Advertisement

ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಲು ಆಗ್ರಹ

11:45 AM Jun 19, 2019 | Naveen |

ಶಿವಮೊಗ್ಗ: ರಾಜ್ಯದ ಎಲ್ಲಾ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಶಿಕ್ಷಣ ಸರ್ವರಿಗೂ ಸಿಗಬೇಕಾಗಿರುವ ಅಮೂಲ್ಯ ಸಂಪತ್ತು ಎಂಬ ಕಲ್ಪನೆ ನಮ್ಮದು. ಜಾತಿ, ಮತ, ಬಡವ ಮತ್ತು ಶ್ರೀಮಂತನೆನ್ನದೆ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡುವ ಹೊಣೆಗಾರಿಕೆ ಸರ್ಕಾರಗಳದ್ದು ಎಂದು ಪ್ರತಿಭಟನಾಕಾರರು ತಿಳಿಸಿದರು.

ರಾಜ್ಯ ಸರ್ಕಾರ 2018-19ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿ/ ಎಸ್‌ಟಿ ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಆ ಆದೇಶ ಜಾರಿಗೆ ಬರದಿರುವುದು ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಮೇಲೆ ಅನುಸರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯದ ರೈತಾಪಿ ಕುಟುಂಬಗಳು ಸಂಕಷ್ಟದಲ್ಲಿವೆ. ಇಂದಿನ ಖಾಸಗಿ ಕಾಲೇಜುಗಳ ಡೊನೇಷನ್‌ ಹಾವಳಿಯಿಂದ ಶಿಕ್ಷಣ ಮಾರಾಟದ ವಸ್ತುವಾದಂತಾಗಿದ್ದು, ಹಿಂದುಳಿದ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹಳ್ಳಿಗಳಿಂದ ತಾಲೂಕು- ಪಟ್ಟಣಗಳಿಗೆ ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸುವುದರಿಂದ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಕಳೆದ ವರ್ಷ ಸರ್ಕಾರ ಹಣವಿಲ್ಲ ಎಂಬ ನೆಪವೊಡ್ಡಿ ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್‌ ಬೇಡಿಕೆಯನ್ನು ಈಡೇರಿಸಿಲ್ಲ. ಈ ವರ್ಷವು ವಿದ್ಯಾರ್ಥಿಗಳ ಬೇಡಿಕೆಯನ್ನು ಮೂಲೆಗುಂಪು ಮಾಡಿರುವ ಸರ್ಕಾರ ಕೇವಲ ಅಧಿಕಾರ ಉಳಿಸಿಕೊಳ್ಳುವ ಯೋಜನೆಯಲ್ಲಿದೆ ಎಂದು ದೂರಿದ ಪ್ರತಿಭಟನಾಕಾರರು, ಕೂಡಲೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.

Advertisement

ಪ್ರತಿಭಟನೆಯಲ್ಲಿ ಎಬಿವಿಪಿಯ ನಗರ ಕಾರ್ಯದರ್ಶಿ ಅರುಣ್‌ ಕುಮಾರ್‌, ಪ್ರಮುಖರಾದ ಸಚಿನ್‌, ಮಂಜುನಾಥ್‌, ಸುಭಾಷ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next