ಸಾಗರ: ಸಮಾಜದ ಎಲ್ಲ ವರ್ಗದ ಜನರು ಸಮರ್ಪಕವಾದ ಮೊಬೈಲ್ ನಟ್‌ವರ್ಕ್ ಸೇವೆ ಇಲ್ಲವಾದುದರಿಂದ ಒಂದಲ್ಲ ಒಂದು ರೀತಿ ಸಂಕಟ- ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಟವರ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಯುವ ಹೋರಾಟಗಾರ ಟೈಬು ರಾಘವೇಂದ್ರ ಒತ್ತಾಯಿಸಿದರು. ಶರಾವತಿ ಹಿನ್ನೀರಿನ ಕರೂರು ಬಾರಂಗಿ ಹೋಬಳಿಯ ಜನರು ನಡೆಸುತ್ತಾ ಇರುವ “ನೋ ನೆಟರ್ಕ್ ನೋ ವೋಟಿಂಗ್’ ಅಭಿಯಾನ ಬೆಂಬಲಿಸಿ ಸೋಮವಾರ ದ್ವೀಪದ ಸಂಕಣ್ಣ ಶ್ಯಾನುಭೋಗ್ ಗ್ರಾಪಂ ಎದುರು ಸುತ್ತಲ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿ, ಹೊಸಕೊಪ್ಪದ ಮುಖ್ಯ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯ್ತಿ ವ್ಯಾಪ್ತಿಯ ಶೇ. 70ರಷ್ಟು ಭೂ ಪ್ರದೇಶದಲ್ಲಿ ಯಾವುದೇ ನೆಟ್‌ವರ್ಕ್ ಸಿಗುತ್ತಾ ಇಲ್ಲ.
ಸರ್ಕಾರ ಡಿಜಿಟಲ್ ವ್ಯವಸ್ಥೆಯನ್ನು ಮೆಚ್ಚಿಕೊಂಡಿದೆ. ತಿನ್ನುವ ಪಡಿತರ, ಕಲಿಯುವ ಅಕ್ಷರ, ಆರೋಗ್ಯಕ್ಕೆ ತುರ್ತು ಸೇವೆ, ಉದ್ಯೋಗದ ದಾರಿ ಎಲ್ಲವೂ ನೆಟ್‌ವರ್ಕ್ ಇದ್ದರೆ ಮಾತ್ರ ಸಾಧ್ಯ ಎನ್ನುವ ಸ್ಥಿತಿ ನಿರ್ಮಾಣ ಮಾಡಿ ಗ್ರಾಮೀಣ ಜನರನ್ನು ಅನಾಥ ಮಾಡಿದೆ. ಈ ತಾರತಮ್ಯದ ವಿರುದ್ಧವೇ ಅಭಿಯಾನ ಆರಂಭ ಆಗಿದೆ ಎಂದು ವಿವರಿಸಿದರು.
ಯುವ ಬರಹಗಾರ ಆದರ್ಶ ಕೆ.ಟಿ. ಕಪ್ಪದೂರು ಮಾತನಾಡಿ, ನಮ್ಮ ಆಳುವ ಸರ್ಕಾರಗಳು ನಗರ ಕೇಂದ್ರೀಕೃತವಾಗಿ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಭ್ರಮೆ ತುಂಬುತ್ತಾ ಇವೆ. ಆದರೆ ವಾಸ್ತವದಲ್ಲಿ ಮಲೆನಾಡಿನ ಹಳ್ಳಿಗಳು ಮೂಲ ಸೌಲಭ್ಯ ವಂಚಿತವಾಗಿವೆ. ಈ ಯುಗದಲ್ಲಿ 2ಜಿ ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ಅದನ್ನು ಪಡೆಯಲು ಗುಡ್ಡ ಬೆಟ್ಟ ಏರುವ ಹೊತ್ತು ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಪ್ರಸನ್ನಕುಮಾರ್ ಭಟ್ ಮಾತನಾಡಿ, ನೋ ನೆಟರ್ಕ್ ನೋ ವೋಟಿಂಗ್ ಅಭಿಯಾನ ದ್ವೀಪದಲ್ಲಿ ಆರಂಭವಾಗಿದ್ದು ಮುಳುಗಡೆ ಸಂತ್ರಸ್ತರಿಗೆ ನೆಟ್‌ವರ್ಕ್ ವಿಚಾರದಲ್ಲಿ ನ್ಯಾಯ ಸಿಗಲೇಬೇಕು. ಈ ವಿಚಾರದಲ್ಲಿ ಪಕ್ಷ ಜಾತಿ, ವೈಯಕ್ತಿಕ ಭಿನ್ನಾಭಿಪ್ರಾಯ ಮೀರಿ ಜನರು ಸಂಘಟಿತರಾಗಿದ್ದೇವೆ. ಈಗ ಗ್ರಾಪಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು ಮುಂದೆ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟಕ್ಕೆ ಇಂದು ನಾಂದಿ ಹಾಡಲಿದೆ ಎಂದರು.
ವಿವಿಧ ಭಾಗದ ಗ್ರಾಮಸ್ಥರು ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಪಂಚಾಯ್ತಿ ಮುಂಭಾಗದಲ್ಲಿ ಸಭೆ ನಡೆಸಿ ನೆಟ್‌ವರ್ಕ್ ನೀಡಿ ಎಂದು ಘೋಷಣೆ ಕೂಗಿದರು. ಪಂಚಾಯ್ತಿ ಅಧ್ಯಕ್ಷ ಮಂಜಪ್ಪ, ಸದಸ್ಯರಾದ ರಾಮಚಂದ್ರ ಹಾಬಿಗೆ, ಆವಿನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸು ಧೀಂದ್ರ, ಭೋಗರಾಜ್, ಹೋರಾಟ ಸಮಿತಿಯ ಮುಖ್ಯಸ್ಥರಾದ ಚರಣ್, ಸುದೇಶ್, ಶಶಿಕಾಂತ್, ಮಂಜು, ದಿನೇಶ್, ಸುಜಿತ್, ಜಯಂತ್, ಪ್ರಸನ್ನ ಭಟ್, ವಿಘ್ನೇಶ್, ಚೇತನ್, ಪ್ರಶಾಂತ್, ಪ್ರವೀಣ್, ಪ್ರದೀಪ್, ಕಪ್ಪದೂರು, ನೆಲ್ಲಿಬೀಡು, ಕಸಗೋಡು, ಮರಾಠಿ, ತಲನೀರು, ಹೊಸಕೊಪ್ಪದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.