Advertisement

ಈ ಕೊಳೆಗೇರಿ ಕಂಡರೆ ಕೊರೊನಾಕ್ಕೂ ಭಯ!

10:02 PM Jun 24, 2021 | Shreeraj Acharya |

„ಶರತ್‌ ಭದ್ರಾವತಿ

Advertisement

ಶಿವಮೊಗ್ಗ: ಅಸ್ವತ್ಛತೆ, ಸಾಮಾಜಿಕ ಅಂತರವಿಲ್ಲದ ಕಡೆ ಕೊರೊನಾ ವೈರಸ್‌ ಬೇಗ ದಾಳಿ ಮಾಡುತ್ತವೆಯಲ್ಲದೆ ಶರವೇಗದಲ್ಲಿ ಹರಡುತ್ತವೆ ಎಂಬುದು ಎಲ್ಲರೂ ಅರಿತ ಸಂಗತಿ. ಆದರೆ ಮಲೆನಾಡು ಶಿವಮೊಗ್ಗದ ಒಂದು ಪ್ರದೇಶ ಇದಕ್ಕೆ ತದ್ವಿರುದ್ಧವಾಗಿದೆ.

ಅಸ್ವತ್ಛತೆ, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸ್‌ ಇದ್ಯಾವುದನ್ನೂ ಕಾಣದ ಇಲ್ಲಿ ಈ ವರೆಗೂ ಕೊರೊನಾ ಕಾಲಿಟ್ಟಿಲ್ಲ. ಹೌದು, ಇಂಥದ್ದೊಂದು ಪ್ರದೇಶ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಬಳಿ ಇದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಅದು ಹರಡದೇ ಇರಲು ಎಲ್ಲೆಡೆ ಮುಂಜಾಗೃತೆ ವಹಿಸಲಾಗುತ್ತಿದೆ. ಅಲ್ಲದೆ ಸ್ಲಂಗಳಲ್ಲಿ ಸೋಂಕು ಹರಡಿದರೆ ಎಲ್ಲರ ಕಥೆ ಮುಗಿದೇ ಹೋಯಿತು ಎಂದೇ ಭಾವಿಸಲಾಗುತ್ತದೆ. ಆದರೆ ಇಲ್ಲಿರುವ 45 ಕುಟುಂಬಗಳ ಹತ್ತಿರ ಕೊರೊನಾ ಸುಳಿದಿಲ್ಲ.

ಶಿವಮೊಗ್ಗ ನಗರದಲ್ಲಿ ಕೊರೊನಾ ಒಂದನೇ ಅಲೆಯೂ ಜೋರಾಗಿತ್ತು. ಎರಡನೇ ಅಲೆಯಂತೂ ನಗರವಾಸಿಗಳನ್ನು ಅಕ್ಷರಶಃ ಹೈರಾಣಾಗಿಸಿದೆ. ಸೋಂಕು ಇನ್ನೂ ಸಂಪೂರ್ಣ ಇಳಿಮುಖವಾಗಿಲ್ಲ. ಎರಡನೇ ಅಲೆಯಲ್ಲಿ ಸಾವು-ನೋವು ಹೆಚ್ಚಿದೆ. ಹೀಗಾಗಿ ಎಲ್ಲರೂ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಸ್ಯಾನಿಟೈಸರ್‌, ಮನೆಯಲ್ಲೂ ಮಾಸ್ಕ್ ಹಾಕಿ ಓಡಾಡುವವರೂ ಇದ್ದಾರೆ. ಆದರೆ ನಗರದ ಸಹ್ಯಾದ್ರಿ ಕಾಲೇಜು ಬಳಿ ಇರುವ ಈ ಪ್ರದೇಶ ಮಾತ್ರ ಕೊರೊನಾ ಮುಕ್ತವಾಗಿದೆ.

ಪಕ್ಕಾ ಸ್ಲಂ: ಇದೊಂದು ಪಕ್ಕಾ ಕೊಳೆಗೇರಿ. ಇಲ್ಲಿ ಚರಂಡಿ ಇಲ್ಲ, ಬೀದಿದೀಪ ಇಲ್ಲ, ಕುಡಿವ ನೀರು ಕೂಡ ಇಲ್ಲ, ಒಂದರ ಪಕ್ಕ ಒಂದು ಜೋಪಡಿ, 45 ಕುಟುಂಬಗಳದ್ದೂ ಗುಡಿಸಲಿನಲ್ಲೇ ವಾಸ. ಹಂದಿ, ನಾಯಿಗಳಿಗಂತು ಲೆಕ್ಕವೇ ಇಲ್ಲ. ಕಳೆದ 30 ವರ್ಷಗಳಿಂದ ಇಲ್ಲಿ ವಾಸವಾಗಿರುವ ಎಲ್ಲ ಕುಟುಂಬಗಳು ಈ ಹಿಂದೆ ದೇವರನ್ನು ಹೊತ್ತು, ಬೆನ್ನಿಗೆ ಚಾಟಿಯಲ್ಲಿ ಹೊಡೆದುಕೊಂಡು ಭಿಕ್ಷೆ ಬೇಡಿ ಬದುಕು ನಡೆಸುತ್ತಿದ್ದವು.

