Advertisement

ಪತ್ರಕರ್ತರು ಬದ್ಧತೆಯೊಂದಿಗೆ ಜನರ ಧ್ವನಿಯಾಗಬೇಕು

06:38 PM Jul 20, 2021 | Shreeraj Acharya |

ಶಿವಮೊಗ್ಗ: ಪತ್ರಕರ್ತರು ತಮ್ಮತನ ಕಳೆದುಕೊಳ್ಳದೇ ಮಾನವೀಯತೆಯ ಅಡಿಯಲ್ಲಿ ಸ್ಪಂದಿಸುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಹೇಳಿದರು. ಸೋಮವಾರ ಶಿವಮೊಗ್ಗ ಪ್ರಸ್‌ಟ್ರಸ್‌ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪತ್ರಕರ್ತರು ಸತ್ಯ ಶೋಧಕರಾಗಬೇಕು. ಇಂದಿನ ಹೊಸ ತಂತ್ರಜ್ಞಾನದ ಮತ್ತು ರಾಜಕಾರಣದ ಆಮಿಷಗಳಿಗೆ ಒಳಗಾಗಿ ಕಳೆದು ಹೋಗಬಾರದು ಎಂದ ಅವರು, ಶಿವಮೊಗ್ಗ ಪತ್ರಿಕೋದ್ಯಮಕ್ಕೆ ಹೆಸರಾದ ಜಿಲ್ಲೆ. ಇಲ್ಲಿ ಸಮಾಜವಾದಿ ಚಳವಳಿ ಸೇರಿದಂತೆ ಅನೇಕ ಜನಾಂದೋಲನಗಳು ಪತ್ರಿಕೋದ್ಯಮದ ಜತೆಜತೆಯೇ ಬೆಳೆದುಬಂದಿದೆ ಎಂದರು.

ಪತ್ರಕರ್ತರು ಸದಾ ಕ್ರಿಯಾಶೀಲರು, ಧೈರ್ಯವಂತರೂ ಆಗಿರಬೇಕು. ಸ್ಥಳೀಯ ಸಮಸ್ಯೆಗಳ ಪ್ರತಿಧ್ವನಿಯಾಗಿರಬೇಕು. ಕೇವಲ ಸಾಮಾನ್ಯ ಸುದ್ದಿಗಳನ್ನಷ್ಟೇ ಗಮನಿಸದೇ ತನಿಖೆ ಮತ್ತು ಹೊಸ ವಿಷಯಗಳತ್ತ, ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕು. ಈಗಿನ ಡಿಜಿಟಲ್‌ ಯುಗದಲ್ಲಿ ಹಲವು ಬದಲಾವಣೆಗಳಾಗಿದೆ. ಇವುಗಳ ಹೊರತಾಗಿಯೂ ಪತ್ರಕರ್ತರು ಕ್ರಿಯಾಶೀಲರಾಗಿರಬೇಕೆಂದು ಕರೆ ನೀಡಿದರು. ಪ್ರಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌ ಮಾತನಾಡಿ, ಪತ್ರಕರ್ತರು ಈಗ ಸಂಕಷ್ಟದಲ್ಲಿದ್ದಾರೆ.

ಅವರು ವಿವಿಧ ಕಾರಣಕ್ಕಾಗಿ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಿದ್ದಾರೆ. ಯುವ ಪತ್ರಕರ್ತರಿಗೆ ಅಧ್ಯಯನದ ಕೊರತೆ ಇದೆ. ಇದೆಲ್ಲವನ್ನೂ ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರು ಗಮನಿಸಬೇಕು ಎಂದರು. ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕೋದ್ಯಮ ಫ್ಯಾಷನ್‌ ಆಗಬಾರದು. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಬದಲಾವಣೆಗಳಾಗಿದೆ. ಹೊಣೆಗಾರಿಕೆ ಹೆಚ್ಚಿದೆ ಮತ್ತು ಪತ್ರಕರ್ತರೂ ಕೂಡಾ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂಘ ಇವರ ನೆರವಿಗೆ ಬಂದಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಕೆ.ವಿ. ಶಿವಕುಮಾರ್‌ ಮಾತನಾಡಿ, ಪತ್ರಕರ್ತರು ಬರವಣಿಗೆಯಲ್ಲಿ ಸೋಲು ಕಾಣುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಬದ್ಧತೆ ಕೂಡಾ ಬದಲಾಗುತ್ತಿದೆ. ಸಂಕಷ್ಟದ ಸ್ಥಿತಿಯಲ್ಲಿ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಎರಡೂ ಇದೆ. ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಪತ್ರಿಕೋದ್ಯಮದಲ್ಲಿ ಉತ್ತಮವಾದ ವಾತಾವರಣ ಮರುಸ್ಥಾಪನೆಯಾಗಬೇಕಿದೆ ಎಂದರು.

Advertisement

ಟೆಲೆಕ್ಸ್‌ ರವಿಕುಮಾರ್‌ ಮಾತನಾಡಿ, ಪತ್ರಕರ್ತರಿಗೆ ರಕ್ಷಣೆಯೂ ಬೇಕಾಗಿದೆ ಮತ್ತು ಆತ್ಮಸಾಕ್ಷಿಯೂ ಬೇಕಾಗಿದೆ ಎಂದರು. ಪತ್ರಕರ್ತ ಗೋಪಾಲ್‌ ಯಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ನಿರೂಪಿಸಿದರು. ಸಂತೋಷ್‌ ಕಾಚಿನಕಟ್ಟೆ ವಂದಿಸಿದರು. ನಾಗರಾಜ್‌ ನೇರಿಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next