ಭದ್ರಾವತಿ: ತರೀಕೆರೆ ರಸ್ತೆಯಲ್ಲಿರುವ ನಯನ ಆಸ್ಪತ್ರೆಯ (ನರ್ಸಿಂಗ್ ಹೋಂ) ವೈದ್ಯೆ ಡಾ| ವೀಣಾ ಎಸ್. ಭಟ್ ಉತ್ತಮ ಯೋಗ ಗುರುವೂ ಹೌದು. ತಮ್ಮ ಆಸ್ಪತ್ರೆಯ ಮೇಲೆ ಕಟ್ಟಿರುವ “ಅನಸೂಯಮ್ಮ ಐತಾಳ್’ ಸಭಾಂಗಣದಲ್ಲಿ ಕಳೆದ 15 ವರ್ಷಗಳಿಂದ ಉಚಿತ ಯೋಗಾಸನ ತರಬೇತಿ ನೀಡುತ್ತಿದ್ದಾರೆ.
ಜೊತೆಗೆ ಪತಂಜಲಿ ಸಂಸ್ಥೆಯಿಂದ ನೂರಾರು ಜನರಿಂದ ಯೋಗ ಪರೀಕ್ಷೆ ಬರೆಯಿಸಿ ಅದರಲ್ಲಿ ತೇರ್ಗಡೆಯಾದವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಚಿತವಾಗಿ ಯೋಗ ತರಗತಿ ನಡೆಸುವಂತೆ ಮಾಡಿ ತಾಲೂಕಿನಾದ್ಯಂತ ಯೋಗ ಶಿಕ್ಷಣ ಅಭಿಯಾನ ನಡೆಯಲು ಕಾರಣೀಕರ್ತರಾಗಿದ್ದಾರೆ. ಇವರು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋನೆಯಡಿ ಸಹ ಯೋಗಶಿಕ್ಷಣ ನೀಡಿ ಸರ್ಟಿಕೇಟ್ ಪಡೆಯಲು ಅವಕಾಶ ಕಲ್ಪಿಸಿ ಸದ್ದಿಲ್ಲದೆ ಯೋಗ ವಿದ್ಯೆ ಎಲ್ಲರಿಗೂ ತಲುಪುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ನೂರಾರು ಜನ ಇವರಿಂದ ಯೋಗ ಪಾಠ ಕಲಿಯುತ್ತಾ ಪ್ರಯೋಜನ ಪಡೆದಿದ್ದಾರೆ. ಡಾ| ವೀಣಾ ಭಟ್ ತಾವು ಯೋಗ ಪಾಠ ಮಾಡುವುದಲ್ಲಿದೆ ರಾಜ್ಯದ ವಿವಿಧೆಡೆಗಳಲ್ಲಿರುವ ನುರಿತ ಯೋಗ ತಜ್ಞರನ್ನು ಕರೆಸಿ ಅವರಿಂದ ಉಚಿತವಾಗಿ ಇಲ್ಲಿನ ಯೋಗಾಸಕ್ತರಿಗೆ ತರಬೇತಿ ನೀಡುವ ಕೆಲಸ ಸಹ ಮಾಡುತ್ತಿದ್ದಾರೆ.
ಲಾಕ್‌ಡೌನ್‌ನಲ್ಲಿಯೂ ಸಹ ಇವರು ಆನ್‌ಲೈನ್ ಮೂಲಕ ತರಬೇತಿ ನೀಡುತ್ತಿರುವುದು ಇವರ ಯೋಗಸೇವೆಗೆ ಸಾಕ್ಷಿಯಾಗಿದೆ. ಸ್ತ್ರೀರೋಗ ತಜ್ಞೆಯಾಗಿರುವ ಇವರು ತಮ್ಮ ಬಿಡುವಿಲ್ಲದ ವೈದ್ಯಕೀಯ ಕಾರ್ಯಗಳ ಮಧ್ಯೆಯೂ ಯೋಗ ತರಬೇತಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ತೆರಳಿ ವೈದ್ಯಕೀಯ, ಯೋಗ ಮುಂತಾದ ಹಲವು ವಿಷಯಗಳ ಕುರಿತು ಉಪನ್ಯಾಸ ಸಹ ನೀಡುತ್ತಾ ಬಂದಿದ್ದಾರೆ.
ಬೊಜ್ಜಿಗಿದೆ ಪರಿಹಾರ, ತಾರುಣ್ಯದ ತಲ್ಲಣಗಳು, ಪ್ರಶ್ನೋತ್ತರ ಮಾಲಿಕೆ, ಋತುಚಕ್ರದ ಸುತ್ತಮುತ್ತ ಎಂಬ ಹಲವು ಉಪಯುಕ್ತ ಪುಸ್ತಕಗಳನ್ನು ಬರೆದು ಬಿಡುಗಡೆ ಮಾಡಿದ್ದಾರೆ. ರಾಜ್ಯದ ಪ್ರಸಿದ್ಧ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ಇವರ ಹಲವು ಲೇಖನಗಳು ಪ್ರಕಟವಾಗಿವೆ. ವೀಣಾ ಭಟ್ ಅವರ ಪತಿ ಡಾ| ಪಿ.ಆರ್. ಕುಮಾರಸ್ವಾಮಿ ನೇತ್ರ ತಜ್ಞರಾಗಿದ್ದು, ಪತ್ನಿಯ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ತಮ್ಮ ವಿದ್ಯಾರ್ಥಿ ಜೀವನದಿಂದಲೂ ಯೋಗದಲ್ಲಿ ಆಸಕ್ತರಾಗಿ ಅದನ್ನು ಕಲಿತು ಉತ್ತಮ ಯೋಗಪಟುವಾಗಿದ್ದಲ್ಲದೆ ಇಂದಿಗೂ ಅದನ್ನು ಉಳಿಸಿಕೊಂಡು ಯೋಗ ಶಿಕ್ಷಣವನ್ನು ಉಚಿತವಾಗಿ ನೂರಾರು ಜನರಿಗೆ ಧಾರೆ ಎರೆಯುತ್ತಾ ಬಂದಿದ್ದಾರೆ.