ಸಾಗರ: ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ನಿಂದನೆಯನ್ನು ಬಲವಂತವಾಗಿ ತುರುಕಿರುವ ಕ್ರಮವನ್ನು ಖಂಡಿಸಿ ಬ್ರಾಹ್ಮಣ ನಿಂದನೆ ಮಾಡಿರುವ ಪಠ್ಯದ ಭಾಗವನ್ನು ತಕ್ಷಣ ತೆಗೆಯುವಂತೆ ಒತ್ತಾಯಿಸಿ ಸೋಮವಾರ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ವಿಪ್ರ ಸಂಘಟನೆಗಳ ಆಶ್ರಯದಲ್ಲಿ ಉಪ ವಿಭಾಗಾ ಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತ ನಾಡಿದ ಮಹಾಸಭಾದ ಪ್ರಧಾನ ವಕ್ತಾರ ಮ. ಸ. ನಂಜುಂಡಸ್ವಾಮಿ, ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣರು ಮತ್ತು ಪುರೋಹಿತರ ಬಗ್ಗೆ ಸಮಾಜದ ಕೆಲವು ಅಯೋಗ್ಯರು ಇಲ್ಲಸಲ್ಲದ ಮಾತುಗಳನ್ನು ಆಡುವ ಮೂಲಕ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಕ್ರಮವನ್ನು ಮಹಾಸಭಾ ಮತ್ತಿತರ ವಿಪ್ರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಪಠ್ಯಪುಸ್ತಕದಲ್ಲಿ ಬ್ರಾಹ್ಮಣರು, ಪುರೋಹಿತರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಚಿತ್ರಿಸಿರುವುದು ವಿಷಾದನೀಯ. ತಕ್ಷಣ ಪಠ್ಯಪುಸ್ತಕದಲ್ಲಿ ಬರೆದಿರುವುದನ್ನು ವಾಪಸ್ ಪಡೆಯಬೇಕು.
ಪುಸ್ತಕವನ್ನು ಮರುಮುದ್ರಣ ಮಾಡಬಾರದು. ಬ್ರಾಹ್ಮಣರ ಸಹನೆಯನ್ನು ದುರುಪಯೋಗಪಡಿಸಿ ಕೊಳ್ಳುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ವಿಪ್ರ ವೈದಿಕ ಪರಿಷತ್ ಅಧ್ಯಕ್ಷ ನವೀನ್ ಜೋಯ್ಸ ಮಾತನಾಡಿ, ಶಿಕ್ಷಣ ಎನ್ನುವುದು ದೊಡ್ಡ ಅಭಿಯಾನ. ಜ್ಞಾನಧಾರೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕೊಂಡೊಯ್ಯುವ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಪರಿಪಾಠ ಅತ್ಯಂತ ಹೇಯವಾದದ್ದು.
ಪಠ್ಯಪುಸ್ತಕಗಳು ಸಾಮರಸ್ಯ ಬಿತ್ತುವ ಬದಲು ಸಂಘರ್ಷ ಸೃಷ್ಟಿಸುವ ಕೆಲಸ ಮಾಡಬಾರದು. ಪುರದ ಹಿತ ಕಾಪಾಡುವ ಪುರೋಹಿತರು, ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿದರೆ ಸಂಘರ್ಷ ಸೃಷ್ಟಿಯಾಗುತ್ತದೆ. ದ್ವಿತೀಯ ಪಿಯುಸಿ ಪಠ್ಯದಲ್ಲಿನ ಭಾರತದ ಹೊಸ ಧರ್ಮದ ಉದಯ ಪಠ್ಯ ಭಾಗವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಸ್ನೇಹಸಾಗರ ಮಹಿಳಾ ಮಂಡಳಿ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ ಮಾತನಾಡಿ, ಒಂದು ಧರ್ಮ ಇನ್ನೊಂದು ಧರ್ಮವನ್ನು ಅವಹೇಳನಕಾರಿಯಾಗಿ ಚಿತ್ರಿಸುವುದೇ ಅತ್ಯಂತ ಕೆಟ್ಟ ಸಂಸ್ಕೃತಿ.
ಅಂತಹದ್ದರಲ್ಲಿ ಲಾಗಾಯ್ತಿನಿಂದ ಸಮಾಜದ ಹಿತ ಕಾಯುವ ಕೆಲಸ ಮಾಡುತ್ತಿರುವ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದ್ದಾಗಿ ಚಿತ್ರಿಸಿದರೆ ಮುಂದಿನ ಪೀಳಿಗೆ ಸಮುದಾಯವನ್ನು ನೋಡುವ ದೃಷ್ಟಿಯೇ ಬದಲಾಗುವ ಸಾಧ್ಯತೆ ಇದೆ ಎಂದರು. ವೈ. ಮೋಹನ್, ರಾಘವೇಂದ್ರ ಭಟ್, ಕೆ.ಎನ್. ಶ್ರೀಧರ್, ಹು.ಭಾ. ಅಶೋಕ್, ಮುರಳೀಧರ ಹತ್ವಾರ್, ಶರಾವತಿ ಸಿ. ರಾವ್, ಜ್ಯೋತಿ ನಂಜುಂಡಸ್ವಾಮಿ, ಬದರಿನಾಥ್, ವಿನಾಯಕ ಜೋಯ್ಸ, ಪ್ರಭಾವತಿ ಎಸ್.ಕೆ., ವಿ.ಗಣೇಶ್ ಇನ್ನಿತರರು ಇದ್ದರು.