 30 ಲಕ್ಷ ರೂ. ಮೌಲ್ಯದ ಕಂಚಿನ ಬಸವೇಶ್ವರರ ಪುತ್ಥಳಿಯನ್ನು ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಾಪಿಸಲು ಮಹಾನಗರ ಪಾಲಿಕೆಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಪುತ್ಥಳಿಯನ್ನು ನಗರಕ್ಕೆ ತಂದು ಒಂದೂವರೆ ವರ್ಷಗಳೇ ಕಳೆದಿವೆ. ಆದರೆ ಇದುವರೆಗೂ ಪುತ್ಥಳಿ ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿದರು. ಶಿವಮೊಗ್ಗ ನಗರದ ಡಿವಿಎಸ್‌ ಕಾಲೇಜಿನ ಎದುರು ಬಸವೇಶ್ವರ ವೃತ್ತದ ಗಾಂಧಿ ಪಾರ್ಕಿನ ಪ್ರವೇಶ ದ್ವಾರದ ಬಳಿ ಜಗಜ್ಯೋತಿ ಶ್ರೀ ಬಸವೇಶ್ವರದ ಕಂಚಿನ ಪುತ್ಥಳಿ ಸ್ಥಾಪನೆ ಮಾಡಲು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡು ಅದಕ್ಕಾಗಿ 25 ಲಕ್ಷ ರೂ. ಅನುದಾನ ಇಟ್ಟಿದ್ದರೂ, ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ 2019ರ ನ. 4 ರಂದು ಮಹಾಸಭಾದಿಂದ ಪ್ರತಿಭಟನೆ ನಡೆಸಿ ಪಾಲಿಕೆ ಮೇಯರ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಮೇಯರ್‌ ಅದರು 3 ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಪ್ರಗತಿ ಆಗಿಲ್ಲ ಎಂದು ದೂರಿದರು. ಇದು ಪುತ್ಥಳಿಯನ್ನು ಕೊಡುಗೆಯಾಗಿ ಪಡೆದ ಮಹಾನಗರ ಪಾಲಿಕೆಗೂ ಹಾಗೂ ಪುತ್ಥಳಿ ಕೊಡುಗೆ ನೀಡಿದ ನೀರಜ್‌ ಪಟೇಲ್‌ ಅವರಿಗೂ ಅವಮಾನಕರ ವಿಷಯವಾಗಿದೆ ಎಂದರು. ಮಹಾನಗರ ಪಾಲಿಗೆ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಬಸವೇಶ್ವರರ ಪುತ್ತಳಿ ಪ್ರತಿಷ್ಠಾಪನೆ ಕೆಲಸ ಆರಂಭಿಸಬೇಕು. ಇಲ್ಲದಿದ್ದಲ್ಲಿ ಮಹಾನಗರ ಪಾಲಿಕೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ರುದ್ರಮುನಿ ಎಸ್‌. ಸಜ್ಜನ್‌, ಪಾಲಿಕೆ ಪ್ರತಿಪಕ್ಷ ನಾಯಕ ಎಚ್‌.ಸಿ. ಯೋಗೇಶ್‌, ಪ್ರಮುಖರಾದ ಎನ್‌.ಜೆ. ರಾಜಶೇಖರ, ಜಿ. ವಿಜಯ ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next