ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಆರ್ಭಟ ಜೋರಾಗಿದ್ದು ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯ ಹಲವು ತಾಲೂಕಿನಲ್ಲಿ ಮಳೆ ಆರ್ಭಟಿಸುತ್ತಿದ್ದು, ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಎಲ್ಲೆಡೆ ಎಡೆಬಿಡದೇ ಮಳೆಯಾಗುತ್ತಿದೆ.
ಹೊಸನಗರದಲ್ಲಿ ಒಂದೇ ದಿನ ದಾಖಲೆಯ 33 ಸೆಂ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸುತ್ತಮುತ್ತ ಮಳೆ ಬಿರುಸಾಗಿದ್ದು, ಮೇಗರವಳ್ಳಿಯ ಮಾನಪ್ಪಗೌಡ ಎಂಬುವವರ ಮನೆ ಗೋಡೆ ಕುಸಿದಿದೆ. ಆಗುಂಬೆಯಲ್ಲಿ 200 ಮೀಟರ್‌ಗೂ ಅಧಿಕ ಮಳೆ ಸುರಿದಿದೆ.
ಲಿಂಗನಮಕ್ಕಿ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತ್ಯ ಧಿಕ ದಾಖಲೆಯ 33 ಸೆಂಮೀ ಮಳೆಯಾಗಿದೆ. ಹೊಸನಗರ ತಾಲೂಕಿನಾದ್ಯಂತ ಬುಧವಾರ ಒಂದೇ ದಿನ ರಾಜ್ಯದಲ್ಲೇ ಅತೀ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಿದೆ.
ಎಲ್ಲಿ , ಎಷ್ಟು ಮಳೆ?: ಗುರುವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡಂತೆ 24 ಗಂಟೆಯಲ್ಲಿ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲೇ ಅತ್ಯ ಧಿಕ 33 ಸೆಂ.ಮೀ. ದಾಖಲೆಯ ಮಳೆ ಯಾಗಿದೆ. ಉಳಿದಂತೆ ಲಿಂಗನಮಕ್ಕಿಯಲ್ಲಿ 172 ಮಿ.ಮೀ, ಯಡೂರು 125 ಮಿ.ಮೀ, ಚಕ್ರಾನಗರ 102 ಮಿ.ಮೀ, ಅರಸಾಳು 49.4 ಮಿ.ಮೀ, ರಿಪ್ಪನ್ ಪೇಟೆ 32.4 ಮಿ.ಮೀ, ಮಾಸ್ತಿಕಟ್ಟೆ 135 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 16.40 ಮಿಮೀ, ಭದ್ರಾವತಿ 9.20 ಮಿಮೀ, ತೀರ್ಥಹಳ್ಳಿ 77.40 ಮಿಮೀ, ಸಾಗರ 56.60 ಮಿಮೀ. ಶಿಕಾರಿಪುರ 15.20 ಮಿಮೀ, ಸೊರಬ 187.90 ಮಿಮೀ, ಹೊಸನಗರ ತಾಲೂಕಿನಲ್ಲಿ 320.80 ಮಿಮೀ ಮಳೆಯಾಗಿದೆ.
ಲಿಂಗನಮಕ್ಕಿ ಜಲಾಶಯಕ್ಕೆ 31,676 ಕ್ಯೂಸೆಕ್ ಒಳಹರಿವು ಇದ್ದು ಪ್ರಸ್ತುತ 1759 ಅಡಿ ನೀರಿದೆ. ಭದ್ರಾಗೆ 12,557 ಕ್ಯೂಸೆಕ್ ಒಳಹರಿವು ಇದ್ದು ಪ್ರಸ್ತುತ 144.60 ಅಡಿ ನೀರಿದೆ. ತುಂಗಾ ಜಲಾಶಯದಿಂದ 33,700 ಕ್ಯೂಸೆಕ್ ನೀರು ಹೊರಬಿಡಲಾಗುತಿದೆ.