Advertisement

ಕಾಲಾನಂತರ ಈ ಕುಲಕಸುಬು ಬಿಟ್ಟು ಕೂದಲು ಖರೀದಿ, ರಿಪೇರಿ, ಗುಜರಿ ವ್ಯಾಪಾರದಲ್ಲಿ ತೊಡಗಿವೆ. ಮೊದಲಿನಿಂದಲೂ ಅಲ್ಲಿ ಇಲ್ಲಿ ಟೆಂಟ್‌ ಹಾಕಿಕೊಂಡು ವಾಸ ಮಾಡುತ್ತಿದ್ದ ಇವರಿಗೆ ಈಗಲೂ ಸ್ವಂತ ಊರೂ ಇಲ್ಲ. ಸೂರೂ ಇಲ್ಲ. ತೆಲುಗು ಬಲ್ಲವರಾಗಿದ್ದರಿಂದ ಆಂಧ್ರ ಕಡೆಯವರು ಎಂದು ಅಂದಾಜಿಸಬಹುದು. 40 ವರ್ಷದ ಹಿಂದೆ ನಗರದ ಮಹಾದೇವಿ ಟಾಕೀಸ್‌ ಬಳಿ ವಾಸಿಸುತ್ತಿದ್ದ ಇವರನ್ನು ರೈಲ್ವೆ ಇಲಾಖೆ ಒಕ್ಕಲೆಬ್ಬಿಸಿತು. ಅವರಿಗೆ ಬೇರೆ ಕಡೆ ಭೂಮಿ ಕೊಡಲಾಯಿತಾದರೂ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಸಹ್ಯಾದ್ರಿ ಕಾಲೇಜು ಬಳಿಯ ಖಾಲಿ ಜಾಗದಲ್ಲಿ ಬಂದು ನೆಲೆ ನಿಂತಿದ್ದಾರೆ.

ಕಳೆದ ವರ್ಷ ಅನುಷಾ ಎಂಬ ಯುವತಿ ಮೊದಲ ಬಾರಿ ಎಸ್ಸೆಸ್ಸೆಲ್ಸಿ ತೇರ್ಗಡೆಗೊಂಡಿದ್ದಾಳೆ. ಎಲ್ಲರೂ ಅರ್ಧಕ್ಕೆ ಕಲಿಕೆ ಮೊಟಕುಗೊಳಿಸಿ ತಂದೆತಾಯಿ ಜತೆ ಕೂಲಿಗೆ ಹೋಗುತ್ತಿದ್ದಾರೆ. ಅನಕ್ಷರಸ್ಥರಾದ ಕಾರಣ ತಮಗೆ ಬೇಕಾದ್ದನ್ನು ಕೇಳಿ ಪಡೆಯುವ ಜ್ಞಾನವೂ ಅವರಿಗಿಲ್ಲ. ಕೆಲ ಸಂಘ-ಸಂಸ್ಥೆಗಳು ಅವರ ಪರ ಹೋರಾಟ ಮಾಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿವೆ. ಸುಳಿಯದ ಸೋಂಕು: ಯಾವ ಸೌಲಭ್ಯವೂ ಇಲ್ಲದ ಸ್ವತ್ಛತೆಯನ್ನು ಹುಡುಕಬೇಕಾದ ಇಂತಹ ಪ್ರದೇಶದಲ್ಲಿ ಕೊರೊನಾ ಕಾಲಿಟ್ಟಿಲ್ಲ ಎಂಬುದು ಮಾತ್ರ ಅಚ್ಚರಿಯ ಸಂಗತಿ. ಕೊರೊನಾ ಮೊದಲನೇ ಅಲೆಯಲ್ಲಿ ಒಬ್ಬ ಯುವಕನಿಗೆ ಪಾಸಿಟಿವ್‌ ಬಂದಿದ್ದ ಕಾರಣ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿತ್ತು. ಮೂರೇ ದಿನಕ್ಕೆ ಅವರನ್ನು ಮನೆಗೆ ಕಳುಹಿಸಲಾಯಿತು.

ಅದು ಹೊರತುಪಡಿಸಿದರೆ ಈ ವರೆಗೂ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಸದಾ ಮಳೆ, ಗಾಳಿ, ಬಿಸಿಲಿಗೆ ದೇಹ ಒಡ್ಡಿಕೊಂಡಿರುವ ಇವರು ಕಾಲಿಗೆ ಚಪ್ಪಲಿ ಧರಿಸಲ್ಲ. ನೆಲದ ಮೇಲೆ ಊಟ, ನಿದ್ದೆ ಕೂಡ. ಆದರೂ ಇಲ್ಲಿರುವ ವೃದ್ಧರು ಮಕ್ಕಳಾದಿಯಾಗಿ ಯಾರಿ ಬಳಿಯೂ ಸೋಂಕು ಸುಳಿದಿಲ್ಲ. ವಂಶಪಾರಂಪರ್ಯವಾಗಿ ಅವರ ದೇಹದಲ್ಲಿರುವ ಶಕ್ತಿ, ಮತ್ತು ಅತಿ ಹೆಚ್ಚು ಖಾರ ತಿನ್ನುವ ಇವರಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚು ಮಾಡಿದೆ ಎನ್ನುತ್ತಾರೆ ತಜ್ಞ ವೈದ್ಯರು.

Advertisement

Udayavani is now on Telegram. Click here to join our channel and stay updated with the latest news.

Next