Advertisement

ಬಿಎಸ್‌ವೈ ಕಾಲೆಳೆಯುವುದು ನಿಲ್ಲಿಸಿ

06:44 PM Jul 20, 2021 | Shreeraj Acharya |

ಶಿರಾಳಕೊಪ್ಪ: ವೀರಶೈವ ಸಮಾಜ ಹಾಗೂ ಬಿಜೆಪಿಯನ್ನು ರಾಜ್ಯದಲ್ಲಿ ಗಟ್ಟಿಮುಟ್ಟಾಗಿ ಕಟ್ಟಿದವರು ಬಿ.ಎಸ್‌. ಯಡಿಯೂರಪ್ಪ. ಅವರ ಮುಖ್ಯಮಂತ್ರಿ ಅವ ಧಿಯನ್ನು ಪೂರ್ಣಗೊಳಿಸಲು ದೆಹಲಿ ನಾಯಕರು ಸಹಕಾರ ನೀಡಬೇಕು. ಈ ಮೂಲಕ ಅವರಿಗೆ ಗೌರವಯುತವಾದ ಬೀಳ್ಕೊಡುಗೆ ನೀಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

Advertisement

ಪಟ್ಟಣದ ಎಸ್‌ಜೆಪಿ ಐಟಿಐ ಕಾಲೇಜಿಗೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ಸಮಾಜದ ಪ್ರಶ್ನಾತೀತ ಹಾಗೂ ಪತೀತ ನಾಯಕ ಯಡಿಯೂರಪ್ಪ. ಅವರ ಕಾಲೆಳೆಯುವ ಕೆಲಸವನ್ನು ತಮ್ಮ ಸಮಾಜದ ಕೆಲವು ರಾಜಕೀಯ ನಾಯಕರು ಮಾಡುತ್ತಿದ್ದು, ಅವರಿಗೂ ಕೂಡ ಮುಂದೆ ಅವಕಾಶಗಳು ಲಭಿಸಲಿವೆ. ಈಗ ಕಾಲು ಎಳೆಯುವ ಕೆಲಸ ಬಿಟ್ಟು ಎಲ್ಲರೂ ಯಡಿಯೂರಪ್ಪ ಅವರ ಜತೆಗೆ ಕೈ ಜೋಡಿಸುವ ಮೂಲಕ ಅವರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿಕಾರಿಪುರಕ್ಕೂ, ಶ್ರೀಶೈಲಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಹುಟ್ಟಿದ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭುಗಳು ಶ್ರೀಶೈಲದಲ್ಲಿ ಐಕ್ಯವಾದರು. ಅಕ್ಕಮಹಾದೇವಿ ಜನ್ಮಸ್ಥಳವಾದ ಉಡುತಡಿಯಲ್ಲಿ 75 ಅಡಿ ಎತ್ತರದ ಬೃಹತ್‌ ಗಾತ್ರದ ಅಕ್ಕಮಹಾದೇವಿ ಪುತ್ಥಳಿಯನ್ನು ಮತ್ತು 1 ಕಿಮೀ ಸುತ್ತಲೂ ದೆಹಲಿಯ ಅಕ್ಷರಧಾಮ ಮಾಧರಿಯಲ್ಲಿ ದೋಣಿ ವಿಹಾರವನ್ನು ಮಾಡಲಾಗುತ್ತಿದೆ. ಇದರಲ್ಲಿ ನಾಡಿನ ಎಲ್ಲಾ ಶಿವಶರಣರ ಚರಿತ್ರೆಯನ್ನು ತಿಳಿಸುವ ಮಹತ್ವದ ಕಾಮಗಾರಿ ಭರದಿಂದ ಸಾಗಿದೆ. ತಾಳಗುಂದ, ಉಡುಗಣಿ ಹಾಗೂ ಹೊಸೂರು ಹೋಬಳಿಗಳ ಏತ ನೀರಾವರಿ ಯೋಜನೆಯ ಕೆಲಸ ಕೂಡ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಶಿಕಾರಿಪುರಕ್ಕೆ ರೈಲು ತರುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣ ನೀಡಿದ್ದು ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಕೆಲಸ ಕೂಡ ಮುಗಿದಿದೆ ಎಂದರು.

ತೊಗರ್ಸಿ ಮಳೇಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಶೈಲ ಪೀಠದ ಪೂರ್ವದ ಸ್ವಾಮೀಜಿ ಅವರಿಗೆ ಯಡಿಯೂರಪ್ಪ ಅವರ ಜಾತಕವನ್ನು ಮೈತ್ರಾದೇವಿಯವರ ತಂದೆ ತೋರಿಸಿದಾಗ ಧೈರ್ಯವಾಗಿ ಮದುವೆ ಮಾಡಿ, ಈತ ಮುಂದೆ ಬಹುದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ ಎಂದೂ ಭವಿಷ್ಯ ನುಡಿಯುವ ಮೂಲಕ ಮದುವೆಗೆ ಒಪ್ಪಿಸಿದ್ದರಂತೆ. ಅದೇ ರೀತಿ ಬಿ.ವೈ. ರಾಘವೇಂದ್ರ ಪುರಸಭೆ ಸದಸ್ಯರಾಗಿದ್ದಾಗ ಲೋಕಸಭೆಗೆ ಸ್ಪರ್ಧಿಸುವಂತೆ ಮೊದಲು ಯಡಿಯೂರಪ್ಪ ಅವರಿಗೆ ಸ್ವಾಮೀಜಿಯವರೇ ನಿರ್ದೇಶನ ನೀಡಿದ್ದರು.

ಈಗ ಭವಿಷ್ಯ ಅಕ್ಷರಶಃ ನಿಜವಾಗಿದೆ ಎಂದೂ ಸ್ವಾಮೀಜಿ ಅವರನ್ನು ಸ್ಮರಿಸಿದರು. ಸಭೆಯಲ್ಲಿ ಅಭಿನವ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಎಸ್‌ಜೆಪಿ ಕಾರ್ಯದರ್ಶಿ ಡಾ| ಮುರುಘರಾಜ್‌, ಟ್ರಸ್ಟಿಗಳಾದ ಎಚ್‌.ಎಂ. ಗಂಗಮ್ಮ, ಸುನಂದಮ್ಮ ರುದ್ರಪ್ಪ, ಕೆಎಸ್‌ಡಿಎಲ್‌ ನಿರ್ದೇಶಕಿ ನಿವೇದಿತಾರಾಜು, ಟೌನ್‌ ಬಿಜೆಪಿ ಅಧ್ಯಕ್ಷ ಮಂಚಿ ಶಿವಣ್ಣ, ಪುರಸಭಾ ಮಾಜಿ ಅಧ್ಯಕ್ಷ ಎ.ಸಿ. ಚನ್ನವೀರಪ್ಪ, ಪ್ರಾಂಶುಪಾಲರಾದ ರುದ್ರಯ್ಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next