ಹೊಸನಗರ: ಹುಲಿಕಲ್- ಬಾಳೆಬರೆ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸಂಚಾರಕ್ಕೆ ಚಾಲನೆ ನೀಡಿದರು.
ಘಾಟ್ ರಸ್ತೆ ಮಾರ್ಗ ರೂ.4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಸಂಚಾರ ನಿಷೇಧಿಸಲಾಗಿತ್ತು. ಜೂ.5 ರಂದು ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ನಿಷೇಧವನ್ನು ಜೂ.15 ರ ತನಕ ಮುಂದೂಡಲಾಗಿತ್ತು. ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಚಾರ ಮುಕ್ತವಾಗಿದೆ. ಹುಲಿಕಲ್ ಘಾಟ್‌ನ ಚಂಡಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ಮರು ಸಂಚಾರಕ್ಕೆ ಶಾಸಕ ಆರಗ ಜ್ಞಾನೇಂದ್ರ ಅ ಧಿಕೃತ ಚಾಲನೆ ನೀಡಿದರು.
ಈ ವೇಳೆ ಉಪಸ್ಥಿತರಿದ್ದ ಸ್ಥಳೀಯರು ಹುಲಿಕಲ್ ಘಾಟ್ ಜನಸಾಮಾನ್ಯರ ಘಾಟ್ ರಸ್ತೆಯಾಗಿದ್ದು ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ಅಲ್ಲದೆ ವೀಕ್ಷಣಾ ಸ್ಥಳ, ಬಾಳೆಬರೆ ಫಾಲ್ಸ್, ಕಂಚುಕಲ್ಲಬ್ಬಿ ಫಾಲ್ಸ್ ಅನ್ನು ಅಭಿವೃದ್ಧಿ ಮಾಡುವ ಮುಖೇನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಆಗುಂಬೆ ಮಾರ್ಗದಲ್ಲಿ ರಾಜಕಾರಣಿಗಳು, ಅಧಿ ಕಾರಿಗಳು, ವಿವಿಐಪಿ ವ್ಯಕ್ತಿಗಳು ಹೆಚ್ಚು ಸಂಚರಿಸುವ ಕಾರಣ ಅಲ್ಲಿಯ ಅಭಿವೃದ್ಧಿಗೆ ಯಾವುದೇ ಶಿಫಾರಸು ಅಗತ್ಯವಿಲ್ಲ.
ಆದರೆ ಹುಲಿಕಲ್ ಘಾಟ್ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅಭಿವೃದ್ಧಿ ನನ್ನ ಜವಾಬ್ದಾರಿ: ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹುಲಿಕಲ್ ಘಾಟ್ ರಸ್ತೆ ಅಭಿವೃದ್ಧಿ ನನ್ನ ಬಯಕೆಯಾಗಿತ್ತು. ಈಗಾಗಲೇ 4 ಕೋಟಿ ರೂ. ವೆಚ್ಚದ ಅಭಿವೃದ್ಧಿ ಮಾಡಲಾಗಿದೆ. ಇನ್ನು 2 ಕೋಟಿ ವೆಚ್ಚದಲ್ಲಿ ಸಾಯಿಲ್ ನೈಲಿಂಗ್ ಕಾಮಗಾರಿ ಕೂಡ ನಡೆಯಲಿದೆ. ಇಲ್ಲಿಯ ಅಭಿವೃದ್ಧಿಯ ಬಗ್ಗೆ ಅಳುಕು ಬೇಡ. ನಿಮ್ಮ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಖೈರಗುಂದ ಗ್ರಾಪಂ ಅಧ್ಯಕ್ಷೆ ವೀಣಾ ಪುರುಷೋತ್ತಮ, ಲೋಕೋಪಯೋಗಿ ಇಲಾಖೆಯ ಎಇಇ ರಾಮಚಂದ್ರ, ನಿವೃತ್ತ ಎಇಇ ಶೇಷಪ್ಪ, ಸದಸ್ಯರಾದ ಕೆ.ಬಿ. ಕೃಷ್ಣಮೂರ್ತಿ, ಪ್ರಕಾಶ್, ಇಸ್ಮಾಯಿಲ್, ಪ್ರಮುಖರಾದ ಬಂಕ್ರಿಬೀಡು ಮಂಜುನಾಥ್, ರವೀಂದ್ರ ಪ್ರಭು, ಅನಂತಕುಮಾರ ಶೆಣೈ, ಶ್ರೀಧರ್ ಸುಳುಗೋಡು, ದೇವಳದ ಧರ್ಮದರ್ಶಿ ಮೋಹನ್ ನಂಬಿಯಾರ್ ಇತರರು ಇದ್ದರು.